ಬಿಜೆಪಿ ವಂಶಪಾರಂಪರ್ಯ, ಭ್ರಷ್ಟಾಚಾರದಿಂದ ಮುಕ್ತವಾಗಬೇಕು: ಯತ್ನಾಳ್
ಬೆಂಗಳೂರು: ವಂಶಪಾರಂಪರ್ಯ, ಭ್ರಷ್ಟಾಚಾರದಿಂದ ಪಕ್ಷ ಮುಕ್ತವಾಗಬೇಕೆಂಬುದೇ ನಮ್ಮ ಬೇಡಿಕೆ. ಬೇರೆ ಯಾವುದ ವೈಯಕ್ತಿಕ ಬೇಡಿಕೆಗಳಿಲ್ಲ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಹೇಳಿದ್ದಾರೆ.
ಬಿಜೆಪಿಯ ಆಂತರಿಕ ಭಿನ್ನಮತದ ನಡುವೆಯೇ ಹೊಸದಿಲ್ಲಿಗೆ ತೆರಳಿರುವ ಯತ್ನಾಳ್ ಮಾಧ್ಯಮದವರ ಪ್ರಶ್ನೆಗೆ ಈ ರೀತಿ ಪ್ರತಿಕ್ರಿಯಿಸಿದರು.
ನಾಯಕತ್ವ ಬದಲಾವಣೆ ಬೇಡಿಕೆಯಿಟ್ಟಿದ್ದಾರೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಯತ್ನಾಳ್, ನಮ್ಮ ಬೇಡಿಕೆ ಮುಂದಿಟ್ಟಿದ್ದೀವಿ, ಭಾವನೆಗಳನ್ನು ತಿಳಿದು ಹೈಕಮಾಂಡ್ ಧೈರ್ಯ ಮಾಡಬೇಕು ಎಂದು ಹೇಳಿದ್ದಾರೆ.
ಹೊಸ ಪಕ್ಷ ಕಟ್ಟುತ್ತಿರಾ ಎಂಬ ಪ್ರಶ್ನೆಗೆ, ಹೊಸ ಪಕ್ಷ ಕಟ್ಟುವ ಮೂರ್ಖತನಕ್ಕೆ ಕೈಹಾಕುವುದಿಲ್ಲ. ನಾವು ಅಷ್ಟು ಮೂರ್ಖರೂ ಅಲ್ಲ, ದಡ್ಡರೂ ಅಲ್ಲ ಎಂದು ಯತ್ನಾಳ್ ಉತ್ತರಿಸಿದರು.
ಪ್ರಾದೇಶಿಕ ಪಕ್ಷ ಕಟ್ಟುವುದಿಲ್ಲ, ಬಿಜೆಪಿಗೆ ದ್ರೋಹ ಮಾಡುವುದೂ ಇಲ್ಲ. ಪಕ್ಷಕ್ಕೆ ದ್ರೋಹ ಮಾಡಿದವರ ವಿರುದ್ಧ, ಮತ್ತೆ ವಾಪಸ್ ಬಂದವರ ಬಗ್ಗೆ ಚರ್ಚೆ ಆಗಬೇಕು ಎಂದು ಆಗ್ರಹಿಸಿದರು.
ಮಂಗಳವಾರ ಯತ್ನಾಳ್ ನೇತೃತ್ವದ ನಿಯೋಗ ವಕ್ಫ್ ತಿದ್ದುಪಡಿ ಮಸೂದೆ 2024ರ ಜಂಟಿ ಸಂಸದೀಯ ಸಮಿತಿಯ ಅಧ್ಯಕ್ಷ ಜಗದಾಂಬಿಕಾ ಪಾಲ್ ಅವರನ್ನು ಭೇಟಿಯಾಗಿದ್ದು, ರಾಜ್ಯದಲ್ಲಿನ ವಕ್ಫ್ ಸಂಬಂಧಿಸಿದ ವರದಿ ಸಲ್ಲಿಸಿದೆ. ಮತ್ತೊಂದೆಡೆ ಯತ್ನಾಳ್ ಬಣ ಕೇಂದ್ರ ಸಚಿವ ರಾಜನಾಥ್ ಸಿಂಗ್ ಅವರನ್ನು ಭೇಟಿಯಾಗಿ ವಿಜಯೇಂದ್ರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ ಎಂದು ತಿಳಿದು ಬಂದಿದೆ.