ಬೆಂಗಳೂರು: ಕ್ಯಾಬ್ ಚಾಲಕನ ಅಪಹರಿಸಿ ಹತ್ಯೆ

ಸಾಂದರ್ಭಿಕ ಚಿತ್ರ
ಬೆಂಗಳೂರು: ಕ್ಯಾಬ್ ಚಾಲಕನನ್ನು ಅಪಹರಿಸಿ ಕತ್ತುಕೊಯ್ದು ಆರೋಪಿಗಳು ಹತ್ಯೆಗೈದಿರುವ ಘಟನೆ ಇಲ್ಲಿನ ಸಾತನೂರು ಪೊಲೀಸ್ ಠಾಣಾ ವ್ಯಾಪ್ತಿಯ ಕಬ್ಬಾಳು ಸಮೀಪದ ಅರೆಕಟ್ಟೆದೊಡ್ಡಿ ಬಳಿ ವರದಿಯಾಗಿದೆ.
ನಗರದ ಸೋಲದೇವನಹಳ್ಳಿ ಠಾಣಾ ವ್ಯಾಪ್ತಿಯ ಚಿಕ್ಕಬ್ಯಾಲಕೆರೆ ನಿವಾಸಿ ಚಂದ್ರಶೇಖರ್(39) ಹತ್ಯೆಯಾದ ಕ್ಯಾಬ್ ಚಾಲಕ ಎಂದು ಗುರುತಿಸಲಾಗಿದೆ.
ಬೆಂಗಳೂರು ನಗರದಲ್ಲಿ ಕ್ಯಾಬ್ ಚಾಲನೆ ಮಾಡಿಕೊಂಡು ಜೀವನ ನಿರ್ವಹಿಸುತ್ತಿದ್ದ ಚಂದ್ರಶೇಖರ್ ಎಂಬಾತನನ್ನು ಆರೋಪಿಗಳು ಎ.26ರಂದು ವಾಹನವೊಂದರಲ್ಲಿ ನಗರದಿಂದ ಅಪಹರಿಸಿಕೊಂಡು ಹೋಗಿ ಕಬ್ಬಾಳು ಸಮೀಪದ ಖಾಸಗಿ ಶಾಲೆಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಚಾಕುವಿನಿಂದ ಕತ್ತು ಕೊಯ್ದು ನಂತರ ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಹತ್ಯೆಗೈದು ಪರಾರಿಯಾಗಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ರಸ್ತೆಯಲ್ಲಿ ಬಿದ್ದಿದ್ದ ಕ್ಯಾಬ್ ಚಾಲಕ ಚಂದ್ರಶೇಖರ್ ಮೃತದೇಹವನ್ನು ಗಮನಿಸಿದ ಸ್ಥಳೀಯರು ಸಾತನೂರು ಪೊಲೀಸ್ ಠಾಣೆಗೆ ಮಾಹಿತಿ ನೀಡಿದ ಬಳಿಕ ಸ್ಥಳಕ್ಕೆ ಧಾವಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.
ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ವೈಯಕ್ತಿಕ ದ್ವೇಷಕ್ಕಾಗಿ ಕೊಲೆ ಆಗಿದೆಯೋ ಅಥವಾ ಮಹಿಳೆಯ ವಿಚಾರದಲ್ಲಿ ಕೊಲೆ ನಡೆದಿದೆಯೋ ಎಂಬ ಬಗ್ಗೆ ತನಿಖೆ ಕೈಗೊಂಡಿದ್ದು, ಆರೋಪಿಗಳ ಪತ್ತೆಗೆ ಶೋಧ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ.