ಕೇಂದ್ರ ಸರಕಾರ ದಿವಾಳಿತನ ಮುಂದುವರೆಸಿದೆ: ರಮೇಶ್ ಬಾಬು
ಬೆಂಗಳೂರು: ರಾಜ್ಯ ವ್ಯಾಪಿ ಬರಗಾಲದ ಪರಿಸ್ಥಿತಿಯ ಅರಿವಿದ್ದರೂ, ಹಣ ಬಿಡುಗಡೆ ಮಾಡದೇ ಕೇಂದ್ರ ಸರಕಾರ ದಿವಾಳಿತನವನ್ನು ತೋರಿದೆ ಎಂದು ಕೆಪಿಸಿಸಿ ಮಾಧ್ಯಮ ವಿಭಾಗದ ಉಪಾಧ್ಯಕ್ಷ ರಮೇಶ್ ಬಾಬು ವಾಗ್ದಾಳಿ ನಡೆಸಿದ್ದಾರೆ.
ಶನಿವಾರ ಇಲ್ಲಿನ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಪ್ರಸಕ್ತ ಸಾಲಿನ ಲೋಕಸಭಾ ಸ್ಥಳೀಯ ಕ್ಷೇತ್ರಾಭಿವೃದ್ಧಿ ಯೋಜನೆಯ ವಾರ್ಷಿಕ 5 ಕೋಟಿ ಹಣವನ್ನು ಕೇಂದ್ರ ಸರಕಾರ ಬಿಡುಗಡೆ ಮಾಡಿಲ್ಲ. ಇದರ ನಡುವೆ ರಾಜ್ಯದಲ್ಲಿರುವ ಬಿಜೆಪಿ ಸಂಸದರು ತಮ್ಮ ಪಾಲಿನ ಹಣವನ್ನು ಕೇಳದೆ ಓಡಾಡುತ್ತಿದ್ದಾರೆ ಎಂದು ಟೀಕಿಸಿದರು.
ಕೇಂದ್ರ ಸರಕಾರ ನಮ್ಮ ರಾಜ್ಯದ ಲೋಕಸಭಾ ಸದಸ್ಯರಿಗೆ ಪ್ರದೇಶಾಭಿವೃದ್ದಿ ಯೋಜನೆಯ ಅಡಿಯಲ್ಲಿ ಡಿ.2ಕ್ಕೆ ಒಟ್ಟು 488.5 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲು ಅವಕಾಶ ಇರುತ್ತದೆ. ಆದರೆ, ಇದುವರೆಗೆ 225 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಿದ್ದು, ಒಟ್ಟಾರೆ 263.5 ಕೋಟಿ ಬಿಡುಗಡೆಗೆ ಬಾಕಿಯಿದೆ. ಬಿಡುಗಡೆ ಆಗಿರುವ ಹಣದಲ್ಲಿ 40.94 ಕೋಟಿ ಉಪಯೋಗಿಸದೆ ಕೇಂದ್ರ ಸರಕಾರದ ಖಾತೆಯಲ್ಲಿ ಬಾಕಿ ಇರುತ್ತದೆ ಎಂದು ಆರೋಪಿಸಿದರು.
ಕರ್ನಾಟಕದಲ್ಲಿ ಬರಗಾಲದ ಪರಿಸ್ಥಿತಿ ಇದ್ದು, ಇಲ್ಲಿಂದ ಆಯ್ಕೆಯಾದ 25 ಬಿಜೆಪಿ ಸಂದಸದರು ಜನರ ನಂಬಿಕೆ ಕಳೆದುಕೊಂಡಿದ್ದಾರೆ ಎಂದ ಅವರು, 1952ರಲ್ಲಿ ಮೊದಲನೇ ಸಂಸತ್ ಚುನಾವಣೆಯಲ್ಲಿ ಆಗಿನ ಮೈಸೂರು ರಾಜ್ಯದ 11 ಲೋಕಸಭಾ ಸ್ಥಾನಗಳಲ್ಲಿ ಕಾಂಗ್ರೆಸ್ ಪಕ್ಷ 10 ಸ್ಥಾನಗಳಿಸಿತ್ತು.1972 ರಲ್ಲಿ 27 ಲೋಕಸಭಾ ಕ್ಷೇತ್ರಗಳ ಪೈಕಿ ಸಂಪೂರ್ಣವಾಗಿ 27 ಲೋಕಸಭಾ ಕ್ಷೇತ್ರಗಳಲ್ಲಿ ಜಯಗಳಿಸಿತ್ತು. ತುರ್ತು ಪರಿಸ್ಥಿತಿ ಸಂದರ್ಭದ 1977ರ ಚುನಾವಣೆಯಲ್ಲಿ 26 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಜಯ ಸಾಧಿಸಿತ್ತು.
ರಾಮಕೃಷ್ಣ ಹೆಗ್ಡೆ ಅವರ ಹೊಂದಾಣೆಕೆ ಚುನಾವಣೆಯ ಸಂದರ್ಭದಲ್ಲಿ ಲೋಕಸಭೆಯಲ್ಲಿ ಬಿಜೆಪಿ ಕಣ್ತೆರಿಯುವ ಕೆಲಸ ಆರಂಭ ಮಾಡಿತ್ತು. ಕಳೆದ ಚುನಾವಣೆಯಲ್ಲಿ 25 ಸ್ಥಾನ ಪಡೆದಿತ್ತು. ಅದು ಜನರು ನೀಡಿದ ತೀರ್ಪು ಅದಕ್ಕೆ ನಾವು ಗೌರವಿಸಬೇಕು. ಆದರೆ, ರಾಜ್ಯದಲ್ಲಿ ಭೀಕರ ಬರ ಇದೆ. ರಾಜ್ಯ ಸರಕಾರದ ಬೇಡಿಕೆಗೆ ತಕ್ಕಂತೆ ಯಾವ ಅನುದಾನವು ನೀಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.