ಕೇಂದ್ರ ಸರಕಾರ ಅಲ್ಪಸಂಖ್ಯಾತರ ಹಕ್ಕುಗಳನ್ನು ದಮನ ಮಾಡುತ್ತಿದೆ : ಖಾಲಿದ್ ಸೈಫುಲ್ಲಾ ರಹ್ಮಾನಿ
ಬೆಂಗಳೂರು : ಕೇಂದ್ರ ಸರಕಾರವು ತನ್ನ ನೀತಿಗಳಿಂದ ಬಹಿರಂಗವಾಗಿಯೇ ಅಲ್ಪಸಂಖ್ಯಾತರ ಹಕ್ಕುಗಳನ್ನು ದಮನ ಮಾಡುವಲ್ಲಿ ನಿರತವಾಗಿದೆ ಎಂದು ಅಖಿಲ ಮುಸ್ಲಿಮ್ ವೈಯಕ್ತಿಕ ಕಾನೂನು ಮಂಡಳಿ ಅಧ್ಯಕ್ಷ ಖಾಲಿದ್ ಸೈಫುಲ್ಲಾ ರಹ್ಮಾನಿ ಅಭಿಪ್ರಾಯಪಟ್ಟಿದ್ದಾರೆ.
ಶನಿವಾರ ನಗರದ ದಾರುಲ್ ಉಲೂಮ್ ಸಬೀಲುರ್ರಶಾದ್(ಅರೇಬಿಕ್ ಕಾಲೇಜು)ನಲ್ಲಿ ಆಯೋಜಿಸಲಾಗಿರುವ ಎರಡು ದಿನಗಳ ಅಖಿಲ ಭಾರತ ಮುಸ್ಲಿಮ್ ವೈಯಕ್ತಿಕ ಕಾನೂನು ಮಂಡಳಿ(ಎಐಎಂಪಿಎಲ್ಬಿ)ಯ 29ನೇ ರಾಷ್ಟ್ರೀಯ ಸಮಾವೇಶದ ಉದ್ಘಾಟನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಇಂದು ಅತ್ಯಂತ ಸಂಕಷ್ಟದ ಹಾಗೂ ಸೂಕ್ಷ್ಮ ಪರಿಸ್ಥಿತಿಯಲ್ಲಿ ಈ ಸಮಾವೇಶ ನಡೆಯುತ್ತಿದೆ. ಸರಕಾರವು ಬಹಿರಂಗವಾಗಿ ಅಲ್ಪಸಂಖ್ಯಾತರನ್ನು ಗುರಿಯನ್ನಾಗಿಸಿಕೊಂಡಿದೆ. ಪ್ರಮುಖವಾಗಿ ನಮ್ಮ ಶರೀಅತ್, ವಕ್ಫ್ ಆಸ್ತಿಗಳು, ಸಂಸ್ಥೆಗಳನ್ನು ಗುರಿಯನ್ನಾಗಿಸಲಾಗುತ್ತಿದೆ ಎಂದು ಅವರು ಹೇಳಿದರು.
ನಮ್ಮ ಪೂರ್ವಿಕರು ಮುಸ್ಲಿಮರಲ್ಲಿರುವ ಎಲ್ಲ ಬಗೆಯ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು, ದೇಶದ ಎಲ್ಲ ಮುಸ್ಲಿಮರ ಅಭ್ಯುದಯಕ್ಕಾಗಿ 1973ರಲ್ಲಿ ಅಖಿಲ ಭಾರತ ಮುಸ್ಲಿಮ್ ವೈಯಕ್ತಿಕ ಕಾನೂನು ಮಂಡಳಿಯನ್ನು ಸ್ಥಾಪನೆ ಮಾಡಿದರು. ಸಂವಿಧಾನ ಹಾಗೂ ಕಾನೂನಿನ ಚೌಕಟ್ಟಿನಡಿಯಲ್ಲಿಯೇ ಮಂಡಳಿಯೂ ತನ್ನ ಕಾರ್ಯಚಟುವಟಿಕೆಗಳನ್ನು ನಡೆಸಿಕೊಂಡು ಬರುತ್ತಿದೆ ಎಂದು ಖಾಲಿದ್ ಸೈಫುಲ್ಲಾ ರಹ್ಮಾನಿ ತಿಳಿಸಿದರು.
ನಮ್ಮ ನ್ಯಾಯಸಮ್ಮತವಾದ ಹಕ್ಕುಗಳನ್ನು ಪಡೆಯಲು ಕಾನೂನು ಹಾಗೂ ಸಾರ್ವಜನಿಕ ಹೋರಾಟವನ್ನು ನಡೆಸಿಕೊಂಡು ಬರಲಾಗುತ್ತಿದೆ. ಉಲಮಾಗಳು ಶರೀಅತ್ ನೀಡಿರುವ ಆದೇಶಗಳನ್ನು ನೆಲದ ಕಾನೂನಿಗೆ ಅನುಗುಣವಾಗಿ ಯಾವ ರೀತಿ ಬಳಕೆ ಮಾಡಬೇಕು ಎಂದು ನಮ್ಮ ಅನ್ಯ ಧರ್ಮೀಯ ಸಹೋದರರು ಹಾಗೂ ವಿಶೇಷವಾಗಿ ಯುವ ಸಮೂಹದಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ಮಾಡಬೇಕು ಎಂದು ಅವರು ಕರೆ ನೀಡಿದರು.
ನಮ್ಮಲ್ಲಿನ ಒಗ್ಗಟ್ಟು ಇಂದಿನ ತುರ್ತು ಅಗತ್ಯವಾಗಿದೆ. ಅಪನಂಬಿಕೆಗಳು, ಭಿನ್ನಾಭಿಪ್ರಾಯಗಳಿಗೆ ಅವಕಾಶ ಇಲ್ಲದಂತಾಗಬೇಕಿದೆ. ಭಿನ್ನಾಭಿಪ್ರಾಯಗಳು ರಾಜಕೀಯವಾಗಿರಲಿ, ಧಾರ್ಮಿಕವಾಗಿರಲಿ, ಸಂಘಟನೆಗಳ ನಡುವೆ ಇರಲಿ, ಜಮಾತ್ಗಳ ನಡುವೆ ಇರಲಿ ಅಥವಾ ಪಂಗಡಗಳ ನಡುವೆ ಇರಲಿ. ಎಲ್ಲೆಡೆಯೂ ನಮ್ಮ ಆಚಾರ, ವಿಚಾರಗಳ ಮೂಲಕ ಬಗೆಹರಿಸಿಕೊಳ್ಳಬೇಕಿದೆ ಎಂದು ಖಾಲಿದ್ ಸೈಫುಲ್ಲಾ ರಹ್ಮಾನಿ ತಿಳಿಸಿದರು.
ಉದ್ಘಾಟನಾ ಸಭೆಯಲ್ಲಿ ಎಐಎಂಪಿಎಲ್ಬಿ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಫಝ್ಲುರ್ರಹೀಮ್ ಮುಜದ್ದಿದಿ ಸ್ವಾಗತ ಭಾಷಣ ಮಾಡಿದರು. ಕಾರ್ಯದರ್ಶಿ ಮಹ್ಫೂಝುರ್ರಹ್ಮಾನ್, ಸಮಾವೇಶದ ಸಂಚಾಲಕ ಅಮೀರೆ ಶರೀಅತ್ ಕರ್ನಾಟಕ ಮೌಲಾನ ಸಗೀರ್ ಅಹ್ಮದ್ ಖಾನ್ ರಶಾದಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.