ಸಿಇಟಿ ಪರೀಕ್ಷೆ : ಶೇ 94.20ರಷ್ಟು ವಿದ್ಯಾರ್ಥಿಗ ಹಾಜರು
ಸಾಂದರ್ಭಿಕ ಚಿತ್ರ | PC: pexels
ಬೆಂಗಳೂರು : ಎಂಜಿನಿಯರಿಂಗ್, ವೈದ್ಯಕೀಯ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸ್‍ಗಳ ಪ್ರವೇಶಕ್ಕೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು(ಕೆಇಎ) ನಡೆಸುವ ಸಾಮಾನ್ಯ ಪ್ರವೇಶ ಪರೀಕ್ಷೆ(ಸಿಇಟಿ) ಬುಧವಾರದಂದು ಸುಸೂತ್ರವಾಗಿ ನಡೆದಿದ್ದು, ಶೇ94.20ರಷ್ಟು ವಿದ್ಯಾರ್ಥಿಗಳು ಎರಡು ಪತ್ರಿಕೆಗಳ ಪರೀಕ್ಷೆಯನ್ನು ಬರೆದಿದ್ದಾರೆ.
ಪ್ರವೇಶ ಪತ್ರ ಡೌನ್‍ಲೋಡ್ ಮಾಡಿಕೊಂಡಿದ್ದ ಒಟ್ಟು 3,21,895 ವಿದ್ಯಾರ್ಥಿಗಳ ಪೈಕಿ 3,11,777 ಮಂದಿ(ಶೇ94.20ರಷ್ಟು) ಪರೀಕ್ಷೆಗೆ ಹಾಜರಾಗಿದ್ದರು. ಬೆಳಗಿನ ಅವಧಿಯಲ್ಲಿ ನಡೆದ ಭೌತಶಾಸ್ತ್ರ ಪತ್ರಿಕೆಗಿಂತ ಮಧ್ಯಾಹ್ನ ನಡೆದ ರಸಾಯನಶಾಸ್ತ್ರ ಪತ್ರಿಕೆಯನ್ನು 183 ಮಂದಿ ಹೆಚ್ಚಿಗೆ ಬರೆದಿದ್ದಾರೆ. ನಾಳೆ(ಎ.17) ಬೆಳಗಿನ ಅವಧಿಯಲ್ಲಿ ಗಣಿತ ಹಾಗೂ ಮಧ್ಯಾಹ್ನ ಜೀವಶಾಸ್ತ್ರ ಪತ್ರಿಕೆಗಳಿಗೆ ಪರೀಕ್ಷೆ ನಡೆಯಲಿದೆ.
ಕ್ಯಾಮರಾ ಕಣ್ಗಾವಲಿನಲ್ಲಿ ನಡೆದ ಪರೀಕ್ಷೆಗೆ ವ್ಯಾಪಕ ತಯಾರಿ ಮಾಡಿಕೊಳ್ಳಲಾಗಿತ್ತು. ಕ್ಯೂ ಆರ್ ಕೋಡ್ ಮೂಲಕ ಮುಖ ಚಹರೆ ಪತ್ತೆ ಹಚ್ಚಿ ಅಭ್ಯರ್ಥಿಗಳ ನೈಜತೆ ತಿಳಿಯುವ ವ್ಯವಸ್ಥೆ ಇದೇ ಮೊದಲ ಬಾರಿಗೆ ಜಾರಿ ಮಾಡಿದ್ದು ಸಂಪೂರ್ಣ ಯಶ್ವಸಿಯಾಗಿದೆ. ಬೆಳಗಿನ ಪರೀಕ್ಷೆಗೆ ಕೆಲಕಡೆ ತಾಂತ್ರಿಕ ದೋಷ ಕಂಡುಬಂದರೂ ಮಧ್ಯಾಹ್ನ ಆ ರೀತಿ ಯಾವ ತೊಂದರೆಯೂ ಆಗಲಿಲ್ಲ ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ತಿಳಿಸಿದ್ದಾರೆ.
ಕೊನೆ ಕ್ಷಣದವರೆಗೂ ಪ್ರವೇಶ ಪತ್ರ: ಪ್ರವೇಶ ಪತ್ರ ಇಲ್ಲದೆ, ವಿವಿಧ ಪರೀಕ್ಷಾ ಕೇಂದ್ರಗಳಿಗೆ ತೆರಳಿ ಪರದಾಡುತ್ತಿದ್ದ 30ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಕೊನೆ ಕ್ಷಣದಲ್ಲಿ ಪ್ರವೇಶ ಪತ್ರ ಒದಗಿಸುವ ಕೆಲಸವನ್ನು ಕೆಇಎ ಸಿಬ್ಬಂದಿ ಮಾಡಿದರು. ಬೆಳಿಗ್ಗೆ 10ಗಂಟೆಗೆ ಕರೆ ಮಾಡಿ ‘ತಮ್ಮ ಮೊಬೈಲ್‍ನಲ್ಲಿ ಕರೆನ್ಸಿ ಇಲ್ಲ, ನಂಬರ್ ಬ್ಲಾಕ್ ಅಗಿದೆ. ಹೀಗಾಗಿ ಡೌನ್‍ಲೋಡ್ ಮಾಡಿಕೊಳ್ಳಲು ಓಟಿಪಿ ಬರುತ್ತಿಲ್ಲ' ಎನ್ನುತ್ತಿದ್ದವರಿಗೆ ಕೆಇಎ ಸಿಬ್ಬಂದಿಯೇ ವಾಟ್ಸ್ ಅಪ್ ಮೂಲಕ ಪ್ರವೇಶ ಪತ್ರ ಕಳುಹಿಸಿ ಪರಿಕ್ಷೆ ಬರೆಯಲು ನೆರವಾದರು. ಹೀಗೆ ಸಿಬ್ಬಂದಿಗಳು ಬೆಳಿಗ್ಗೆ 10.29ರವರೆಗೆ ಯುದ್ದೋಪಾದಿಯಲ್ಲಿ ಕೆಲಸ ನಿರ್ವಹಿಸಿ ವಿದ್ಯಾರ್ಥಿಗಳಿಗೆ ನೆರವಾದರು.