‘ಹಿಟ್ಲರ್ ಮನಸ್ಥಿತಿಯ ರಾಜಕಾರಣಿಗಳು’ ಹೆಚ್ಚಾಗಿದ್ದಾರೆ : ಮುಖ್ಯಮಂತ್ರಿ ಸಿದ್ದರಾಮಯ್ಯ

Update: 2024-08-24 14:10 GMT

ಬೆಂಗಳೂರು : ‘ಈಗ ಸುಳ್ಳುಗಳನ್ನೇ ಸತ್ಯ ಮಾಡುವ ಹಿಟ್ಲರ್‌ನ ಮನಸ್ಥಿತಿಯ ರಾಜಕಾರಣಿಗಳು ಹೆಚ್ಚಾಗಿದ್ದಾರೆ. ದಣಿವರಿಯದ ಹೋರಾಟಗಾರರಾಗಿದ್ದ ಕಾಮ್ರೇಡ್ ಸೂರ್ಯನಾರಾಯಣರಾವ್(ಸೂರಿ) ಸದಾ ಸತ್ಯದ ಮೂಲಕ ಸರಕಾರವನ್ನು ಎಚ್ಚರಿಸುವ ಕೆಲಸ ಮಾಡುತ್ತಿದ್ದರು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಮರಿಸಿದ್ದಾರೆ.

ಶನಿವಾರ ನಗರದ ಪುಟ್ಟಣ್ಣಚೆಟ್ಟಿ ಪುರಭವನದಲ್ಲಿ ‘ಕಾಮ್ರೇಡ್ ಎಸ್.ಸೂರ್ಯನಾರಾಣರಾವ್ ಜನ್ಮ ಶತಮಾನೋತ್ಸವ ಆಚರಣಾ ಸಮಿತಿ ವತಿಯಿಂದ ಆಯೋಜಿಸಿದ್ದ ‘ಕಾಮ್ರೆಡ್ ಸೂರಿ-100’-‘ಕರ್ನಾಟಕ ಅಭಿವೃದ್ಧಿಯಲ್ಲಿ ಕಾರ್ಮಿಕ ಚಳವಳಿಯ ಪ್ರಾತ್ರ’ ರಾಜ್ಯಮಟ್ಟದ ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು, ಸೂರಿ ಅವರು ಸದನದ ಒಳಗಾಗಲಿ, ಹೊರಗಾಗಲಿ ಶಾಂತಿ ಕದಡುವ ರೀತಿಯಲ್ಲಿ ಪ್ರತಿಭಟನೆ ಮಾಡುತ್ತಿರಲಿಲ್ಲ. ಅವರು ಶ್ರಮಿಕರ ಧ್ವನಿಯಾಗಿ ಸದನದ ಒಳಗೆ-ಹೊರಗೆ ಹೋರಾಟ ನಡೆಸುತ್ತಿದ್ದರು ಎಂದು ನೆನಪು ಮಾಡಿಕೊಂಡರು.

ಸೂರಿ ಅವರು ಯಾವುದೇ ವಿಚಾರವಾದರೂ ಸರಿ ಸಂಪೂರ್ಣ ಸಿದ್ಧತೆ ಮಾಡಿಕೊಂಡು ಬರುತ್ತಿದ್ದರು. ಹೀಗಾಗಿ ಇವರ ಮಾತು ಮತ್ತು ಭಾಷಣ ಕೇಳಲು ನಾವು ಕಾತರರಾಗಿರುತ್ತಿದ್ದೆವು. ಅವರಿಗೆ ಬದ್ಧತೆ ಮತ್ತು ಕಾಳಜಿ ಇತ್ತು. ಕಮ್ಯುನಿಸ್ಟ್ ಕಾರ್ಯಕರ್ತರು ಸಾಮಾನ್ಯವಾಗಿ ಅಧಿಕಾರಕ್ಕಾಗಿ ಹೆಚ್ಚು ಆಸೆ ಪಡುವವರಲ್ಲ. ಹೋರಾಟಕ್ಕೆ ಹೆಚ್ಚು ಆಧ್ಯತೆ ಕೊಡುತ್ತಿದ್ದರು. ಜನರ ಸಮಸ್ಯೆಗಳಿಗೆ ಪರಿಹಾರ ಸಿಗುವವರೆಗೂ ಸದನದ ಒಳಗೆ ಪಟ್ಟು ಬಿಡದೆ ಹೋರಾಟ ನಡೆಸುತ್ತಿದ್ದರು. ನಾನು ಕಾರ್ಮಿಕ ಸಚಿವನಾಗಿದ್ದಾಗ ಕಾರ್ಮಿಕರ ಸಮಸ್ಯೆಗಳನ್ನು ಬಗೆಹರಿಸುವವರೆಗೂ ಕುಳಿತಲ್ಲಿಂದ ಮೇಲೇಳುತ್ತಿರಲಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು.

ಸಿಐಟಿಯು ಉಪಾಧ್ಯಕ್ಷ ವಿಜಿಕೆ ನಾಯರ್ ಅಧ್ಯಕ್ಷತೆ ವಹಿಸಿ ಮಾತನಾಡಿ, ‘ಕಾರ್ಮಿಕರ ಒಪ್ಪಿಗೆ ಪಡೆಯದೇ ಕಾರ್ಮಿಕ ಮುಖಂಡರು ಒಪ್ಪಂದಗಳನ್ನು ಮಾಡಿಕೊಳ್ಳುತ್ತಿದ್ದರು. ಕಾಮ್ರೆಡ್ ಸೂರಿ ಅವರು ಈ ವ್ಯವಸ್ಥೆಯನ್ನು ತಪ್ಪಿಸಿದರು. ಕಾರ್ಮಿಕರ ಒಪ್ಪಿಗೆ ಪಡೆದೇ ಮುಂದುವರಿಯುವ ಪದ್ಧತಿಯನ್ನು ಜಾರಿಗೆ ತಂದರು’ ಎಂದು ಹೇಳಿದರು.

ದೇಶದ, ಸಮಾಜದ ಅಭಿವೃದ್ಧಿ ಎಂದರೆ ಬಂಡವಾಳಶಾಹಿಗಳ, ಶ್ರೀಮಂತರ ಅಭಿವೃದ್ಧಿಯಲ್ಲ. ಬಡವರ, ಕಾರ್ಮಿಕರ ಅಭಿವೃದ್ಧಿಯಾಗಿದೆ. ಕಾರ್ಮಿಕರ ಕೈಯಲ್ಲಿ ಹಣ ಬಂದರೆ ಅವರು ಅಗತ್ಯಕ್ಕೆ ತಕ್ಕ ಹಾಗೆ ಖರ್ಚು ಮಾಡಬೇಕು. ಆಗ ಅಭಿವೃದ್ಧಿ ಸಾಧ್ಯ ಎಂದು ಅವರು ಹೇಳಿದರು.

ಸಿಐಟಿಯು ಪ್ರದಾನ ಕಾರ್ಯದರ್ಶಿ ಎಸ್.ಎಸ್.ಮೀನಾಕ್ಷಿ ಸುಂದರಂ ಮಾತನಾಡಿ, ಕಾರ್ಮಿಕರು ಸಂಘಟಿತರಾಗಿ ಹೋರಾಟ ಮಾಡಿದರೆ ಅಭಿವೃದ್ಧಿಗೆ ಕುಂಟಿತವಾಗುತ್ತದೆ ಎಂದು ಕೆಲವರು ಹೇಳುತ್ತಾರೆ. ಆದರೆ ಅದು ಸತ್ಯಕ್ಕೆ ದೂರವಾದ ಮಾತು. ಎಲ್ಲ ಕಾರ್ಮಿಕರು ಸಂಪತ್ತನ್ನು ಸೃಷ್ಟಿ ಮಾಡುತ್ತಾರೆ. ಅದರಿಂದ ಕಾರ್ಮಿಕರೇ ಸಮಾಜದ ಅಭಿವೃದ್ಧಿಗೆ ಪ್ರಮುಖ ಕಾರಣರು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಮಾಜಿ ರಾಜ್ಯಸಭಾ ಸದಸ್ಯ ತಪನ್ ಸೇನ್, ಕಾಮ್ರೇಡ್ ಸೂರ್ಯನಾರಾಯಣ್ ಅವರ ಪುತ್ರಿ ರೇಖಾ, ಸಿಪಿಎಂ ಕಾರ್ಯದರ್ಶಿ ಯು.ಬಸವರಾಜು, ನಿವೃತ್ತ ಪ್ರಾಧ್ಯಾಪಕಿ ಜಾನಕಿ ನಾಯರ್ ಮತ್ತಿತರರು ಉಪಸ್ಥಿತರಿದ್ದರು.

ಗ್ಯಾರಂಟಿಗಳನ್ನು ಬಿಜೆಪಿ-ಆರೆಸ್ಸೆಸ್ ವಿರೋಧಿಸುತ್ತಿವೆ: ‘ನಮ್ಮ ಸರಕಾರ ದುಡಿಯುವ ವರ್ಗದ ಏಳಿಗೆಗಾಗಿ ಕಾರ್ಯಕ್ರಮಗಳನ್ನು ರೂಪಿಸಿದ್ದು, ಕಾರ್ಮಿಕರ ಪರವಾಗಿ ಇರುತ್ತದೆ. ನಾವು ಕಾರ್ಮಿಕರಗಾಗಿ ರೂಪಿಸಿದ ಗ್ಯಾರಂಟಿ ಯೋಜನೆಗಳನ್ನು ಬಿಜೆಪಿ-ಆರೆಸ್ಸೆಸ್ ನಂತಹ ಬಲಪಂಥೀಯ ಸಂಘಟನೆಗಳು ವಿರೋಧಿಸುತ್ತಿವೆ. ದುಡಿಯುವ ವರ್ಗದ ಹೋರಾಟದ ಮ್ಯೂಸಿಯಂ ರಚನೆಗೆ ಸಕಾರಾತ್ಮಕ ಸ್ಪಂದನೆ ನೀಡಲಾಗುವುದು’

-ಸಿದ್ದರಾಮಯ್ಯ ಮುಖ್ಯಮಂತ್ರಿ

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News