ಭಾಷಣಗಳಿಂದ ಮಹಾತ್ಮರ ಆಶಯಗಳು ಈಡೇರುವುದಿಲ್ಲ : ಮುಖ್ಯಮಂತ್ರಿ ಸಿದ್ದರಾಮಯ್ಯ

Update: 2024-10-02 12:38 GMT

ಬೆಂಗಳೂರು : ಕೇವಲ ಭಾಷಣಗಳಿಂದ ಮಹಾತ್ಮ ಗಾಂಧಿಜಿ ಮತ್ತು ಡಾ.ಅಂಬೇಡ್ಕರ್ ಅವರ ಆಶಯಗಳು ಈಡೇರುವುದಿಲ್ಲ. ಅವರು ಹೇಳಿದಂತ ಮಾತುಗಳನ್ನು ಅರ್ಥ ಮಾಡಿಕೊಂಡು, ಅವರ ದಾರಿಯಲ್ಲಿ ನಡೆಯುವುದೇ ಅವರಿಗೆ ಸಲ್ಲಿಸುವ ನಿಜವಾದ ಗೌರವ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬಣ್ಣಿಸಿದ್ದಾರೆ.

ಬುಧವಾರ ನಗರದ ಗಾಂಧಿ ಭವನದಲ್ಲಿ ಹಮ್ಮಿಕೊಂಡಿದ್ದ ‘ಗಾಂಧಿ ಜಯಂತಿ’ ಕಾರ್ಯಕ್ರಮದಲ್ಲಿ ಭಾಗವಹಿಸಿ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಅವರು, ಎಲ್ಲ ನ್ಯಾಯಾಲಯಗಳಿಗಿಂತ ಮೇಲೆ ಅತ್ಯುನ್ನತವಾದ ಆತ್ಮಸಾಕ್ಷಿಯ ನ್ಯಾಯಾಲಯವಿದೆ. ಈಗಿನ ನ್ಯಾಯಾಲಯಗಳಿಂದ ಎಲ್ಲರಿಗೂ ನ್ಯಾಯ ಸಿಗದೇ ಹೋಗಬಹುದು. ಆದರೆ ನಾವು ಆತ್ಮಸಾಕ್ಷಿಗೆ ತಕ್ಕಂತೆ ನಡೆದುಕೊಳ್ಳಬೇಕು ಎಂದು ಕರೆ ನೀಡಿದರು.

ಸಮಾಜದಲ್ಲಿ ಇನ್ನೂ ಆರ್ಥಿಕ ಅಸಮಾನತೆ ಇದೆ. ಎಲ್ಲಿಯವರೆಗೂ ಅಸಮಾನತೆಗಳನ್ನು ಹೋಗಲಾಡಿಸುವುದಿಲ್ಲವೋ, ಅಲ್ಲಿಯವರೆಗೂ ರಾಜಕೀಯ ಸ್ವಾತಂತ್ರ್ಯ ಸಿಗುವುದಿಲ್ಲ. ಕಾಂಗ್ರೆಸ್ ಪಕ್ಷ ಸಂವಿಧಾನ ಬದ್ದವಾಗಿ ನಡೆದುಕೊಂಡು, ಸಂವಿಧಾನದ ಧ್ಯೇಯೋದ್ದೇಶಗಳನ್ನು ಪಾಲನೆ ಮಾಡುತ್ತಿದೆ. ಬಡವರಿಗೆ ಅನೇಕ ಕಾರ್ಯಕ್ರಮಗಳನ್ನು ಕೊಟ್ಟಿದೆ. ಅದರ ಫಲವೇ ಗ್ಯಾರೆಂಟಿ ಯೋಜನೆಗಳು. ಜನರು ಈ ಕಾರ್ಯಕ್ರಮಗಳ ಆಶಯಗಳನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಸಿದ್ದರಾಮಯ್ಯ ತಿಳಿಸಿದರು.

ಗ್ಯಾರೆಂಟಿ ಯೋಜನೆಗಳು, ಸಮಾಜದಲ್ಲಿ ಅವಕಾಶಗಳಿಂದ ವಂಚಿತರಾಗಿರುವ ಎಲ್ಲರಿಗೂ ಆರ್ಥಿಕ, ಸಾಮಾಜಿಕ ಶಕ್ತಿ ತುಂಬವ ಕೆಲಸವಾಗಿದೆ. ಜಾತಿ ವ್ಯವಸ್ಥೆ ಅಷ್ಟು ಸುಲಭವಾಗಿ ಬಿಟ್ಟು ಹೋಗುವುದಿಲ್ಲ. ಗಾಂಧೀಜಿ ಜಾತಿ ನಿವಾರಣೆಗಾಗಿ ಹೋರಾಟ ಮಾಡಿದ್ದಾರೆ. ಆದರೆ ಇನ್ನೂ ಅಸ್ಪೃಶ್ಯತೆ ಇದೆ. ರಾಜಕೀಯ ಸ್ವಾತಂತ್ರ್ಯದ ಜೊತೆಗೆ ಆರ್ಥಿಕ, ಸಾಮಾಜಿಕ ಸ್ವಾತಂತ್ರ್ಯ ಸಿಕ್ಕಾಗ ಮಾತ್ರ ಸಮಾಜದಲ್ಲಿರುವ ಅನಿಷ್ಠೆಗಳು ಹೋಗುವುದಕ್ಕೆ ಸಾಧ್ಯ ಎಂದು ಅವರು ನುಡಿದರು.

ಸಾಮಾಜಿಕ ತಾರತಮ್ಯ, ಅಸಮಾನತೆಗಳಂತಹ ಅನಿಷ್ಠೆಗಳು ಭಾಷಣ ಮಾಡುವುದರಿಂದ ಹೋಗುವುದಿಲ್ಲ. ಹಳ್ಳಿಗಳು ಉದ್ದಾರವಾಗದೆ, ದೇಶ ಉದ್ದಾರ ಆಗುವುದಿಲ್ಲ. ಸರ್ವೋದಯ ಆಗದಿದ್ದರೆ ದೇಶ ಬೆಳವಣಿಗೆ ಆಗುವುದಿಲ್ಲ ಎಂದು ಗಾಂಧೀಜಿ ಹೇಳಿದ್ದರು. ಅಂಬೇಡ್ಕರ್ ಅಂತ್ಯೋದಯ ಆಗದೆ, ದೇಶ ಉದ್ದಾರ ಆಗಲ್ಲ. ಸಮಾನತೆಯ ಸಮಸಮಾಜ ನಿರ್ಮಾಣ ಮಾಡಬೇಕೆನ್ನುವುದು ಸಂವಿಧಾನದ ಆಶಯ ಎಂದು ಸಿದ್ದರಾಮಯ್ಯ ಹೇಳಿದರು.

ಲಾಲ್ ಬಹದ್ದೂರ್ ಶಾಸ್ತ್ರಿ ಅತ್ಯಂತ ಪ್ರಾಮಾಣಿಕ ರಾಜಕಾರಣಿ. ಇವರೆಲ್ಲರ ಬದುಕಿನ ಸಂದೇಶಗಳು ನಮಗೆ ಮಾರ್ಗದರ್ಶನವಾದರೆ, ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಡೆದರೆ ನಾವು ಈ ಮಹಾತ್ಮರಿಗೆ ಸಲ್ಲಿಸುವ ಗೌರವ ಎಂದರು. ಕಾನೂನು ಸಚಿವ ಎಚ್.ಕೆ.ಪಾಟೀಲ್, ಗಾಂಧಿ ಭವನ ಕಾರ್ಯದರ್ಶಿ ವಿಶುಕುಮಾರ್, ಪ್ರಾಧ್ಯಾಪಕ ಡಾ.ನಟರಾಜ್ ಹುಳಿಯಾರ್, ಗಾಂಧಿ ಸ್ಮಾರಕ ನಿಧಿ ಅಧ್ಯಕ್ಷ ವೂಡೇ ಪಿ.ಕೃಷ್ಣ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News