ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡದಂತೆ ಸಿಎಂಗೆ ಹಿಂದುಳಿದ ಜಾತಿಗಳ ಒಕ್ಕೂಟ ಮನವಿ
ಬೆಂಗಳೂರು: ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ ಹಿಂದುಳಿದ ಪ್ರವರ್ಗ-2ಎಗೆ ಸೇರಿಸಬಾರದು ಎಂದು ಆಗ್ರಹಿಸಿ, ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟದ ಮುಖಂಡರು ಬುಧವಾರ ನಗರದ ಕಾವೇರಿ ನಿವಾಸದ ಬಳಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದ್ದಾರೆ.
ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟದ ಅಧ್ಯಕ್ಷ ಕೆ.ಎಂ.ರಾಮಚಂದ್ರಪ್ಪ ಮಾತನಾಡಿ, ಒಂದು ವೇಳೆ ಪಂಚಮಸಾಲಿ ಸಮುದಾಯವನ್ನು ಪ್ರವರ್ಗ-2ಎಗೆ ಸೇರಿಸಿದರೆ ರಾಜ್ಯಾದ್ಯಂತ ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ರಾಜ್ಯದಲ್ಲಿ 2002ರಿಂದ ಹಿಂದುಳಿದ ವರ್ಗಗಳನ್ನು ಪ್ರವರ್ಗ-1, ಪ್ರವರ್ಗ-2, ಪ್ರವರ್ಗ-2ಎ, ಪ್ರವರ್ಗ-2ಬಿ, ಪ್ರವರ್ಗ-3ಎ ಮತ್ತು ಪ್ರವರ್ಗ-3ಬಿ ಎಂಬುದಾಗಿ ವಿಂಗಡಿಸಿ, ಉದ್ಯೋಗ ಮತ್ತು ಶಿಕ್ಷಣದಲ್ಲಿ ಪ್ರವರ್ಗ-1ಕ್ಕೆ ಶೇ.48 ರಷ್ಟು, ಪ್ರವರ್ಗ-2ಎಗೆ ಶೇ.15ರಷ್ಟು, ಪ್ರವರ್ಗ-2ಬಿಗೆ ಶೇ.4ರಷ್ಟು, ಪ್ರವರ್ಗ-3ಎಗೆ ಶೇ.4 ರಷ್ಟು ಹಾಗೂ ಪ್ರವರ್ಗ-3ಬಿಗೆ ಶೇಕಡಾ 5ರಷ್ಟು ಒಟ್ಟು ಮೀಸಲಾತಿಯ ಶೇ. 32 ರಷ್ಟು ಮೀಸಲಾತಿಯನ್ನು ಹಿಂದುಳಿದ ವರ್ಗಗಳಿಗೆ ನಿಗಧಿಪಡಿಸಲಾಗಿದೆ. 2002ರಿಂದ ಈವರೆಗೂ ಅದೇ ರೀತಿ ಮೀಸಲಾತಿಯನ್ನು ಹಿಂದುಳಿದ ವರ್ಗಗಳು ರಾಜ್ಯದಲ್ಲಿ ಪಡೆಯುತ್ತೇವೆ ಎಂದು ಹೇಳಿದರು.
ರಾಜ್ಯದಲ್ಲಿನ ಪಂಚಮಸಾಲಿ ಲಿಂಗಾಯತ ಸಮುದಾಯ ಉಲ್ಲೇಖ-2ರ ಸರಕಾರದ ಆದೇಶದ ಅನ್ವಯ ಪ್ರವರ್ಗ-3ಬಿ ಮೀಸಲಾತಿಯನ್ನು ಪಡೆಯುತ್ತಿದ್ದು, ಇತ್ತಿಚೆಗೆ ಈ ಸಮುದಾಯವನ್ನು ಪ್ರವರ್ಗ-3ಯಿಂದ ಪ್ರವರ್ಗ-2ಎಗೆ ಬದಲಾಯಿಸಿ ಶೇ.15ರಷ್ಟು ಮೀಸಲಾತಿಯಡಿಯಲ್ಲಿ ಪ್ರವರ್ಗ-2ಎ ಮೀಸಲಾತಿ ಕೊಡಲು ಒತ್ತಾಯಿಸಿ ಸರಕಾರಕ್ಕೆ ಒತ್ತಾಯಿಸಿ ಧರಣಿಗಳನ್ನು ಮಾಡಿತ್ತಿದ್ದಾರೆ. 2022-23ರಲ್ಲಿ ಬಿಜೆಪಿ ಸರಕಾರದಲ್ಲಿ ಪ್ರವರ್ಗ-2ಬಿರಲ್ಲಿ ಬರುವ ಮುಸ್ಲಿಂ ಸಮುದಾಯಕ್ಕೆ ಶೇ.41ರಷ್ಟು ಮೀಸಲಾತಿಯನ್ನು ರದ್ದುಪಡಿಸಿ, ಹೊಸದಾಗಿ ಪ್ರವರ್ಗ-2ಸಿ ಮತ್ತು ಪ್ರವರ್ಗ-2ಡಿ ಎಂದು ಹೊಸದಾಗಿ ವರ್ಗಿಕರಿಸಿ ಪ್ರವರ್ಗ-2ಸಿಗೆ ಶೇ.2ರಷ್ಟು ಮತ್ತು ಪ್ರವರ್ಗ-2ಡಿಗೆ ಶೇ.2ರಷ್ಟು ಮೀಸಲಾತಿಯನ್ನು ನೀಡಲಾಗಿದೆ ಎಂದರು.
ಪಂಚಮಸಾಲಿ ಲಿಂಗಾಯತ ಸಮುದಾಯವು ಶೈಕ್ಷಣಿಕ, ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯವಾಗಿ ಮುಂದುವರಿದ ಸಮುದಾಯವಾಗಿದೆ. ಡಾ. ನಾಗನಗೌಡ ಸಮಿತಿ, ಎಲ್.ಜಿ. ಹಾವನೂರು ಆಯೋಗದ ವರದಿ, ವೆಂಕಟಸ್ವಾಮಿ ಹಿಂದುಳಿದ ವರ್ಗಗಳ 2ನೇ ಆಯೋಗದ ವರದಿ, ನ್ಯಾಯಮೂರ್ತಿ ಓ. ಚಿನ್ನಪ್ಪರೆಡ್ಡಿ ವರದಿಗಳ ಪ್ರಕಾರ ಪಂಚಮಸಾಲಿ ಸಮುದಾಯವು ಮುಂದುವರಿದ ಸಮಾಜವಾಗಿದೆ ಎಂದು ತಿಳಿಸಿದರು.
ಪಂಚಮಸಾಲಿ ಲಿಂಗಾಯತ ಸಮುದಾಯವನ್ನು ಪ್ರವರ್ಗ-2ಎ ವರ್ಗಕ್ಕೆ ಸೇರ್ಪಡೆ ಮಾಡಿದರೆ ಪ್ರವರ್ಗ-2ಎ ಅಡಿಯಲ್ಲಿರುವ ಹಿಂದುಳಿದ ಜಾತಿಗಳಾದ ಆಗಸ, ಸವಿತಾ ಸಮಾಜ, ತಿಗಳ, ಈಡಿಗ, ಕುರುಬ, ದೇವಾಂಗ ಇತರೆ ಎಲ್ಲಾ ಹಿಂದುಳಿದ ಜಾತಿಗಳಿಗೆ ಮೀಸಲಾತಿ ಸಿಗುವುದಿಲ್ಲ. ಬದಲಾಗಿ ಪಂಚಮಸಾಲಿ ಸಮುದಾಯವೇ ಎಲ್ಲಾ ಉದ್ಯೋಗ, ಶಿಕ್ಷಣ, ಹಾಗೂ ರಾಜಕೀಯ ಮೀಸಲಾತಿಯನ್ನು ಪಡೆದುಕೊಳ್ಳುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.