‘ಅಂಬೇಡ್ಕರ್ ವೀದಿ' ಎಂದು ಬಳಕೆ ಮಾಡಲು ಸುತ್ತೋಲೆ
Update: 2025-04-10 22:35 IST

ಬೆಂಗಳೂರು : ಸಚಿವಾಲಯದ ಅಧಿಕೃತ ಪತ್ರ ವ್ಯವಹಾರಗಳಲ್ಲಿ ‘ಡಾ.ಬಿ.ಆರ್.ಅಂಬೇಡ್ಕರ್ ವೀದಿ' ಎಂದು ವಿಳಾಸ ನಮೂದಿಸುವುದನ್ನು ಕಡ್ಡಾಯಗೊಳಿಸಬೇಕು ಎಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಸರಕಾರದ ಅಧೀನ ಕಾರ್ಯದರ್ಶಿ ಸಂದೀಪ್ ಬಿ.ಕೆ. ಅವರು ಸುತ್ತೋಲೆ ಹೊರಡಿಸಿದ್ದಾರೆ.
ಗುರುವಾರ ಈ ಸಂಬಂಧ ಸುತ್ತೋಲೆ ಹೊರಡಿಸಿದ್ದು, ‘ಸರಕಾರದ ಸಚಿವಾಲಯವು ವಿಧಾನಸೌಧ, ವಿಕಾಸಸೌಧ ಹಾಗೂ ಬಹುಮಹಡಿ ಕಟ್ಟಡಗಳಲ್ಲಿ ಕಾರ್ಯನಿರ್ವಹಿಸುತ್ತಿವೆ. ಈ ಕಟ್ಟಡಗಳು ಅಂಬೇಡ್ಕರ್ ವೀದಿಯಲ್ಲಿವೆ. ಆದರೆ, ವಿವಿಧ ಇಲಾಖೆಗಳು ನಡೆಸುವ ಪತ್ರ ವ್ಯವಹಾರದಲ್ಲಿ ವಿಳಾಸ ನಮೂದಿಸುತ್ತಿಲ್ಲ’ ಎಂದು ಆಕ್ಷೇಪಿಸಲಾಗಿದೆ.
ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರ ಹೆಸರನ್ನು ಒಳಗೊಂಡ ವೀದಿಯ ಹೆಸರು ಬಳಸದೇ ಇರುವುದು ಅಸಮಂಜಸವಾಗುತ್ತದೆ. ಆದುದರಿಂದ ಕರ್ನಾಟಕ ಸರಕಾರದ ಸಚಿವಾಲಯದ ಎಲ್ಲ ಅಧಿಕೃತ ಪತ್ರ ವ್ಯವಹಾರದಲ್ಲಿ ‘ಡಾ.ಬಿ.ಆರ್.ಅಂಬೇಡ್ಕರ್ ವೀದಿ’ ಎಂದು ವಿಳಾಸವನ್ನು ನಮೂದಿಸಬೇಕು ಎಂದು ಸುತ್ತೋಲೆಯಲ್ಲಿ ನಿರ್ದೇಶನ ನೀಡಲಾಗಿದೆ.