ರಾಜ್ಯ ಸರಕಾರದ ವಿರುದ್ಧ ಬಿಜೆಪಿಯಿಂದ ರಾಜ್ಯಪಾಲರಿಗೆ ದೂರು

Update: 2024-02-06 10:41 GMT

ಬೆಂಗಳೂರು: ಬಿಜೆಪಿ ನಿಯೋಗವು ಇಂದು ರಾಜಭವನಕ್ಕೆ ಭೇಟಿ ನೀಡಿ ರಾಜ್ಯ ಸರಕಾರದ ವಿರುದ್ಧ ದೂರು ಸಲ್ಲಿಸಿತು. ದಿನಪತ್ರಿಕೆಗಳಲ್ಲಿ ಜಾಹೀರಾತು ನೀಡಲು ರಾಜ್ಯದ ಜನರ ತೆರಿಗೆ ಹಣವನ್ನು ಬಳಸಿದ ಕುರಿತು ಆಕ್ಷೇಪಿಸುವ ಮನವಿಯನ್ನು ಅಧಿಕಾರಿಗಳ ಮೂಲಕ ರಾಜ್ಯಪಾಲರಿಗೆ ಸಲ್ಲಿಸಲಾಯಿತು.

ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ.ರಾಜೀವ್, ವಿಧಾನಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ, ಮಾಜಿ ಸಚಿವ ಹರತಾಳು ಹಾಲಪ್ಪ, ಮುಖಂಡ ಭಾಸ್ಕರ ರಾವ್, ವಕೀಲರ ಸಂಘದ ಅಧ್ಯಕ್ಷ ವಿವೇಕ ರೆಡ್ಡಿ ಅವರ ನಿಯೋಗವು ಈ ಮನವಿ ಸಲ್ಲಿಸಿತು.

ಒಕ್ಕೂಟ ವ್ಯವಸ್ಥೆಗೆ ಧಕ್ಕೆ ತರುವ ರೀತಿಯ ಮತ್ತು ಈ ಮೂಲಕ ಸಂವಿಧಾನಕ್ಕೆ ಅಗೌರವ ತರುವ ಕೆಲಸವನ್ನು ಈ ಜಾಹೀರಾತಿನ ಮೂಲಕ ರಾಜ್ಯದ ಕಾಂಗ್ರೆಸ್ ಸರಕಾರ ಮಾಡಿದೆ ಎಂದು ಮನವಿ ಗಮನ ಸೆಳೆದಿದೆ. ‘ನನ್ನ ತೆರಿಗೆ ನನ್ನ ಹಕ್ಕು’ ಎಂಬ ಶೀರ್ಷಿಕೆಯ ಈ ಜಾಹೀರಾತಿನ ಮೂಲಕ ಕೇಂದ್ರ ಸರಕಾರದ ವಿರುದ್ಧ ʻದಿಲ್ಲಿ ಚಲೋʻ ನಡೆಸಲು ಕರೆ ನೀಡಿದ್ದು ಆಘಾತಕರ ಎಂದು ತಿಳಿಸಲಾಗಿದೆ.

ರಾಜ್ಯದ ಜನರನ್ನು ತಪ್ಪು ದಾರಿಗೆಳೆಯುವ ಅಂಕಿಅಂಶಗಳನ್ನು ಈ ಜಾಹೀರಾತು ಒಳಗೊಂಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ರಾಜಕಾರಣ ಮಾಡಲು ಈ ಜಾಹೀರಾತು ಕೊಟ್ಟಿದ್ದಾರೆ. ಇದರ ವಿರುದ್ಧ ಬಿಜೆಪಿ ಆಕ್ಷೇಪ ವ್ಯಕ್ತಪಡಿಸುವುದಾಗಿ ಮನವಿ ಹೇಳಿದೆ.

ಕೇಂದ್ರ ಸರಕಾರದ ವಿರುದ್ಧ ರ್ಯಾಲಿ ಅಥವಾ ಪ್ರತಿಭಟನೆ ನಡೆಸುವ ಕುರಿತು ತಿಳಿಸಲು ಈ ಜಾಹೀರಾತು ನೀಡಿದ್ದು, ಇದು ಖಜಾನೆಯ ಹಣದ ದುರ್ಬಳಕೆ ಮತ್ತು ಮೋಸಗಾರಿಕೆ ಎಂದು ಆಕ್ಷೇಪ ಸೂಚಿಸಲಾಗಿದೆ. ರಾಜ್ಯ ಕಾಂಗ್ರೆಸ್ ಸರಕಾರದ ಈ ಜಾಹೀರಾತಿನ ಮೂಲಕ ಸಾಂವಿಧಾನಿಕ ಬಿಕ್ಕಟ್ಟು ಉದ್ಭವಿಸಿದ್ದು, ರಾಜ್ಯಪಾಲರು ಸೂಕ್ತ ಕ್ರಮ ಕೈಗೊಳ್ಳಲು ಮನವಿ ಮಾಡಲಾಗಿದೆ.

ರಾಜ್ಯದ ವಾರ್ತಾ ಮತ್ತು ಪ್ರಚಾರ ಇಲಾಖೆ ಕಮೀಷನರ್ ಅವರಿಗೆ ಇಂಥ ಜಾಹೀರಾತು ನೀಡುವುದನ್ನು ನಿಲ್ಲಿಸುವಂತೆ ನಿರ್ದೇಶನ ನೀಡಬೇಕೆಂದು ಕೂಡ ಮನವಿ ಕೋರಿದೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News