ಮುಸ್ಲಿಮರ ಕುರಿತ ವಿವಾದಾತ್ಮಕ ಹೇಳಿಕೆ | ಚಂದ್ರಶೇಖರನಾಥ ಸ್ವಾಮೀಜಿಗೆ ಡಿ.2ರಂದು ಖುದ್ದು ಹಾಜರಾಗುವಂತೆ ನೋಟಿಸ್
ಬೆಂಗಳೂರು : ಮುಸ್ಲಿಮರಿಗೆ ಮತದಾನದ ಹಕ್ಕು ರದ್ದುಪಡಿಸಲು ಕಾನೂನು ಜಾರಿಗೆ ತರಬೇಕೆಂದು ವಿವಾದಾತ್ಮಕ ಮಾತುಗಳನ್ನಾಡಿದ್ದ ವಿಶ್ವ ಒಕ್ಕಲಿಗ ಸಂಸ್ಥಾನ ಮಠದ ಚಂದ್ರಶೇಖರನಾಥ ಸ್ವಾಮೀಜಿಗೆ ಪೊಲೀಸ್ ಇಲಾಖೆ ನೋಟಿಸ್ ಜಾರಿಯಾಗಿದೆ.
ಬೆಂಗಳೂರಿನ ಉಪ್ಪಾರಪೇಟೆ ಠಾಣೆ ಪೊಲೀಸರು ನೋಟಿಸ್ ನೀಡಿದ್ದು, ಡಿಸೆಂಬರ್ 2 ರಂದು ಬೆಳಿಗ್ಗೆ 10 ಗಂಟೆಗೆ ಪೊಲೀಸ್ ಠಾಣೆಗೆ ಖುದ್ದು ಹಾಜರಾಗುವಂತೆ ನೊಟೀಸ್‌ನಲ್ಲಿ ಸ್ವಾಮೀಜಿಗೆ ಸೂಚನೆ ನೀಡಲಾಗಿದೆ.
ನ.26ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ವಕ್ಫ್ ವಿರುದ್ಧದ ಹೋರಾಟದ ವೇಳೆ ಚಂದ್ರಶೇಖರ ಸ್ವಾಮೀಜಿ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಆನಂತರ ಸ್ವಾಮೀಜಿ ಹೇಳಿಕೆ ವಿರುದ್ಧ ಆಕ್ರೋಶ ವ್ಯಕ್ತವಾಗಿತ್ತು. ಬಳಿಕ ಎಚ್ಚೆತ್ತ ಸ್ವಾಮೀಜಿ ತಮ್ಮ ಹೇಳಿಕೆಗೆ ವಿಷಾದ ವ್ಯಕ್ತಪಡಿಸಿದ್ದರು.
ಸಾಮಾಜಿಕ ಕಾರ್ಯಕರ್ತರೊಬ್ಬರು ಉಪ್ಪಾರಪೇಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಧರ್ಮ ಧರ್ಮಗಳ ಮಧ್ಯೆ ವೈರತ್ವ ಉಂಟು ಮಾಡುವ ಪ್ರಚೋದನೆ ಮಾಡಿದ ಆರೋಪ ಅಡಿಯಲ್ಲಿ ಸ್ವಾಮೀಜಿ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಕೋರಿದ್ದರು. ಇದಾದ ನಂತರ ಪೊಲೀಸರು ಚಂದ್ರಶೇಖರ ಸ್ವಾಮೀಜಿ ವಿರುದ್ಧ ಬಿಎನ್‌ಎಸ್ 299 ಅಡಿ ಎಫ್‌ಐಆರ್ ದಾಖಲು ಮಾಡಿದ್ದು, ಚಂದ್ರಶೇಖರ ಸ್ವಾಮೀಜಿಗೆ ನೋಟಿಸ್ ಜಾರಿ ಮಾಡಿದ್ದಾರೆ.