ಪಕ್ಷದ ಕಾರ್ಯಕರ್ತನಾಗಿ ಹೋರಾಟ ಮುಂದುವರಿಸುತ್ತೇನೆ : ಸೋಲಿನ ಬಳಿಕ ಡಿ.ಕೆ.ಸುರೇಶ್ ಪ್ರತಿಕ್ರಿಯೆ

Update: 2024-06-04 15:55 GMT

ಬೆಂಗಳೂರು: ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಜನರ ತೀರ್ಮಾನವನ್ನು ಸ್ವಾಗತಿಸುತ್ತಾ, ಗೆಲುವು ಸಾಧಿಸಿರುವ ಬಿಜೆಪಿ ಅಭ್ಯರ್ಥಿ ಡಾ.ಮಂಜುನಾಥ್ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಮುಂದಿನ ದಿನಗಳಲ್ಲಿ ಪಕ್ಷದ ಕಾರ್ಯಕರ್ತನಾಗಿ ಹೋರಾಟ ಮುಂದುವರಿಸುತ್ತೇನೆ ಎಂದು ನಿಕಟಪೂರ್ವ ಸಂಸದ ಡಿ.ಕೆ.ಸುರೇಶ್ ತಿಳಿಸಿದ್ದಾರೆ.

ಮಂಗಳವಾರ ಫಲಿತಾಂಶದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಕ್ಷೇತ್ರದ ಲೋಕಸಭಾ ಸದಸ್ಯನಾಗಿ ಕೆಲಸ ಮಾಡಲು ಜನತೆ ಮೂರು ಬಾರಿ ಅವಕಾಶ ನೀಡಿದ್ದರು. ನಾಲ್ಕನೇ ಬಾರಿಯ ಅಗ್ನಿಪರೀಕ್ಷೆಯಲ್ಲಿ ವಿರಾಮ ನೀಡಿದ್ದಾರೆ. ಕ್ಷೇತ್ರದ ಮತದಾರರಿಗೆ ಧನ್ಯವಾದಗಳು. ನನಗೆ ಮತ ಹಾಕಿರುವ, ಪಕ್ಷಕ್ಕಾಗಿ ಕೆಲಸ ಮಾಡಿರುವ ಕಾರ್ಯಕರ್ತರು ಹಾಗೂ ಮುಖಂಡರಿಗೆ ಧನ್ಯವಾದಗಳು ಎಂದು ತಿಳಿಸಿದರು.

‘ಚುನಾವಣೆಗೆ ಸ್ಪರ್ಧಿಸಲು ಅವಕಾಶ ಮಾಡಿಕೊಟ್ಟ ಪಕ್ಷದ ನಾಯಕರಾದ ಸೋನಿಯಾ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಇತರೆ ನಾಯಕರಿಗೂ ಧನ್ಯವಾದ ತಿಳಿಸುತ್ತೇನೆ. ಕನ್ನಡಿಗರ ಧ್ವನಿಯಾಗಿ, ಕ್ಷೇತ್ರದ ಅಭಿವೃದ್ಧಿಗೆ ನಾನು ಕೆಲಸ ಮಾಡಿದ್ದೇನೆ. ಜನ ಹೊಸಬರಿಗೆ ಅವಕಾಶ ನೀಡಿದ್ದಾರೆ. ಅವರು ಉತ್ತಮವಾಗಿ ಕೆಲಸ ಮಾಡಲಿ. ರಾಜ್ಯ, ಕ್ಷೇತ್ರಕ್ಕೆ ಒಳ್ಳೆಯದಾಗಲಿ' ಎಂದು ಅವರು ಅಭಿಪ್ರಾಯಪಟ್ಟರು.

ಪಕ್ಷದ ಕಾರ್ಯಕರ್ತರು ಧೃತಿಗೆಡುವ ಅಗತ್ಯವಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಾವು ಸೋಲು, ಗೆಲುವನ್ನು ಸಮಾನವಾಗಿ ಸ್ವೀಕಾರ ಮಾಡಬೇಕು. ನಾನು ಗೆಲ್ಲುವ ಬಗ್ಗೆ ಶೇ.100ರಷ್ಟು ನಂಬಿಕೆ ಇತ್ತು. ನಾನು ಮಾಡಿದ ಅಭಿವೃದ್ಧಿ ಕೆಲಸಗಳಿಗೆ ಮನ್ನಣೆ ಸಿಗುವ ವಿಶ್ವಾಸವಿತ್ತು. ಆದರೆ ನನಗೆ ವಿಶ್ರಾಂತಿ ನೀಡಿದ್ದಾರೆ. ಈಗ ಪಕ್ಷದ ಕಾರ್ಯಕರ್ತನಾಗಿ ಕೆಲಸ ಮಾಡುತ್ತೇನೆ’ ಎಂದು ಅವರು ಹೇಳಿದರು.

ತಂತ್ರ-ಕುತಂತ್ರ ಕೆಲಸ ಮಾಡಿವೆ: ‘ರಾಜಕಾರಣದಲ್ಲಿ ತಂತ್ರ, ಕುತಂತ್ರಗಳು ಕೆಲಸ ಮಾಡುತ್ತವೆ. ಈಗಲೂ ಅವು ಕೆಲಸ ಮಾಡಿದ್ದು, ಅದನ್ನು ನಾವು ಸ್ವಾಗತ ಮಾಡಬೇಕು. ಇದರಿಂದ ಹಿಂದೆ ಸರಿಯುವ ಪ್ರಶ್ನೆಯಿಲ್ಲ. ಜನರ ತೀರ್ಮಾನವೇ ಅಂತಿಮ. ಮುಂದಿನ ದಿನಗಳಲ್ಲೂ ಹೋರಾಟ ಮುಂದುವರಿಸುತ್ತೇನೆ. ನನಗೆ ರಾಜಕಾರಣ, ರಾಜಕೀಯ ಜೀವನ ಅನಿವಾರ್ಯವಲ್ಲ. ನಾನು ಕ್ಷೇತ್ರದ ಅಭಿವೃದ್ಧಿ ದೃಷ್ಟಿಯಿಂದ ಕೆಲಸ ಮಾಡಿದ್ದೇನೆ’ ಎಂದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News