ಕಸದ ಶುಲ್ಕ ಸಂಬಂಧ ಬಿಬಿಎಂಪಿ ಹೊರಡಿಸಿದ ಆಜ್ಞೆಯು ದಿಗ್ಭ್ರಮೆ ಮೂಡಿಸುವಂತಿದೆ: ಡಾ.ಅಶ್ವತ್ಥನಾರಾಯಣ್

Update: 2025-04-09 22:12 IST
ಕಸದ ಶುಲ್ಕ ಸಂಬಂಧ ಬಿಬಿಎಂಪಿ ಹೊರಡಿಸಿದ ಆಜ್ಞೆಯು ದಿಗ್ಭ್ರಮೆ ಮೂಡಿಸುವಂತಿದೆ: ಡಾ.ಅಶ್ವತ್ಥನಾರಾಯಣ್
  • whatsapp icon

ಬೆಂಗಳೂರು : ಕಸದ ಶುಲ್ಕ ಸಂಬಂಧ ಬಿಬಿಎಂಪಿ ಹೊರಡಿಸಿದ ಆಜ್ಞೆಯು ದಿಗ್ಭ್ರಮೆ ಮೂಡಿಸುವಂತಿದೆ ಹಾಗೂ ತೀವ್ರ ವಿದ್ಯುತ್ ಆಘಾತದಂತಿದೆ ಎಂದು ಮಾಜಿ ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ್ ತಿಳಿಸಿದ್ದಾರೆ.

ಬುಧವಾರ ಮಲ್ಲೇಶ್ವರದಲ್ಲಿರುವ ಬಿಜೆಪಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜವಾಬ್ದಾರಿ ಇಲ್ಲದೆ, ಮನ ಬಂದಂತೆ ಜನರ ಮೇಲೆ 2025-26ನೇ ಸಾಲಿಗೆ ತಮ್ಮ ಆಸ್ತಿ ತೆರಿಗೆ ಜೊತೆಯಲ್ಲಿ ಬಳಕೆದಾರರ ತ್ಯಾಜ್ಯ ಶುಲ್ಕ ಮತ್ತು ಸುಂಕವನ್ನು ವಿಧಿಸಲಾಗುತ್ತಿದೆ ಎಂದು ಟೀಕಿಸಿದರು.

ದೊಡ್ಡ ಬರೆಯನ್ನು, ದೊಡ್ಡ ಮೊತ್ತವನ್ನು ವಸತಿಗಳ ಮೇಲೆ, ಹೋಟೆಲ್ ಮತ್ತಿತರ ವಾಣಿಜ್ಯ ಸಂಸ್ಥೆಗಳ ಮೇಲೆ ಹಾಕಿದ್ದಾರೆ. ಎ.5ರಂದು ಹೊರಡಿಸಿದ ಈ ಸುತ್ತೋಲೆ ಕಾನೂನಿನ ಪರಿಜ್ಞಾನವಿಲ್ಲದೆ ಮಾಡಿದಂತಿದೆ. ವಸತಿಗಳ ಮೇಲೆ ಜಾಗದ ಬದಲಾಗಿ ವಸತಿಯ ವಿಸ್ತೀರ್ಣವನ್ನು ಆಧರಿಸಿ ಸೆಸ್ ಶುಲ್ಕದ ಜೊತೆಗೆ ಬಳಕೆದಾರರ ತೆರಿಗೆ ವಿಧಿಸಿದ್ದಾರೆ ಎಂದು ಅಶ್ವತ್ಥ ನಾರಾಯಣ್ ತಿಳಿಸಿದರು.

600 ಚದರ ಅಡಿ ಮೇಲಿರುವವರಿಗೆ 10 ರೂ., 1000 ದಿಂದ 2 ಸಾವಿರ ಚದರ ಅಡಿಗೆ 100 ರೂ. ತಿಂಗಳಿಗೆ ವಿಧಿಸಲಿದ್ದಾರೆ. ತಿಂಗಳು ಮತ್ತು ವರ್ಷ ಎಂದು ನಿನ್ನೆ ಸ್ಪಷ್ಟೀಕರಣ ನೀಡಿದ್ದಾರೆ. ತ್ಯಾಜ್ಯ ಶುಲ್ಕ ಪ್ರತಿ ತಿಂಗಳ ಬದಲಾಗಿ ಒಮ್ಮೆಲೆ ಮುಂಚಿತವಾಗಿಯೇ ಸಂಗ್ರಹಿಸುತ್ತಿದ್ದಾರೆ ಎಂದು ಅವರು ಆಕ್ಷೇಪಿಸಿದರು.

ಖಾಲಿ ಜಾಗ 1.10 ಲಕ್ಷ ಚದರ ಅಡಿಗೆ 2024-25ರಲ್ಲಿ ಆಸ್ತಿ ತೆರಿಗೆ 38,105 ರೂ. ಇತ್ತು. ವಿನಾಯಿತಿ ರಹಿತವಾಗಿ 40,110 ರೂ.ಇದೆ. ಘನತ್ಯಾಜ್ಯ ಬಳಕೆ ಶುಲ್ಕದ ರೂಪದಲ್ಲಿ 66,320 ರೂ.ವಿಧಿಸಿದ್ದಾರೆ. ವಸತಿಯೇತರ ಉದ್ದೇಶ ಅಥವಾ ವಾಣಿಜ್ಯ ಉದ್ದೇಶದ ಬಳಕೆಗೆ ಸಂಬಂಧಿಸಿ, ಬಾಡಿಗೆ ಕಟ್ಟಡಕ್ಕೆ 1 ಸಾವಿರ ಚದರ ಅಡಿ ಮೇಲಿದ್ದರೆ ವರ್ಷಕ್ಕೆ 2 ಸಾವಿರ ರೂ., ಸಾವಿರದಿಂದ 2 ಸಾವಿರ ಚದರ ಅಡಿಗೆ 6 ಸಾವಿರ ರೂ., 2 ಸಾವಿರದಿಂದ 5 ಸಾವಿರ ಚದರ ಅಡಿಗೆ 14 ಸಾವಿರ ರೂ., 5 ಸಾವಿರದಿಂದ 10 ಸಾವಿರ ಇದ್ದಲ್ಲಿ 38 ಸಾವಿರ ರೂ., 10 ಸಾವಿರದಿಂದ 20 ಸಾವಿರ ಚದರ ಅಡಿಗೆ 70 ಸಾವಿರ ರೂ., ಗರಿಷ್ಠ 5 ಲಕ್ಷ ಚದರಡಿಗಿಂತ ಹೆಚ್ಚಿದ್ದರೆ 35 ಲಕ್ಷ ರೂ. ವಿಧಿಸುತ್ತಾರೆ ಎಂದು ಅವರು ಮಾಹಿತಿ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ಬಿಬಿಎಂಪಿ ವಿರೋಧ ಪಕ್ಷದ ಮಾಜಿ ನಾಯಕ ಪದ್ಮನಾಭ ರೆಡ್ಡಿ, ಬಿಜೆಪಿ ಬೆಂಗಳೂರು ಉತ್ತರ ಜಿಲ್ಲಾಧ್ಯಕ್ಷ ಎಸ್.ಹರೀಶ್, ಬೆಂಗಳೂರು ಕೇಂದ್ರ ಜಿಲ್ಲಾಧ್ಯಕ್ಷ ಸಪ್ತಗಿರಿ ಗೌಡ, ರಾಜ್ಯ ವಕ್ತಾರ ಎಚ್.ವೆಂಕಟೇಶ್ ದೊಡ್ಡೇರಿ ಉಪಸ್ಥಿತರಿದ್ದರು.


Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News