ಜನಚಳವಳಿಯ ಮೂಲಕ 'ಕಸಾಪ'ವನ್ನು ಉಳಿಸಿಕೊಳ್ಳಬೇಕಿದೆ : ಡಾ.ಕೆ.ಮರುಳಸಿದ್ದಪ್ಪ

ಬೆಂಗಳೂರು : ರಾಜ್ಯ ಸರಕಾರ ಕನ್ನಡ ಸಾಹಿತ್ಯ ಪರಿಷತ್‌ನ ವಿರುದ್ದ ಸಣ್ಣ ಕ್ರಮ ಜರುಗಿ ಸಿದರೂ, ವಿಪಕ್ಷವು ಸಾಂಸ್ಕೃತಿಕ ಹಲ್ಲೆ ಮಾಡುತ್ತಿದೆ ಎಂದು ಸರಕಾರವನ್ನು ಟೀಕಿಸುತ್ತದೆ. ಹೀಗಾಗಿ ನಾವು ಜನ ಚಳವಳಿಗಳ ಮೂಲಕ ಅಧ್ಯಕ್ಷ ಮಹೇಶ್ ಜೋಶಿಯಿಂದ ಸಾಹಿತ್ಯ ಪರಿಷತ್‌ಅನ್ನು ಉಳಿಸಿಕೊಳ್ಳಬೇಕಾಗಿದೆ ಎಂದು ಸಾಹಿತಿ ಡಾ.ಕೆ.ಮರುಳಸಿದ್ದಪ್ಪ ಕರೆ ನೀಡಿದ್ದಾರೆ.
ಗುರುವಾರ ಗಾಂಧಿ ಭವನದಲ್ಲಿ ಆಯೋಜಿಸಿದ್ದ 'ಸ್ವಾಯತ್ತ ಕನ್ನಡ ಸಾಹಿತ್ಯ ಪರಿಷತನ್ನು ಸರ್ವಾಧಿಕಾರಿ ಧೋರಣೆಯಿಂದ ರಕ್ಷಿಸಲು ಸಮಾನ ಮನಸ್ಕರ ಸಮಾಲೋಚನಾ ಸಭೆ'ಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಇಂದು ಪರಿಷತ್ ಕೇವಲ ಹಣದಿಂದ ಮಾತ್ರ ಕೆಟ್ಟಿಲ್ಲ, ಜಾತಿಯಿಂದಲೂ ಅಪವಿತ್ರವಾಗಿದೆ. ಇದನ್ನು ಹೋಗಲಾಡಿಸಲು ಸಾಧ್ಯವೇ ಇಲ್ಲ ಎನಿಸುತ್ತಿದೆ. ಹೀಗಾಗಿ ಪರಿಷತ್‌ಗೆ ಮೂಲಭೂತ ಬದಲಾವಣೆಯನ್ನು ತರಬೇಕಾಗಿದೆ ಎಂದರು.
ಮಹೇಶ್ ಜೋಶಿ ನಗರದ ಪಂಪ ಕವಿ ರಸ್ತೆಯ ಹೆಸರನ್ನು ಬದಲಾಯಿಸಲು ಹೊರಟಿದ್ದರು. ಅವರಿಗೆ ಕನ್ನಡ ಸಾಹಿತ್ಯದ ಬಗ್ಗೆ ಸ್ವಲ್ಪವಾದರೂ ತಿಳಿವಳಿಕೆ ಇದೆಯೇ ಎಂದು ಅವರು ಪ್ರಶ್ನಿಸಿದರು.
ಸಭೆಯಲ್ಲಿ ಹೋರಾಟಗಾರ್ತಿ ಸುನಂದಾ ಜಯರಾಂ, ಮಂಡ್ಯ ಜಿಲ್ಲಾ ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಜಯಪ್ರಕಾಶ್ ಗೌಡ, ಕಲಾವಿದ ಶ್ರೀನಿವಾಸ ಕಪ್ಪಣ್ಣ, ಸಾಮಾಜಿಕ ಹೋರಾಟಗಾರ ಹನುಮೇಗೌಡ, ದಲಿತ ಮುಖಂಡ ಮಾವಳ್ಳಿ ಶಂಕರ್, ಜಾಣಗೆರೆ ವೆಂಕಟರಾಮಯ್ಯ, ವಿಧಾನ ಪರಿಷತ್ ಮಾಜಿ ಸದಸ್ಯ ಶ್ರೀಕಂಠೇಗೌಡ, ಡಾ.ವಸುಂಧರಾ ಭೂಪತಿ, ವಿಮಲಾ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಸ್ವತಂತ್ರವಾಗಿ ನಡೆದುಕೊಳ್ಳುವ ಪರಿಷತ್‌ನ ಜಿಲ್ಲಾಧ್ಯಕ್ಷರ ಮೇಲೆ ಮಹೇಶ್ ಜೋಶಿ ಕಿರುಕುಳ ನೀಡುತ್ತಿದ್ದಾರೆ. ಅಲ್ಲದೇ, ಅನುಚಿತ ನಡವಳಿಕೆಯಿಂದ ಅಧ್ಯಕ್ಷ ಸ್ಥಾನದ ಗೌರವ ಕಳೆಯುತ್ತಿದ್ದರೂ, ಸರಕಾರ ಮತ್ತು ಸಾಂಸ್ಕೃತಿಕ ವಲಯ ಸುಮ್ಮನಿರುವುದು ವಿಪರ್ಯಾಸ.
-ಪ್ರೊ.ಎಸ್.ಜಿ.ಸಿದ್ದರಾಮಯ್ಯ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ
ಸಭೆಯ ನಿರ್ಣಯಗಳು
1.ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿನ ಆರ್ಥಿಕ ಅಶಿಸ್ತು ಪ್ರಶ್ನಿಸಿ, ವಿಚಾರಣೆ ನಡೆಸಬೇಕು. ಪರಿಷತ್ತಿನ ಅಧ್ಯಕ್ಷ ಸ್ಥಾನದಿಂದ ಮಹೇಶ್ ಜೋಶಿಯನ್ನು ಕೂಡಲೇ ಅಮಾನತು ಮಾಡಿ, ಆಡಳಿತಾಧಿಕಾರಿಯನ್ನು ನೇಮಕ ಮಾಡಬೇಕು.
2. ಕಸಾಪ ಅಧ್ಯಕ್ಷರಿಗೆ ನೀಡಿರುವ ಸಚಿವ ಸ್ಥಾನಮಾನವನ್ನು ತಕ್ಷಣ ಹಿಂಪಡೆಯಬೇಕು.
3. ಪರಿಷತ್ತಿನ ಅಧ್ಯಕ್ಷರ ಅಧಿಕಾರಾವಧಿಯನ್ನು 5 ವರ್ಷದಿಂದ 3 ವರ್ಷಗಳಿಗೆ ಇಳಿಸಬೇಕು.
4. ಇತ್ತೀಚೆಗೆ ಪರಿಷತ್ತಿನ ಬೈಲಾಗೆ ತಂದಿರುವ 2 ತಿದ್ದುಪಡಿಗಳನ್ನು ರದ್ದುಗೊಳಿಸಬೇಕು.
5. ಅಧ್ಯಕ್ಷರ ಸರ್ವಾಧಿಕಾರಿ ಧೋರಣೆಯನ್ನು ಖಂಡಿಸಬೇಕು.
6. ಅಮಾನತುಗೊಳಿಸಿರುವ ಸದಸ್ಯರನ್ನು ವಾಪಸ್ಸು ಪಡೆಯಬೇಕು.
7. ಸಮ್ಮೇಳನಕ್ಕೆ ಬೇಡಿಕೆ ಇಟ್ಟಿರುವ 40 ಕೋಟಿ ರೂ. ಅನುದಾನ ರಾಜ್ಯ ಸರಕಾರ ನೀಡುವುದನ್ನು ತಡೆಯಬೇಕು.
........................