ಖಾಲಿಯಿರುವ ಗ್ರಾ.ಪಂ.ಸದಸ್ಯ ಸ್ಥಾನಗಳಿಗೆ ಚುನಾವಣಾ ವೇಳಾಪಟ್ಟಿ ಪ್ರಕಟ; ಮೇ 11ರಂದು ಚುನಾವಣೆ
Update: 2025-04-10 21:59 IST
ಸಾಂದರ್ಭಿಕ ಚಿತ್ರ | PTI
ಬೆಂಗಳೂರು : ರಾಜ್ಯದ 222 ಗ್ರಾಮ ಪಂಚಾಯಿತಿಗಳಲ್ಲಿ ಸುಮಾರು 260 ಚುನಾಯಿತ ಸದಸ್ಯ ಸ್ಥಾನಗಳು ಖಾಲಿಯಿದ್ದು, ರಾಜ್ಯ ಚುನಾವಣಾ ಆಯೋಗವು ವೇಳಾಪಟ್ಟಿಯನ್ನು ಪ್ರಕಟಿಸಿದೆ. ಮೇ 11ರಂದು ಚುನಾವಣೆಯನ್ನು ನಡೆಸುವುದಾಗಿ ಪ್ರಕಟಿಸಿದೆ.
ಎ.22ರಂದು ಆಯಾ ಜಿಲ್ಲಾಧಿಕಾರಿಗಳು ಚುನಾವಣಾ ಅಧಿಸೂಚನೆಯನ್ನು ಹೊರಡಿಸಲಿದ್ದು, ಅಂದಿನಿಂದ ಮೇ 14ರ ವರೆಗೆ ಚುನಾವಣೆ ನಡೆಯುವ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುತ್ತದೆ. ಎ.28ರೊಳಗೆ ನಾಮಪತ್ರವನ್ನು ಸಲ್ಲಿಸಲು ಕೊನೆಯ ದಿನಾಂಕವಾಗಿದೆ.
ನಾಮಪತ್ರ ಹಿಂಪಡೆಯಲು ಮೇ 2 ಕೊನೆಯ ದಿನವಾಗಿದ್ದು, ಮೇ 11ರ ಬೆಳಗ್ಗೆ 7ರಿಂದ ಸಂಜೆ 5 ಗಂಟೆಯ ವರೆಗೆ ಮತದಾನ ನಡೆಯಲಿದೆ. ಮರು ಮತದಾನ ಮಾಡುವ ಅವಶ್ಯಕತೆ ಇದ್ದಲ್ಲಿ, ಮೇ 13ರಂದು ಮರು ಮತದಾನ ನಡೆಯಲಿದೆ. ಮೇ 14ರಂದು ಮತ ಎಣಿಕೆ ನಡೆಯಲಿದ್ದು, ಫಲಿತಾಂಶ ಹೊರಬೀಳಲಿದೆ.