ಬಟ್ಟೆ ಸ್ವಚ್ಚವಾಗಿಲ್ಲ ಎಂಬ ಕಾರಣಕ್ಕೆ ರೈತನಿಗೆ ಮೆಟ್ರೋ ಪ್ರಯಾಣ ನಿರಾಕರಣೆ: ಸಿಬ್ಬಂದಿ ವಜಾ
ಬೆಂಗಳೂರು: ಬಟ್ಟೆ ಸ್ವಚ್ಚವಾಗಿಲ್ಲ, ಗಲೀಜಾಗಿದೆಯೆಂದು ವ್ಯಕ್ತಿಯೊಬ್ಬನ್ನು ಮೆಟ್ರೊ ಒಳಗೆ ಬಿಡದ ಸಿಬ್ಬಂದಿಯನ್ನು ವಜಾಗೊಳಿಸಲಾಗಿದೆ ಎಂದು ಎಂಡಿ ಮಹೇಶ್ವರನ್ ಮಾಹಿತಿ ನೀಡಿದ್ದಾರೆ.
ಹಾಕಿಕೊಂಡಿರುವ ಬಟ್ಟೆಯು ಸ್ವಚ್ಚವಾಗಿಲ್ಲ ಎಂದು ರೈತನೊಬ್ಬನ್ನು ಮೆಟ್ರೋ ಪ್ರವೇಶಿಸಲು ಅವಕಾಶ ನೀಡದೆ ಅವಮಾನ ಮಾಡಿದ ಘಟನೆ ಬೆಂಗಳೂರು ನಗರದಲ್ಲಿ ನಡೆದಿದ್ದು, ಸಾಮಾಜಿಕ ಜಾಲತಾಣದಲ್ಲಿ ಈ ಸಂಬಂಧ ಭಾರೀ ಆಕ್ರೋಶ ವ್ಯಕ್ತವಾಗಿದೆ.
ಬೆಂಗಳೂರಿನ ರಾಜಾಜಿನಗರದ ಮೆಟ್ರೋ ಸ್ಟೇಷನ್‌ನಲ್ಲಿ ಮೆಟ್ರೋ ಸಿಬ್ಬಂದಿಗಳು ನಡೆಸಿರುವ ಈ ವರ್ತನೆ ಸಹಪ್ರಯಾಣಿಕರೊಬ್ಬರ ಮೊಬೈಲ್‌ನಲ್ಲಿ ಸೆರೆಯಾಗಿದೆ.
ನಂತರ ಸಹಪ್ರಯಾಣಿಕರು ಸಿಬ್ಬಂದಿ ಮಾತನ್ನು ಲೆಕ್ಕಿಸದೆ, ರೈತನನ್ನು ಮೆಟ್ರೋದಲ್ಲಿ ಕರೆದುಕೊಂಡು ಹೋಗಿದ್ದಾರೆ. ಎಂದು ಹೇಳಲಾಗಿದೆ.
ವ್ಯಕ್ತಿಯೊಬ್ಬ ತಲೆಯ ಮೇಲೆ ಬಟ್ಟೆಯ ಮೂಟೆಯೊಂದನ್ನು ಹೊತ್ತುಕೊಂಡು ಮೆಟ್ರೋ ನಿಲ್ದಾಣಕ್ಕೆ ಹೋಗಿದ್ದಾರೆ. ಈ ವೇಳೆ ತಪಾಸಣಾ ಸಿಬ್ಬಂದಿ ಅವರನನು ತಡೆದಿದ್ದಾರೆ. ಆಗ ಅದನ್ನು ನೋಡಿದ ಸಹಪ್ರಯಾಣಿಕರೊಬ್ಬರು ಅವರನ್ನು ಯಾಕೆ ಒಳಗೆ ಬಿಡುತ್ತಿಲ್ಲ ಎಂದು ಪ್ರಶ್ನಿಸಿದ್ದಾರೆ. ಆಗ ಸಿಬ್ಬಂದಿ ಅವರ ಬಟ್ಟೆ ಗಲೀಜಾಗಿದೆ, ಹೀಗಿದ್ದರೆ ಸಹ ಪ್ರಯಾಣಿಕರಿಗೆ ತೊಂದರೆಯಾಗುತ್ತದೆ. ಆ ಕಾರಣಕ್ಕಾಗಿ ಒಳಗೆ ಬಿಡಲಾಗುತ್ತಿಲ್ಲ ಎಂದು ಹೇಳಿದ್ದರು.
ಬಳಿಕ ಮೆಟ್ರೋದಲ್ಲಿ ಪ್ರಯಾಣಿಕರು ಓಡಾಡುವಾಗ ಯಾವ ಬಟ್ಟೆ ಧರಿಸಬೇಕು ಎಂದು ಎಲ್ಲಾದರೂ ನಿಯಮ ಇದೆಯಾ ಎಂದು ಪ್ರಶ್ನಿಸಿದ ಪ್ರಯಾಣಿಕರು ಸಿಬ್ಬಂದಿಯನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.