ಓಂ ಪ್ರಕಾಶ್ ಪತ್ನಿ ತಪ್ಪೊಪ್ಪಿಗೆ, ತನಿಖೆ ಮುಂದುವರಿದಿದೆ: ಜಿ.ಪರಮೇಶ್ವರ್
ಬೆಂಗಳೂರು: ನಿವೃತ್ತ ಡಿಜಿ-ಐಜಿಪಿ ಓಂ ಪ್ರಕಾಶ್ ಹತ್ಯೆ ಪ್ರಕರಣದ ತನಿಖೆ ಮುಂದುವರೆದಿದ್ದು, ಪ್ರಕರಣದ ಪ್ರಮುಖ ರೂವಾರಿ ಪತ್ನಿ ಪಲ್ಲವಿ ಅಪರಾಧವನ್ನು ಒಪ್ಪಿಕೊಂಡಿದ್ದಾರೆ ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್ ಹೇಳಿದ್ದಾರೆ.
ಮಂಗಳವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಸಿಬಿ ತನಿಖೆಯಿಂದ ಹತ್ಯೆ ಕಾರಣ ಎಲ್ಲವೂ ಬಯಲಾಗಿದೆ. ಕೊಲೆಗೆ ಸಂಬಂಧಿಸಿದಂತೆ ಅವರ ಪತ್ನಿ ಪಲ್ಲವಿಯನ್ನು ಪೊಲೀಸರು ಈಗಾಗಲೇ ಬಂಧಿಸಿದ್ದು, ಆಕೆ ಅಪರಾಧವನ್ನು ಒಪ್ಪಿಕೊಂಡಿದ್ದಾರೆ ಎಂದು ತಿಳಿಸಿದರು.
ಮೊಬೈಲ್ ಫೋನ್‍ನಿಂದ ಯಾವುದೇ ಮಾಹಿತಿ ಲಭ್ಯವಾಗಿದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, ಈ ಬಗ್ಗೆ ನನಗೆ ಗೊತ್ತಿಲ್ಲ. ತನಿಖೆಯ ಸಮಯದಲ್ಲಿ ಆ ಎಲ್ಲ ವಿಷಯಗಳನ್ನು ಪರಿಶೀಲಿಸಲಾಗುವುದು ಎಂದೂ ಪರಮೇಶ್ವರ್ ಉಲ್ಲೇಖಿಸಿದರು.
ನಿವೃತ್ತ ಪೊಲೀಸ್ ಮಹಾನಿರ್ದೇಶಕ ಓಂ ಪ್ರಕಾಶ್ ಹತ್ಯೆ ಬೆನ್ನಲ್ಲೇ ಪ್ರಕರಣ ದಾಖಲಿಸಿಕೊಂಡು ತನಿಖೆ ಚುರುಕುಗೊಳಿಸಿದ್ದ ಎಚ್‍ಎಸ್‍ಆರ್ ಲೇಔಟ್ ಠಾಣೆ ಪೊಲೀಸರು, ವಿಚಾರಣೆ ವೇಳೆ ಪತ್ನಿ ಪಲ್ಲವಿ (64) ತಪ್ಪೊಪ್ಪಿಕೊಂಡಿದ್ದರಿಂದ ಅವರನ್ನು ಬಂಧಿಸಿದ್ದರು. ಸದ್ಯದ ಮಟ್ಟಿಗೆ ಹತ್ಯೆಯಲ್ಲಿ ಪುತ್ರಿ ಕೃತಿ ವಿರುದ್ಧ ಸಾಕ್ಷ್ಯಾಧಾರಗಳು ಲಭಿಸದ ಹಿನ್ನೆಲೆಯಲ್ಲಿ ಆಕೆಯನ್ನ ಪೊಲೀಸರು ಬಿಟ್ಟು ಕಳುಹಿಸಿದ್ದಾರೆ.