ಬೆಂಗಳೂರಿನಲ್ಲಿ ಅನಧಿಕೃತ ಜಾಹೀರಾತುಗಳ ತೆರವಿಗಾಗಿ ಮಾರ್ಗಸೂಚಿ ಪ್ರಕಟ

Update: 2025-04-24 21:40 IST
ಬೆಂಗಳೂರಿನಲ್ಲಿ ಅನಧಿಕೃತ ಜಾಹೀರಾತುಗಳ ತೆರವಿಗಾಗಿ ಮಾರ್ಗಸೂಚಿ ಪ್ರಕಟ

ತುಷಾರ್ ಗಿರಿನಾಥ್

  • whatsapp icon

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ದಿನೇ ದಿನೇ ಅನಧಿಕೃತ ಜಾಹೀರಾತುಗಳು ಹೆಚ್ಚಾಗುತ್ತಿದ್ದು, ನಗರದಲ್ಲಿ ಅನಧಿಕೃತ ಫ್ಲೆಕ್ಸ್, ಬ್ಯಾನರ್, ಕಟೌಟ್ ಹಾಗೂ ಇನ್ನಿತರೆ ಜಾಹೀರಾತು ಪ್ರದರ್ಶನಗಳನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಲು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಮಾರ್ಗಸೂಚಿಯನ್ನು ಹೊರಡಿಸಿದ್ದಾರೆ.

ವಲಯ ವ್ಯಾಪ್ತಿಯಲ್ಲಿ ಅನಧಿಕೃತವಾಗಿ ಅಳವಡಿಸಲಾಗಿರುವ / ಅಳವಡಿಸುವ ಪ್ಲೆಕ್ಸ್, ಬ್ಯಾನರ್, ಕಟೌಟ್ ಹಾಗೂ ಇನ್ನಿತರೆ ಜಾಹೀರಾತು ಪ್ರದರ್ಶನಗಳನ್ನು ತೆರವುಗೊಳಿಸಲು, ಮಾರ್ಷಲ್ಸ್ ಸಹಯೋಗದೊಂದಿಗೆ ಕಿರಿಯ ಅಭಿಯಂತರರು / ಸಹಾಯಕ ಅಭಿಯಂತರರು / ಸಹಾಯಕ ಕಾರ್ಯಪಾಲಕ ಅಭಿಯಂತರರ ತಂಡಗಳನ್ನು ವಲಯ ಆಯುಕ್ತರು ರಚಿಸಬೇಕು.

ವಲಯ ವ್ಯಾಪ್ತಿಯಲ್ಲಿ ಅನಧಿಕೃತವಾಗಿ ಫ್ಲೆಕ್ಸ್, ಬ್ಯಾನರ್ ಕಟೌಟ್ ಹಾಗೂ ಇನ್ನಿತರೆ ಜಾಹೀರಾತುಗಳನ್ನು ತೆಗೆದುಹಾಕುವ ಹಾಗೂ ಅನಧಿಕೃತವಾಗಿ ಅಳವಡಿಸಲಾಗಿರುವವರ ವಿರುದ್ಧ ಸಂಬಂಧಪಟ್ಟ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಿಸುವ ಹಾಗೂ ದಂಡ ವಿಧಿಸುವ ಕಾರ್ಯದ ಮೇಲ್ವಿಚಾರಣೆ ಅಧಿಕಾರವನ್ನು ಸಂಬಂಧಪಟ್ಟ ಉಪ ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರರಿಗೆ ನೀಡಲಾಗಿದೆ. ವಾರ್ಡ್ ಮಟ್ಟದಲ್ಲಿ ವಾರ್ಡ್‍ನ ಕಿರಿಯ/ಸಹಾಯಕ ಅಭಿಯಂತರರಿಗೆ ನೀಡಲಾಗಿದೆ ಎಂದು ಮಾರ್ಗಸೂಚಿಯಲ್ಲಿ ತಿಳಿಸಿದೆ.

ಅನಧಿಕೃತ ಫ್ಲೆಕ್ಸ್, ಬ್ಯಾನರ್, ಕಟೌಟ್ ಹಾಗೂ ಇನ್ನಿತರೆ ಜಾಹೀರಾತು ಪ್ರದರ್ಶನದ ಬಗ್ಗೆ ದೂರುಗಳನ್ನು ಸ್ವೀಕರಿಸಲು ಸಹಾಯಕ ಕಾರ್ಯಪಾಲಕ ಅಭಿಯಂತರವರ ಕಚೇರಿಯಲ್ಲಿ ನಿಯಂತ್ರಣ ಕೊಠಡಿಯನ್ನು ತೆರೆಯಬೇಕು. ಬಿಬಿಎಂಪಿ ಜಾಹೀರಾತು ನಿಂಯತ್ರಣ ತಂಡವು ಸಂಬಂಧಪಟ್ಟ ಪೊಲೀಸ್ ಠಾಣೆಯೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ತಮ್ಮ ನಿಯಂತ್ರಣ ಕೊಠಡಿ ದೂರವಾಣಿ ಸಂಖ್ಯೆಯನ್ನು ಪೊಲೀಸ್ ಠಾಣೆಗೆ ನೀಡಬೇಕು ಎಂದು ಮಾರ್ಗಸೂಚಿಯಲ್ಲಿ ಉಲ್ಲೇಖಿಸಲಾಗಿದೆ.

ಅನಧಿಕೃತ ಫ್ಲೆಕ್ಸ್, ಬ್ಯಾನರ್, ಕಟೌಟ್ ಹಾಗೂ ಇನ್ನೀತರೆ ಜಾಹೀರಾತುಗಳನ್ನು ಮುದ್ರಿಸಿದ ಮುದ್ರಕರು ಕಂಡು ಬಂದಲ್ಲಿ ಅಂತಹವರ ವಿರುದ್ದ ಪ್ರಚೋದನೆ ಹಾಗೂ ಸಹ-ಸಂಚುಕೊರರೆಂದು ಪರಿಗಣಿಸಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು. ಪ್ರತಿಯೊಂದು ಅನಧಿಕೃತ ಜಾಹೀರಾತುಗಳನ್ನು ತೆಗೆದುಹಾಕಲು ತಗಲುವ ವೆಚ್ಚವನ್ನು ಜಾಹೀರಾತು ಅಳವಡಿಸಿದ ವ್ಯಕ್ತಿಗಳಿಂದ ಬಡ್ಡಿ ಮತ್ತು ದಂಡಗಳೊಂದಿಗೆ ವಸೂಲಿ ಮಾಡಬೇಕು ಎಂದು ತಿಳಿಸಿದೆ.

ಮಾರ್ಗಸೂಚಿಯನ್ನು ಕಟ್ಟುನಿಟ್ಟಾಗಿ ಅನುಷ್ಠಾನಕ್ಕೆ ತರುವ ನಿಟ್ಟಿನಲ್ಲಿ ಜಂಟಿ ಆಯುಕ್ತರನ್ನು ನೋಡಲ್ ಅಧಿಕಾರಿಯನ್ನಾಗಿ ಹಾಗೂ ವಲಯ ಆಯುಕ್ತರನ್ನು ಒಟ್ಟಾರೆ ಮೇಲ್ವಿಚಾರಣೆ ಅಧಿಕಾರಿಯನ್ನಾಗಿ ನೇಮಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News