ಬಸ್ ಚಲಾಯಿಸುತ್ತಿರುವಾಗಲೇ ಹೃದಯಾಘಾತ : ಬಿಎಂಟಿಸಿ ಚಾಲಕ ಮೃತ್ಯು
Update: 2024-11-06 21:10 IST
ಸಾಂದರ್ಭಿಕ ಚಿತ್ರ
ಬೆಂಗಳೂರು: ಬಸ್ ಚಾಲನೆ ಮಾಡುತ್ತಿದ್ದ ವೇಳೆಯೇ ಬಿಎಂಟಿಸಿ ಬಸ್ ಚಾಲಕ ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ಇಲ್ಲಿನ ಬಿನ್ನಮಂಗಲದಲ್ಲಿ ನಡೆದಿದೆ.
ಹಾಸನ ನಿವಾಸಿ ಕಿರಣ್ ಕುಮಾರ್ (38) ಮೃತಪಟ್ಟಿರುವ ಬಿಎಂಟಿಸಿ ಚಾಲಕ ಎಂದು ಗುರುತಿಸಲಾಗಿದೆ.
ಬುಧವಾರ ನೆಲಮಂಗಲದಿಂದ ದಾಸನಪುರ ಘಟಕಕ್ಕೆ ಬರುತ್ತಿದ್ದರು.ಈ ವೇಳೆ ನೆಲಮಂಗಲದ ಬಿನ್ನಮಂಗಲ ಬಸ್ ನಿಲ್ದಾಣದ ಬಳಿ ತಲುಪಿದಾಗ ಕಿರಣ್‍ಕುಮಾರ್‌ಗೆ ಎದೆನೋವು ಕಾಣಿಸಿಕೊಂಡು ಹೃದಯಾಘಾತವಾಗಿದೆ ಎನ್ನಲಾಗಿದೆ.
ಆಗ ನಿಯಂತ್ರಣ ತಪ್ಪಿ ಅವರು ವಾಲಿದಾಗ ಕೂಡಲೇ ನಿರ್ವಾಹಕ ಓಬಳೇಶ್ ಬ್ರೇಕ್ ಹಾಕಿ ವಾಹನವನ್ನು ನಿಯಂತ್ರಿಸಿ ಅವಘಡವನ್ನು ತಪ್ಪಿಸಿದ್ದಾರೆ. ಆನಂತರ, ಚಾಲಕನನ್ನು ಆಸ್ಪತ್ರೆಗೆ ಸಾಗಿಸಿದರೂ ಅವರು ಮೃತಪಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಸಂಬಂಧ ಬಿಎಂಟಿಸಿ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.