ಬೆಂಗಳೂರಿನ ಪ್ರವಾಸೋದ್ಯಮಕ್ಕೆ ಹೆಚ್ಚಿನ ಆದ್ಯತೆ : ಡಿ.ಕೆ.ಶಿವಕುಮಾರ್

Update: 2024-06-18 16:31 GMT

ಬೆಂಗಳೂರು : ಇತರೇ ರಾಜ್ಯಗಳ ಶೇ.60ರಷ್ಟು ಜನರು ಬೆಂಗಳೂರಿನ ವಾತಾವರಣ, ಶಿಕ್ಷಣ ಸೇರಿದಂತೆ ಇತರೇ ಸೌಲಭ್ಯಗಳಿಗೆ ಮಾರುಹೋಗಿದ್ದಾರೆ. ದಿಲ್ಲಿ ನಂತರ ಬೆಂಗಳೂರನ್ನು ದೇಶ-ವಿದೇಶಿಯರು ನೋಡುವಂತಾಗಿದೆ. ಸರ್ವಜನಾಂಗಕ್ಕೂ ಬೆಂಗಳೂರು ಆಪ್ತವಾಗಿದೆ. ಆದ್ದರಿಂದ ಬೆಂಗಳೂರಿನ ಪ್ರವಾಸೋದ್ಯಮಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.

ಮಂಗಳವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಂಪೇಗೌಡರ ಅಭಿವೃದ್ದಿಯ ಹೆಜ್ಜೆ ನಂತರ ಎಸ್.ಎಂ.ಕೃಷ್ಣ ಅವರ ಕಾಲದಲ್ಲಿ ವಿಕಾಸಸೌಧ, ಉದ್ಯೋಗ ಸೌಧ ನಿರ್ಮಾಣವಾಯಿತು. ಇದಾದ ನಂತರ ಪ್ರವಾಸೋದ್ಯಮದಲ್ಲಿ ಸ್ವಲ್ಪ ಹಿಂದೆ ಬಿದ್ದಿದೆ ಎಂದರು.

ಬೆಂಗಳೂರಿನಲ್ಲಿ ಒಂದಷ್ಟು ಹಳೆಯ ದೇವಾಲಯಗಳು ಬಿಟ್ಟರೆ ಪ್ರೇಕ್ಷಣೀಯ ಸ್ಥಳಗಳು ಇಲ್ಲ. ಅಲ್ಲದೇ ಟ್ರಾಫಿಕ್ ಸಮಸ್ಯೆ ಹೆಚ್ಚುತ್ತಿದೆ. ಸಮಸ್ಯೆ ನಿವಾರಣೆಗೆ ಕಟ್ಟಡಗಳನ್ನು ಒಡೆಯಲು ಆಗುವುದಿಲ್ಲ. ಆದ ಕಾರಣ ಪರ್ಯಾಯ ಮಾರ್ಗಗಳನ್ನು ಹುಡುಕಬೇಕಿದೆ ಎಂದು ಅವರು ಹೇಳಿದರು.

ಈ ನಾಡು ಕಟ್ಟಿದಂತಹ ಕೆಂಪೇಗೌಡರನ್ನು ನಾವು ಸ್ಮರಿಸಿಕೊಳ್ಳಬೇಕು. ಹಿಂದಿನ ಸರಕಾರ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಕೆಂಪೇಗೌಡರ ಪ್ರತಿಮೆ ನಿರ್ಮಾಣ ಮಾಡಿತ್ತು. ಅದರ ಅಕ್ಕಪಕ್ಕ ಒಂದಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಬೇಕಿದೆ. ತರಾತುರಿಯಲ್ಲಿ ಪ್ರಧಾನಮಂತ್ರಿಗಳನ್ನು ಕರೆಸಿ ಕೆಂಪೇಗೌಡರ ಪ್ರತಿಮೆಯನ್ನು ಬಿಸಿಲಿನಲ್ಲಿ ನಿಲ್ಲಿಸಲಾಗಿದೆ. ಈ ಉಸ್ತುವಾರಿಯನ್ನು ಸಚಿವರಾದ ಮುನಿಯಪ್ಪ ಅವರು ಹಾಗೂ ಕೃಷ್ಣಭೈರೇಗೌಡರು ತೆಗೆದುಕೊಳ್ಳಲಿದ್ದಾರೆ ಎಂದು ಶಿವಕುಮಾರ್ ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News