ಬೆಂಗಳೂರು: ಆನ್‍ಲೈನ್ ನಲ್ಲಿ ಸೀರೆ ಖರೀದಿಸಿ ವಂಚನೆಗೊಳಗಾದ ಐಎಎಸ್ ಅಧಿಕಾರಿ

ಸಾಂದರ್ಭಿಕ ಚಿತ್ರ (credit: Grok)
ಬೆಂಗಳೂರು: ಜಾಹೀರಾತು ನೋಡಿ ಆನ್‍ಲೈನ್‍ನಲ್ಲಿ ಸೀರೆ ಬುಕ್ ಮಾಡಿದ್ದ ಮಹಿಳಾ ಐಎಎಸ್ ಅಧಿಕಾರಿಯೊಬ್ಬರು ವಂಚನೆಗೊಳಗಾಗಿದ್ದು, ಈ ಸಂಬಂಧ ಪೂರ್ವ ವಿಭಾಗದ ಸೆನ್ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದೆ.
ಸಕಾಲ ಮಿಷನ್ ನಿರ್ದೇಶಕಿ ಪಲ್ಲವಿ ಅಕುರಾತಿ ವಂಚನೆಗೊಳಗಾದವರು. ತಮಿಳುನಾಡಿನ ಮಧುರೈ ಸುಂಗುಡಿ ಕಾಟನ್ ಸೀರೆ ಮಾರಾಟದ ಬಗ್ಗೆ ನಗರದ ಪೂರ್ಣಿಮಾ ಕಲೆಕ್ಷನ್ ವತಿಯಿಂದ ಮಾಡಲಾಗಿದ್ದ ವಿಡಿಯೊವನ್ನು ಪಲ್ಲವಿ ನೋಡಿದ್ದರು. ಬಳಿಕ ಸೀರೆ ಆಯ್ಕೆ ಮಾಡಿ ಆನ್‍ಲೈನ್ ಮೂಲಕ ಮಾರ್ಚ್ 10ರಂದು ಗೂಗಲ್ ಪೇ ಮೂಲಕ 850 ರೂಪಾಯಿ ಪಾವತಿಸಿದ್ದರು. ಆದರೆ ಹಲವು ದಿನಗಳು ಕಳೆದರೂ ಮಾರಾಟಗಾರರು ಸೀರೆ ಮನೆ ವಿಳಾಸಕ್ಕೆ ಕಳುಹಿಸಲಿರಲಿಲ್ಲ. ಅಲ್ಲದೆ, ಹಣವನ್ನು ವಾಪಸ್ಸು ಮಾಡದೆ ತನಗೆ ವಂಚಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ವಿಡಿಯೊದಲ್ಲಿ ಬಂದ ಜಾಹೀರಾತಿನಿಂದ ತನಗೆ ಮಾತ್ರವಲ್ಲದೆ, ಹಲವರಿಗೂ ಮೋಸ ಮಾಡಿರುವ ಶಂಕೆಯಿದೆ. ಹೀಗಾಗಿ, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ಮಹಿಳಾ ಅಧಿಕಾರಿ ಒತ್ತಾಯ ಮಾಡಿದ್ದಾರೆ.