ಸಾರ್ವಜನಿಕರ ಅಭಿವೃದ್ಧಿಗಾಗಿ ಗ್ಯಾರಂಟಿ ಯೋಜನೆಗಳು ಜಾರಿ: ಕೆ.ಎಚ್.ಮುನಿಯಪ್ಪ
ಬೆಂಗಳೂರು : ರಾಜ್ಯ ಸರಕಾರದ ಪ್ರಮುಖ ಪಂಚ ಗ್ಯಾರಂಟಿ ಯೋಜನೆಗಳು ಸಾರ್ವಜನಿಕರ ಅಭಿವೃದ್ಧಿಗಾಗಿ ಜಾರಿಗೆ ತಂದಿದ್ದು, ಅನ್ನಭಾಗ್ಯ ಯೋಜನೆಯಡಿ ನ್ಯಾಯ ಬೆಲೆ ಅಂಗಡಿ ಮಾಲಕರು ಗ್ರಾಹಕರಿಗೆ ಕ್ರಮಬದ್ಧವಾಗಿ ಪಡಿತರ ವಿತರಿಸುವ ಜವಾಬ್ದಾರಿಯನ್ನು ವಹಿಸಬೇಕು ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್.ಮುನಿಯಪ್ಪ ತಿಳಿಸಿದರು.
ಶುಕ್ರವಾರ ನಗರದ ಖಾಸಗಿ ಹೊಟೇಲ್‍ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ರಾಜ್ಯ ಸರಕಾರಿ ಪಡಿತರ ವಿತರಕರ ಸಂಘದ ನೂತನ ವರ್ಷದ ಕ್ಯಾಲೆಂಡರ್ ಬಿಡುಗಡೆ ಮಾಡಿ ಅವರು ಮಾತನಾಡಿದರು.
ತೂಕದಲ್ಲಿ ಯಾವುದೇ ಮೋಸವಿಲ್ಲದೆ ಪಡಿತರವನ್ನು ಸಮರ್ಪಕವಾಗಿ ಹಂಚಿಕೆ ಮಾಡಬೇಕು ಹಾಗೂ ಗ್ರಾಹಕರಿಗೆ ಸರಿಯಾದ ಸಮಯಕ್ಕೆ ತಾವು ಪಡಿತರವನ್ನು ವಿತರಿಸಬೇಕು. ರಾಗಿಯನ್ನು ಶುದ್ಧೀಕರಿಸಿ ನಾವು ಗ್ರಾಹಕರಿಗೆ ವಿತರಿಸಲು ಕ್ರಮವಹಿಸಿದ್ದೇವೆ. ಜೋಳವನ್ನು ಹಂಚಲು ಅದನ್ನು ದೀರ್ಘ ಕಾಲ ನಾವು ದಾಸ್ತಾನು ಮಾಡಲು ಸಾಧ್ಯವಿಲ್ಲ. ಆದರೂ, ಜೋಳವನ್ನು ರೈತರಿಂದ ಖರೀದಿಸಿ ವಿತರಿಸಲು ಕ್ರಮ ವಹಿಸಲಾಗುತ್ತದೆ ಎಂದು ಅವರು ಮುನಿಯಪ್ಪ ಹೇಳಿದರು.
ಕೇಂದ್ರ ಸರಕಾರವು ಸಾರ್ವಜನಿಕ ವಿತರಣಾ ವ್ಯವಸ್ಥೆಯಲ್ಲಿ ತಂತ್ರಜ್ಞಾನದ ಮೂಲಕ ಆಧುನೀಕರಣ ಹಾಗೂ ಸುಧಾರಣೆ ತರಲು ಸ್ಮಾರ್ಟ್ ಪಿಡಿಎಸ್ ಯೋಜನೆ ಜಾರಿಗೆ ತಂದಿದೆ. ಇದು ಭಾರತದಲ್ಲಿ ತಂತ್ರಜ್ಞಾನ ಆಧಾರಿತ ಉಪಕ್ರಮವಾಗಿದ್ದು, ಪ್ರಸಕ್ತ ಸಾಲಿನ ಜುಲೈ ತಿಂಗಳೊಳಗೆ ನ್ಯಾಯಬೆಲೆ ಅಂಗಡಿ ಮಾಲಕರು ಸಾರ್ವಜನಿಕ ವಿತರಣಾ ವ್ಯವಸ್ಥೆಯಡಿಯಲ್ಲಿ ನೋಂದಣಿ ಮಾಡಿಕೊಳ್ಳಬೇಕು ಎಂದು ಅವರು ಕರೆ ನೀಡಿದರು.
ಈ ಸಂದರ್ಭದಲ್ಲಿ ಸಚಿವರ ಆಪ್ತ ಕಾರ್ಯದರ್ಶಿ ಡಾ.ಎಚ್.ನಟರಾಜ್, ಸಂಘದ ಅಧ್ಯಕ್ಷ ಕೆ.ಕೆ.ಕೃಷ್ಣಪ್ಪ ಹಾಗೂ ಸಂಘದ ಪಧಾದಿಕಾರಿಗಳು, ನ್ಯಾಯ ಬೆಲೆ ಅಂಗಡಿಗಳ ಮಾಲಕರು ಉಪಸ್ಥಿತರಿದ್ದರು.