‘ಒಳ ಮೀಸಲಾತಿ ನಿರ್ಣಯ’ ಖಂಡಿಸುವ ಭರದಲ್ಲಿ ಸಿಎಂ, ಕಾಂಗ್ರೆಸ್ ನಾಯಕರ ನಿಂದನೆ : ಎಫ್‍ಐಆರ್ ದಾಖಲು
ಬೆಂಗಳೂರು: ಪರಿಶಿಷ್ಟರ ಒಳ ಮೀಸಲಾತಿ ವಿಚಾರದಲ್ಲಿ ಸರಕಾರದ ನಿರ್ಣಯವನ್ನು ಖಂಡಿಸುವ ಭರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ನಾಯಕರ ಕುರಿತು ವಾಟ್ಸಪ್ ಗ್ರೂಪ್‍ನಲ್ಲಿ ಅವಹೇಳನಾಕಾರಿ ಭಾಷೆ ಬಳಸಿ ನಿಂದಿಸಿದ ಆರೋಪಿಗಳ ವಿರುದ್ಧ ಇಲ್ಲಿನ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದೆ.
ಕೆಪಿಸಿಸಿ ಸಂಯೋಜಕ ಡಿ.ವಿ.ಸತೀಶ್ ಎಂಬುವರು ನೀಡಿದ ದೂರಿನನ್ವಯ ನಗರದ ಹೈಗ್ರೌಂಡ್ಸ್ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.
ಒಳ ಮೀಸಲಾತಿ ಹೋರಾಟ ಸಮಿತಿ ವಿಜಯನಗರ ಜಿಲ್ಲೆ ಎಂಬ ಹೆಸರಿನಲ್ಲಿರುವ ವಾಟ್ಸಪ್ ಗ್ರೂಪಿನಲ್ಲಿ ಒಳ ಮೀಸಲಾತಿಯ ಕುರಿತು ರಾಜ್ಯ ಸರಕಾರದ ಸಂಪುಟದಲ್ಲಿ ತೆಗೆದುಕೊಂಡ ತೀರ್ಮಾನವನ್ನು ಖಂಡಿಸಿ ಮತ್ತು ನಿಂದನಾತ್ಮಕ ಭಾಷೆ ಬಳಸಿ ಬರೆದಿರುವ ವಿಷಯಗಳನ್ನು ಹರಿಬಿಟ್ಟಿರುವ ಮತ್ತು ಫಾರ್ವಡ್ ಮಾಡಿರುವ ವ್ಯಕ್ತಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಡಿ.ವಿ.ಸತೀಶ್ ಅವರು ದೂರಿನಲ್ಲಿ ಆಗ್ರಹಿಸಿದ್ದಾರೆ.
ಈ ವಾಟ್ಸಪ್ ಗ್ರೂಪ್‍ನಲ್ಲಿ ಎರಡು ಮೊಬೈಲ್ ನಂಬರ್ ಗಳ ಹೊಂದಿದ ವ್ಯಕ್ತಿಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ನಾಯಕರನ್ನು ಅವಹೇಳನಾಕಾರಿ ಭಾಷೆ ಬಳಸಿ ನಿಂದಿಸಿದ್ದಾರೆ. ಇದರಿಂದ ನಮ್ಮ ಭಾವನೆಗೆ ಧಕ್ಕೆಯುಂಟಾಗಿದೆ. ಈ ಕೃತ್ಯ ಸಮಾಜದಲ್ಲಿ ಗಲಭೆ ಉಂಟು ಮಾಡುವ ಉದ್ದೇಶದಿಂದ ಕೂಡಿದ್ದು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಡಿ.ವಿ.ಸತೀಶ್ ಅವರು ದೂರಿನಲ್ಲಿ ಉಲ್ಲೇಖಿಸಿದ್ದಾರೆ.