ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜೀನಾಮೆಗೆ ಈಶ್ವರ್ ಖಂಡ್ರೆ ಆಗ್ರಹ

Update: 2025-04-23 22:05 IST
ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜೀನಾಮೆಗೆ ಈಶ್ವರ್ ಖಂಡ್ರೆ ಆಗ್ರಹ

ಈಶ್ವರ್ ಖಂಡ್ರೆ

  • whatsapp icon

ಬೆಂಗಳೂರು, ಎ.23: ಜಮ್ಮು ಕಾಶ್ಮೀರದಲ್ಲಿ ಪ್ರವಾಸಿಗರಿಗೆ ಸೂಕ್ತ ಭದ್ರತೆ ನೀಡುವ ಜವಾಬ್ದಾರಿ ನಿರ್ವಹಣೆಯಲ್ಲಿ ಕೇಂದ್ರ ಗೃಹ ಸಚಿವಾಲಯ ಸಂಪೂರ್ಣವಾಗಿದೆ. ಹೀಗಾಗಿ, ನೈತಿಕ ಹೊಣೆ ಹೊತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜಿನಾಮೆ ನೀಡಬೇಕು ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ್ ಖಂಡ್ರೆ ಆಗ್ರಹಿಸಿದರು.

ಬುಧವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂವಿಧಾನದ 370ನೇ ವಿಧಿ ರದ್ದತಿ ಮತ್ತು ಜಮ್ಮು-ಕಾಶ್ಮೀರ ವಿಧಾನಸಭೆ ಚುನಾವಣೆಯ ಬಳಿಕ ಕಾಶ್ಮೀರ ಕಣಿವೆಯಲ್ಲಿ ಭಯೋತ್ಪಾದಕರ ಸದ್ದಡಗಿಸಿದ್ದು, ಪ್ರವಾಸಕ್ಕೆ ಮುಕ್ತವಾಗಿದೆ, ಜನರು ನಿರ್ಭೀತಿಯಿಂದ ಕಾಶ್ಮೀರಕ್ಕೆ ಬನ್ನಿ ಎಂದು ಪದೇ ಪದೇ ಪ್ರಚಾರ ಮಾಡಲಾಯಿತು ಎಂದು ಹೇಳಿದರು.

ಈ ಹಿನ್ನೆಲೆಯಲ್ಲಿ ರಾಜ್ಯದ ಪ್ರವಾಸಿಗರೂ ಸೇರಿದಂತೆ ದೇಶ-ವಿದೇಶದ ಪ್ರವಾಸಿಗರು ಕೇಂದ್ರ ಸರಕಾರದ ಹೇಳಿಕೆ ನಂಬಿ ಕಾಶ್ಮೀರಕ್ಕೆ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಆಗಮಿಸುತ್ತಿದ್ದರು. ಇವರಿಗೆ ಸೂಕ್ತ ಭದ್ರತೆ ನೀಡಬೇಕಾದ್ದು, ಕೇಂದ್ರ ಹಾಗೂ ಕಾಶ್ಮೀರ ರಾಜ್ಯ ಸರಕಾರದ ಜವಾಬ್ದಾರಿಯಾಗಿತ್ತು. ಆದರೆ ಕೇಂದ್ರ ಗೃಹ ಸಚಿವಾಲಯ ಈ ಜವಾಬ್ದಾರಿ ನಿರ್ವಹಣೆಯಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಅವರು ಹೇಳಿದರು.

ನೂರಾರು ಜನ ಪ್ರವಾಸಿಗರು ಇದ್ದ ಜಾಗದಲ್ಲಿ ಭದ್ರತಾ ಸಿಬ್ಬಂದಿ ಇರಲಿಲ್ಲ, ಸುರಕ್ಷತೆ ಇರಲಿಲ್ಲವೇ ಎಂಬ ಪ್ರಶ್ನೆ ಉದ್ಭವಿಸುತ್ತಿದೆ. ಇದು ಕೇಂದ್ರ ಸರಕಾರ ಮತ್ತು ಜಮ್ಮು ಕಾಶ್ಮೀರ ರಾಜ್ಯ ಸರಕಾರದ ನಿರ್ಲಕ್ಷ್ಯ ಮತ್ತು ಬೇಹುಗಾರಿಕೆ ವೈಫಲ್ಯವೇ ಆಗಿದೆ ಎಂದು ಈಶ್ವರ್ ಖಂಡ್ರೆ ಹೇಳಿದರು.

ಜಮ್ಮು-ಕಾಶ್ಮೀರದ ಪಹಲ್ಗಾಮ್ ನಲ್ಲಿ ಪ್ರವಾಸಿಗರ ಮೇಲೆ ನಡೆದಿರುವ ಉಗ್ರರ ದಾಳಿ ಅತ್ಯಂತ ಹೇಯ ಮತ್ತು ಬರ್ಬರವಾದ್ದು, ಈ ಹೇಡಿ ಕೃತ್ಯವನ್ನು ಉಗ್ರವಾಗಿ ಖಂಡಿಸುತ್ತೇನೆ. ಕನ್ನಡಿಗರ ಮೃತದೇಹವನ್ನು ತರಲು ಮತ್ತು ಕಾಶ್ಮೀರ ಪ್ರವಾಸಕ್ಕೆ ತೆರಳಿ ಸಂಕಷ್ಟಕ್ಕೆ ಸಿಲುಕಿರುವ ರಾಜ್ಯದ 40ಕ್ಕೂ ಅಧಿಕ ಪ್ರವಾಸಿಗರನ್ನು ಸುರಕ್ಷಿತವಾಗಿ ತಾಯ್ನಾಡಿಗೆ ಕರೆತರಲು ವಿಶೇಷ ವಿಮಾನದ ವ್ಯವಸ್ಥೆ ಮಾಡುವಂತೆ ಮುಖ್ಯಮಂತ್ರಿ ಈಗಾಗಲೇ ಸೂಚನೆ ನೀಡಿದ್ದಾರೆ ಎಂದು ಅವರು ತಿಳಿಸಿದರು.

ಸಚಿವ ಸಂತೋμï ಲಾಡ್ ಘಟನಾ ಸ್ಥಳಕ್ಕೆ ಹೋಗಿದ್ದು, ನೊಂದವರಿಗೆ ಸಾಂತ್ವನ ಹೇಳಿದ್ದಾರೆ. ನೊಂದವರ ನೆರವಿಗೆ ನಿಂತಿದ್ದಾರೆ. ರಾಜ್ಯ ಸರಕಾರ ಈ ನೋವಿನ ಸಂದರ್ಭದಲ್ಲಿ ನೊಂದವರ ಜೊತೆ ನಿಲ್ಲುತ್ತದೆ ಎಂದು ಈಶ್ವರ್ ಖಂಡ್ರೆ ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News