ಡಿ.ಕೆ.ಸುರೇಶ್ ಆಪ್ತರ ಮನೆ ಮೇಲೆ ಐಟಿ ದಾಳಿ : ಕಾಂಗ್ರೆಸ್ ಕಾರ್ಯಕರ್ತರಿಂದ ಪ್ರತಿಭಟನೆ
ಬೆಂಗಳೂರು: ಕಾಂಗ್ರೆಸ್ ಸಂಸದ ಡಿ.ಕೆ. ಸುರೇಶ್ ಅವರ ಆಪ್ತರಾದ ಗಂಗಾಧರ್ ಹಾಗೂ ಇತರರ ಮನೆ ಮೇಲೆ ಐಟಿ ದಾಳಿ ನಡೆದಿದ್ದು, ಇದು ಚುನಾವಣೆ ಸಮಯದಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಕಟ್ಟಿಹಾಕುವ ಪ್ರಯತ್ನ ಎಂದು ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಕೋಣನಕುಂಟೆ ಬ್ಲಾಕ್ ನಲ್ಲಿರುವ ಮಾಜಿ ಕಾರ್ಪೊರೇಟರ್ ಗಂಗಾಧರ್ ಮನೆ ಮುಂದೆ ಕಾಂಗ್ರೆಸ್ ಕಾರ್ಯಕರ್ತರು ಬುಧವಾರ ಧರಣಿ ನಡೆಸಿ ಬಿಜೆಪಿ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದರು.
ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಬಲಿಷ್ಠವಾಗಿ ಕಟ್ಟುತ್ತಿದ್ದೇವೆ. ಬಿಜೆಪಿಗೆ ಸೋಲಿನ ಭಯ ಕಾಡುತ್ತಿದೆ. ಹೀಗಾಗಿ ಕಾಂಗ್ರೆಸ್ ಮುಖಂಡರು ಹಾಗೂ ಕಾಂಗ್ರೆಸ್ ಅಭ್ಯರ್ಥಿಗಳ ಮನೆ ಮೇಲೆ ಐಟಿ ದಾಳಿಗಳು ನಡೆಯುತ್ತಿವೆ. ಗಂಗಾಧರ್ ಅವರು ಹಣಕಾಸಿನ ವಿಚಾರದಲ್ಲಿ ಅನುಕೂಲಸ್ಥರು. ಸಾಕಷ್ಟು ಜಮೀನು ಇದೆ. ಬೇರೆ ಪಕ್ಷದಲ್ಲಿ ಇವರಿಗಿಂತ ಶ್ರೀಮಂತರು ಇದ್ದಾರೆ. ಅವರ ಮನೆಗಳ ಮೇಲೆ ದಾಳಿಯಾಗಿಲ್ಲ. ಕೇವಲ ಕಾಂಗ್ರೆಸ್ ನಾಯಕರ ಮೇಲೆ ದಾಳಿ ನಡೆಯುತ್ತಿದೆ. ಡಿ.ಕೆ ಸುರೇಶ್ ಹಾಗೂ ಡಿ.ಕೆ. ಶಿವಕುಮಾರ್ ಅವರ ಆಪ್ತರನ್ನು ಗುರಿಯಾಗಿಸಿ ದಾಳಿ ಮಾಡಲಾಗುತ್ತಿದೆ ಎಂದು ಕಾಂಗ್ರೆಸ್ ಕಾರ್ಯಕರ್ತರು ಆಕ್ರೋಶ ಹೊರಹಾಕಿದರು.
ಗಂಗಾಧರ್ ಅವರ ಜತೆಗೆ ಗೊಟ್ಟಿಗೆರೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶ್ರೀಧರ್, ಸುರೇಶ್ ಅವರ ಆಪ್ತ ಸಹಾಯಕ ಸುಜಯ್, ಚಂದ್ರು, ಲಕ್ಷ್ಮಣ್, ಬಾಬು ಸೇರಿದಂತೆ ಹಲವರ ಮನೆ ಮೇಲೆ ದಾಳಿ ಮಾಡಲಾಗಿದೆ.