ಜನಾರ್ದನ ರೆಡ್ಡಿಯ ಸದಸ್ಯತ್ವ ಅಸಿಂಧುಗೊಳಿಸಿ : ಶೋಕಾಸ್ ನೊಟೀಸ್ ನೀಡಲು ರಮೇಶ್ ಬಾಬು ಒತ್ತಾಯ
ಬೆಂಗಳೂರು: ಬಿಜೆಪಿ ಜತೆ ಸೇರಿ ಸ್ವಪಕ್ಷದ ಸದಸ್ಯತ್ವ ತ್ಯಜಿಸಿರುವ ಕಾರಣ ವಿಧಾನಸಭಾ ಸ್ಪೀಕರ್ ಅವರು ಸಂವಿಧಾನದಡಿಯಲ್ಲಿ ಕೆಕೆಪಿಪಿ ಜನಾರ್ದನ ರೆಡ್ಡಿ ಅವರ ಸದಸ್ಯತ್ವವನ್ನು ಅಸಿಂಧುಗೊಳಿಸಿ, ಕೂಡಲೇ ಅವರಿಗೆ ಶೋಕಾಸ್ ನೊಟೀಸ್ ಜಾರಿ ಮಾಡಬೇಕು ಎಂದು ಕೆಪಿಸಿಸಿ ಮಾಧ್ಯಮ ವಿಭಾಗದ ಉಪಾಧ್ಯಕ್ಷ ರಮೇಶ್ ಬಾಬು ಒತ್ತಾಯಿಸಿದ್ದಾರೆ.
ಬುಧವಾರ ನಗರದ ಕ್ವೀನ್ಸ್‍ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸಂವಿಧಾನದ 10ನೆ ಶೆಡ್ಯೂಲ್ ಅನ್ವಯ ಶಾಸಕ ಜನಾರ್ದನ ರೆಡ್ಡಿ ಅವರ ವಿರುದ್ಧ ಕ್ರಮ ಜರುಗಿಸಬೇಕು ಎಂದು ವಿಧಾನಸಭೆಯ ಸ್ಪೀಕರ್ ಯು.ಟಿ.ಖಾದರ್ ಅವರಿಗೆ ದೂರು ಸಲ್ಲಿಸಿದ್ದೇವೆ ಎಂದು ಮಾಹಿತಿ ನೀಡಿದರು.
ಕರ್ನಾಟಕ ಕಲ್ಯಾಣ ರಾಜ್ಯ ಪ್ರಗತಿ ಪಕ್ಷ(ಕೆಕೆಪಿಪಿ)ದ ಶಾಸಕರಾಗಿರುವ ಜನಾರ್ದನ ರೆಡ್ಡಿ ಅವರು ತಮ್ಮ ಪಕ್ಷವನ್ನು ಬಿಜೆಪಿ ಜತೆ ವಿಲೀನ ಮಾಡಿರುವುದಾಗಿ ಹೇಳಿರುವುದು ಪಕ್ಷಾಂತರ ನಿಷೇಧ ಕಾಯ್ದೆ ಉಲ್ಲಂಘನೆಯಾಗಿದೆ. ಒಂದು ಪಕ್ಷ ಮತ್ತೊಂದು ಪಕ್ಷದ ಜತೆ ವಿಲೀನವಾಗಲು ಹಲವು ಪ್ರಕ್ರಿಯೆಗಳಿವೆ. ಚುನಾವಣಾ ಆಯೋಗಕ್ಕೆ ಕೊಟ್ಟಿರುವ ಮಾಹಿತಿ ಪ್ರಕಾರ ಜನಾರ್ದನ ರೆಡ್ಡಿ ಅವರು ತಮ್ಮ ಪಕ್ಷಕ್ಕೆ ಪದಾಧಿಕಾರಿಯಲ್ಲ. ಇದು ನೊಂದಾಯಿತ ರಾಜಕೀಯ ಪಕ್ಷ. ಇದರ ರಾಷ್ಟ್ರೀಯ ಅಧ್ಯಕ್ಷರು ಜೆ.ರಾಮಣ್ಣ. ಇದರಲ್ಲಿ ಅನೇಕ ಪದಾಧಿಕಾರಿಗಳಿದ್ದಾರೆ ಎಂದು ರಮೇಶ್ ಬಾಬು ತಿಳಿಸಿದರು
ಕಲ್ಯಾಣ ರಾಜ್ಯ ಪ್ರಗತಿ ಪಕ್ಷ 2023ರ ಮಾರ್ಚ್ 30ರಂದು ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ಆಡಿಟ್ ವರದಿ ಪ್ರಕಾರ ಆ ಪಕ್ಷದಲ್ಲಿರುವ ಮೊತ್ತ 1,320 ರೂ.ಮಾತ್ರ. ಗಣಿ ಖ್ಯಾತಿ ಜನಾರ್ದನ ರೆಡ್ಡಿ ಅವರು ಬೇನಾಮಿ ಹೆಸರಿನಲ್ಲಿ ಪಕ್ಷ ಹುಟ್ಟು ಹಾಕಿ ಈಗ ಬಿಜೆಪಿ ಜತೆ ಪಕ್ಷವನ್ನು ವಿಲೀನಗೊಳಿಸಿದ್ದಾರೆ. ಈ ವಿಚಾರದಲ್ಲೂ ರೆಡ್ಡಿ ಅವರು ಬೇನಾಮಿ ವ್ಯವಹಾರ ನಡೆಸಿರುವುದು ಸ್ಪಷ್ಟವಾಗಿದೆ ಎಂದು ರಮೇಶ್ ಬಾಬು ದೂರಿದರು.
ಜನಾರ್ದನ ರೆಡ್ಡಿ ಅವರು ಬಿಜೆಪಿಗೆ ಸೇರ್ಪಡೆಯಾಗಿರುವುದು ರಾಷ್ಟ್ಪ ಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಬಿಜೆಪಿ ಎಲ್ಲಾ ಕಳಂಕಿತರು, ಭ್ರಷ್ಟಾಚಾರ ಆರೋಪ ಹೊತ್ತಿರುವವರನ್ನು ತಮ್ಮ ಪಕ್ಷಕ್ಕೆ ಕರೆದುಕೊಂಡು ಅವರನ್ನು ವಾಶಿಂಗ್ ಮಷಿನ್ ರೀತಿ ಸ್ವಚ್ಛಗೊಳಿಸುವ ಕೆಲಸ ಮಾಡುತ್ತಿದೆ ಎಂದು ರಮೇಶ್ ಬಾಬು ಆರೋಪಿಸಿದರು.
ಜನಾರ್ದನ ರೆಡ್ಡಿ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವ ಮೂಲಕ ಬಿಜೆಪಿಯವರು ಭ್ರಷ್ಟಾಚಾರಕ್ಕೆ ಅಧಿಕೃತ ಮುದ್ರೆ ಒತ್ತಿದ್ದಾರೆ. ಮೋದಿ ಅವರು ತಮ್ಮದು ಸ್ವಚ್ಛ ನಾಯಕತ್ವ ಎಂದು ಹೇಳುತ್ತಾರೆ. ಅದಕ್ಕೆ ವ್ಯತಿರಿಕ್ತವಾಗಿ ರೆಡ್ಡಿ ಅವರನ್ನು ಪಕ್ಷಕ್ಕೆ ಸೇರಿಸಿಕೊಂಡು ಬಿಜೆಪಿಯವರು ತಮಗೆ ತಾವೇ ಮಸಿ ಬಳಿದುಕೊಂಡಿದ್ದಾರೆ. ಈ ವಿಚಾರವಾಗಿ ಬಿಜೆಪಿ ನಾಯಕರು ಸಾರ್ವಜನಿಕರಿಗೆ ಸ್ಪಷ್ಟನೆ ನೀಡಬೇಕು ಎಂದು ರಮೇಶ್‍ಬಾಬು ತಿಳಿಸಿದರು.
ಬಿಜೆಪಿ ಅಂದರೆ ‘ಬಾಂಡ್ ಜನತಾ ಪಕ್ಷ’: ‘ಬಿಜೆಪಿ ಇತರೆ ಪಕ್ಷಗಳ ನಾಯಕರನ್ನು ಹೇಗೆ ಖರೀದಿ ಮಾಡುತ್ತಿದೆ ಅಂದರೆ, ಕೇಂದ್ರ ತನಿಖಾ ಸಂಸ್ಥೆಗಳ ದುರ್ಬಳಕೆ ಮಾಡಿಕೊಂಡು ಬೆದರಿಕೆ ಹಾಕಿ ತಮ್ಮ ಪಕ್ಷಕ್ಕೆ ಸೇರಿಸಿಕೊಳ್ಳುತ್ತಿದೆ. ಮೋದಿ ಅವರು ತಾನು ತಿನ್ನಲ್ಲ ಬೇರೆಯವರಿಗೂ ತಿನ್ನಲು ಬಿಡುವುದಿಲ್ಲ ಎಂದು ಹೇಳುತ್ತಿದ್ದಾರೆ. ಆದರೆ ಅದಕ್ಕೆ ವ್ಯತಿರಿಕ್ತವಾಗಿ ನಡೆದುಕೊಳ್ಳುತ್ತಿದ್ದಾರೆ. ಸುಪ್ರೀಂ ಕೋರ್ಟ್ ಚುನಾವಣಾ ಬಾಂಡ್‍ಗಳನ್ನು ಬಹಿರಂಗಗೊಳಿಸುವ ಮೂಲಕ ಬಿಜೆಪಿಯ ಮುಖವಾಡ ಕಳಚಿದೆ. ಆ ಮೂಲಕ ಬಿಜೆಪಿ ಬೆತ್ತಲಾಗಿದೆ. ಬಿಜೆಪಿ ಇನ್ನು ಮುಂದೆ ಬಾಂಡ್ ಜನತಾ ಪಕ್ಷವಾಗಿ ಹೊರಹೊಮ್ಮಿದೆ’ ಎಂದು ರಮೇಶ್ ಬಾಬು ಟೀಕಿಸಿದರು.