ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ 'ಜನತಾ ದರ್ಶನ' ಆರಂಭ: ಭಾರೀ ಜನಸ್ಪಂದನ
ಬೆಂಗಳೂರು, ಫೆ.8: ಬೆಂಗಳೂರಿನ ವಿಧಾನಸೌಧ ಆವರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಹಮ್ಮಿಕೊಂಡಿರುವ ರಾಜ್ಯ ಮಟ್ಟದ ಎರಡನೇ 'ಜನತಾ ದರ್ಶನ' ಕಾರ್ಯಕ್ರಮಕ್ಕೆ ಜನ ಸಾಗರವೇ ಹರಿದುಬಂದಿದ್ದು, ಸಾರ್ವಜನಿಕರಿಂದ ಉತ್ತಮ ಸ್ಪಂದನ ಮತ್ತು ಪ್ರಶಂಸೆ ವ್ಯಕ್ತವಾಗಿದೆ.
ಇಂದು ಬೆಳಗ್ಗೆಯಿಂದಲೇ ವಿವಿಧ ಜಿಲ್ಲೆಗಳಿಂದ ಆಗಮಿಸಿದ ಸಾವಿರಾರು ನಾಗರಿಕರು, 9:30ಕ್ಕೆ ವಿಧಾನಸೌಧ ಪ್ರವೇಶಿಸಿದರು. ಬಳಿಕ ತಮ್ಮ ದೂರು ಹಾಗೂ ಮನವಿಗಳನ್ನು ಇಲಾಖಾವಾರು ಕೌಂಟರ್ ಗಳ ಅಧಿಕಾರಿಗಳ ಮೂಲಕ ಸಲ್ಲಿಸಿದರು.
ಈ ವೇಳೆ ಎಲ್ಲ ಇಲಾಖೆಯ ಹಿರಿಯ ಮತ್ತು ಕಿರಿಯ ಅಧಿಕಾರಿಗಳು ಸ್ಥಳದಲ್ಲೇ ಲ್ಯಾಪ್ ಟಾಪ್ ಹಿಡಿದು ಅವರ ಜತೆಗಿದ್ದರು. ಇದರ ಜತೆಗೆ ಎಲ್ಲ ಜಿಲ್ಲಾಧಿಕಾರಿಗಳು ವೀಡಿಯೋ ಕಾನ್ಫರೆನ್ಸ್ನಲ್ಲಿ ಪ್ರತ್ಯಕ್ಷರಾದರು. ಒಟ್ಟಿನಲ್ಲಿ ಇಡೀ ಸರಕಾರ ವಿಧಾನಸೌಧದಲ್ಲಿ ಬೀಡುಬಿಟ್ಟಿತ್ತು.
ಜನತಾ ದರ್ಶನ ನಡೆಯುವ ಸ್ಥಳದಲ್ಲಿ ಸಚಿವಾಲಯದ ಎಲ್ಲಾ ಇಲಾಖೆಗಳ ಕೌಂಟರ್ ಗಳನ್ನು ಅಳವಡಿಸಲಾಗಿದ್ದು , ಪ್ರತೀ ಕೌಂಟರ್ ಗಳಿಗೆ ಸಂಖ್ಯೆಯ ಬಳಿಯೂ ನೋಡಲ್ ಅಧಿಕಾರಿಗಳು ನಾಗರಿಕರನ್ನು ಪ್ರಥಮ ಹಂತದಲ್ಲಿ ವಿಚಾರಿಸಿ , ಯಾವ ಇಲಾಖೆಯ ಕೌಂಟರ್ ಗೆ ನಿರ್ದೇಶಿಸಿ ಕಳುಹಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿದೆ.
ವ್ಹೀಲ್ ಚೇರ್ ವ್ಯವಸ್ಥೆ: ವಯೋವೃದ್ಧರು, ಹಿರಿಯ ನಾಗರಿಕರು, ವಿಕಲಚೇತನರು, ಗರ್ಭಿಣಿಯರಿಗಾಗಿ ಬ್ಯಾಟರಿ ಚಾಲಿತ ವ್ಹೀಲ್ ಚೇರ್ ವ್ಯವಸ್ಥೆ ಕಲ್ಪಿಸಲಾಗಿದ್ದು, ಸಂಬಂಧಿಸಿದ ಇಲಾಖೆಯ ಸ್ಟಾಲ್ ಗೆ ಅವರನ್ನು ಕರೆದೊಯ್ಯಲಾಯಿತು.
ಕಂದಾಯ ಇಲಾಖೆಗೆ ಸಿಂಹಪಾಲು:
ಸ್ವೀಕರಿಸಲಾಗಿರುವ ಅಹವಾಲುಗಳಲ್ಲಿ ಕಂದಾಯ ಇಲಾಖೆಯದ್ದೇ ಸಿಂಹಪಾಲು ಆಗಿವೆ. ಅಂಕಿ ಅಂಶಗಳ ಪ್ರಕಾರ ಸಾವಿರಕ್ಕೂ ಹೆಚ್ಚು ಅಹವಾಲುಗಳು ಕಂದಾಯ ಇಲಾಖೆಗೆ ಸೇರಿದ್ದಾಗಿವೆ. ನಂತರದ ಸ್ಥಾನದಲ್ಲಿ ಗ್ರಾಮೀಣಾಭಿವೃದ್ಧಿ ಇಲಾಖೆಗೆ ಸೇರಿದ ಅಹವಾಲುಗಳಿವೆ. ಸಾವಿರಕ್ಕೂ ಅಧಿಕ ಅಹವಾಲುಗಳು ಈ ಇಲಾಖೆಗೆ ಸಂಬಂಧಿಸಿದ್ದಾಗಿವೆ. ಮೂರನೇ ಅತಿ ಹೆಚ್ಚು ಅಹವಾಲುಗಳು ನಗರಾಭಿವೃದ್ಧಿ ಇಲಾಖೆಗೆ ಸಂಬಂಧಿಸಿದ್ದಾಗಿವೆ.
ಊಟದ ವ್ಯವಸ್ಥೆ
ಜನತಾ ದರ್ಶನಕ್ಕೆ ಆಗಮಿಸುವ ನಾಗರಿಕರಿಗೆ ಊಟ ಮತ್ತು ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ.. ಐದರಿಂದ ಹತ್ತು ಸಾವಿರ ಜನರಿಗೆ ಆಹಾರ ಪೂರೈಸುವಂತಹ ವ್ಯವಸ್ಥೆಯಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
ಶೌಚಾಲಯ ವ್ಯವಸ್ಥೆ
ಜನತಾದರ್ಶನಕ್ಕೆ ಬರುವ ಎಲ್ಲಾ ಸಾರ್ವಜನಿಕರು ಹಾಗೂ ದಿವ್ಯಾಂಗರಿಗೆ ಸ್ವಚ್ಛ ಶೌಚಾಲಯಗಳ ವ್ಯವಸ್ಥೆಯನ್ನು ಮಾಡಲಾಗಿದೆ.
ಸಾರಿಗೆ ವ್ಯವಸ್ಥೆ
ಜನಸ್ಪಂದನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಬಿಎಂಟಿಸಿ ವತಿಯಿಂದ ಉಚಿತ ಸಾರಿಗೆ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.