ಮೇ 5ರಿಂದ ಪರಿಶಿಷ್ಟ ಜಾತಿಗಳ ಒಳಮೀಸಲಾತಿ ವರ್ಗೀಕರಣ ಸಮೀಕ್ಷೆ ಆರಂಭ : ನ್ಯಾ.ನಾಗಮೋಹನ ದಾಸ್
ನ್ಯಾ.ಎಚ್.ಎನ್ .ನಾಗಮೋಹನ ದಾಸ್
ಬೆಂಗಳೂರು: ಪರಿಶಿಷ್ಟ ಜಾತಿಗಳ ಒಳಮೀಸಲಾತಿ ವರ್ಗೀಕರಣಕ್ಕೆ ಸಂಬಂಧಿಸಿದಂತೆ ಮೇ 5ರಿಂದ 23ರವರೆಗೆ ಮೂರು ಹಂತಗಳಲ್ಲಿ ಸಮೀಕ್ಷೆಯನ್ನು ನಡೆಸಲಾಗುವುದು ಎಂದು ಒಳ ಮೀಸಲಾತಿ ವರ್ಗೀಕರಣದ ಏಕಸದಸ್ಯ ವಿಚಾರಣಾ ಆಯೋಗದ ಅಧ್ಯಕ್ಷ ನ್ಯಾ.ಎಚ್.ಎನ್ .ನಾಗಮೋಹನ ದಾಸ್ ಹೇಳಿದ್ದಾರೆ.
ಬುಧವಾರ ಎಲ್ಲ ಜಿಲ್ಲಾಧಿಕಾರಿಗಳ ವೀಡಿಯೊ ಸಂವಾದದಲ್ಲಿ ಮಾತನಾಡಿದ ಅವರು, ಸಮೀಕ್ಷೆಗೆ ಕಡ್ಡಾಯವಾಗಿ ಶಿಕ್ಷಕರನ್ನು ಗಣತಿದಾರರನ್ನಾಗಿ ನೇಮಕ ಮಾಡಬೇಕು. ಜಿಲ್ಲಾಧಿಕಾರಿಗಳ ಹಂತದಲ್ಲಿ ಗಣತಿದಾರರನ್ನು ಮತ್ತು ಮೇಲ್ವಿಚಾರಕರನ್ನು ಗುರುತಿಸಿ ನೇಮಕ ಮಾಡಿ ಆದೇಶಿಸಬೇಕು ಎಂದು ಸೂಚನೆ ನೀಡಿದರು.
ಸಮೀಕ್ಷೆಯನ್ನು ಮೂರು ಹಂತಗಳಲ್ಲಿ ಕೈಗೊಳ್ಳಲಾಗುತ್ತಿದ್ದು, ಮೊದಲ ಹಂತದಲ್ಲಿ ಮೇ 5ರಿಂದ 17ರವರೆಗೆ ಗಣತಿದಾರರು ಮನೆ-ಮನೆ ಭೇಟಿ ನೀಡಿ ಸಮೀಕ್ಷೆ ಕೈಗೊಳ್ಳಬೇಕು. ಎರಡನೇ ಹಂತದಲ್ಲಿ ಮೇ 19ರಿಂದ 21ರವರೆಗೆ ಮತಗಟ್ಟೆ ಪ್ರದೇಶವಾರು ವಿಶೇಷ ಶಿಬಿರಗಳಲ್ಲಿ ಸಮೀಕ್ಷೆ ನಡೆಸಬೇಕು. ಮೂರನೇ ಹಂತದಲ್ಲಿ ಮೇ 19ರಿಂದ 23ರವರೆಗೆ ಆನ್‌ಲೈನ್ ಮೂಲಕ ಸ್ವಯಂ ಘೋಷಣೆ ಮಾಡಬೇಕು ಎಂದು ಅವರು ತಿಳಿಸಿದರು.
ಜಿಲ್ಲಾಧಿಕಾರಿ ಹಾಗೂ ಮುಖ್ಯ ಕಾರ್ಯನಿರ್ವಾಹಕಾಧಿಕಾರಿಗಳು ಮನೆ-ಮನೆಗೆ ಭೇಟಿ ನೀಡಿ ಸಮೀಕ್ಷೆ ನಡೆಸಲು ಜಿಲ್ಲೆಯ ಶಿಕ್ಷಕರನ್ನು ಗಣತಿದಾರರನ್ನಾಗಿ ತಾಲೂಕು/ಮತಗಟ್ಟೆವಾರು ಜಿಲ್ಲಾಧಿಕಾರಿಗಳ ಹಂತದಲ್ಲಿ ನೇಮಕ ಮಾಡಿ ಆದೇಶಿಸಬೇಕು. ಗಣತಿದಾರರ ದೂರವಾಣಿ ಸಂಖ್ಯೆಯನ್ನು ಕಡ್ಡಾಯವಾಗಿ ಆದೇಶದಲ್ಲಿ ನಮೂದಿಸಬೇಕು ಎಂದು ಅವರು ಸೂಚನೆ ನೀಡಿದರು.
ಪ್ರತೀ 10 ರಿಂದ 12 ಗಣತಿದಾರರಿಗೆ ಒಬ್ಬರಂತೆ ಮೇಲ್ವಿಚಾರಕರನ್ನು ನೇಮಕ ಮಾಡಬೇಕು. ಪ್ರತೀ ಜಿಲ್ಲೆಗೆ ಮೂರು ಮಂದಿ ಜಿಲ್ಲಾಮಟ್ಟದ ಮಾಸ್ಟರ್ ಟೈನರ್‌ಗಳನ್ನು ಗುರುತಿಸಿ ನೇಮಕ ಮಾಡಬೇಕು. ಬಿಬಿಎಂಪಿ ವ್ಯಾಪ್ತಿಯಲ್ಲಿ ವಾರ್ಡ್‌ಗಳಿಗೆ ಅನುಗುಣವಾಗಿ ಮಾಸ್ಟರ್ ಟೈನರ್ ಗಳನ್ನು ಗುರುತಿಸಿ ನೇಮಕ ಮಾಡಬೇಕು. ಇದರಲ್ಲಿ ಇಬ್ಬರು ಮಾಸ್ಟರ್ ಟೈನರ್ ಮತ್ತು ಒಬ್ಬರು ತಾಂತ್ರಿಕ ಸಂಪನ್ಮೂಲ ವ್ಯಕ್ತಿಯಾಗಿರಬೇಕು ಎಂದು ನಾಗಮೋಹನ್ ದಾಸ್ ಹೇಳಿದರು.
ಜಿಲ್ಲಾ ಮಟ್ಟದಲ್ಲಿ ನೇಮಕ ಮಾಡಿರುವ ಜಿಲ್ಲಾ ಮಟ್ಟದ ಮಾಸ್ಟರ್ ಟೈನರ್‌ಗಳನ್ನು ಎ.25ರಂದು ನಡೆಯುವ ರಾಜ್ಯಮಟ್ಟ ತರಬೇತಿಗೆ ಕಡ್ಡಾಯವಾಗಿ ನಿಯೋಜಿಸಬೇಕು. ಪ್ರತಿ ತಾಲ್ಲೂಕಿಗೆ ಐದು ಮಂದಿ ತಾಲ್ಲೂಕು ಮಟ್ಟದ ಮಾಸ್ಟರ್ ಟೈನರ್‌ಗಳನ್ನು ಗುರುತಿಸಿ ನೇಮಕ ಮಾಡಬೇಕು ಎಂದು ಅವರು ತಿಳಿಸಿದರು.
ಎ.28ರಂದು ಜಿಲ್ಲಾ ಮಟ್ಟದಲ್ಲಿ ತಾಲೂಕು ಮಟ್ಟದ ಮಾಸ್ಟರ್ ಟೈನರ್‌ಗಳಿಗೆ ತರಬೇತಿ ನೀಡುವ ಸಂಬಂಧವಾಗಿ ಸೂಕ್ತ ಸ್ಥಳವನ್ನು ಗುರುತಿಸಿ ರಾಜ್ಯ ಮಟ್ಟದಲ್ಲಿ ತರಬೇತಿ ಪಡೆದ ಜಿಲ್ಲಾ ಮಟ್ಟದ ಮಾಸ್ಟರ್ ಟೈನರ್‌ಗಳ ಮೂಲಕ ತರಬೇತಿ ನೀಡಬೇಕು ಎಂದು ನಾಗಮೋಹನದಾಸ್ ಹೇಳಿದರು.
ತಾಲೂಕು ಮಟ್ಟದಲ್ಲಿ ಪ್ರತೀ 50 ಗಣತಿದಾರರಿಗೆ ಹಾಗೂ ಮೇಲ್ವಿಚಾರಕರಿಗೆ ತಾಲೂಕು ಮಟ್ಟದ ಮಾಸ್ಟರ್ ಟೈನರ್‌ಗಳಿಂದ ತರಬೇತಿಯನ್ನು ನೀಡಲು ತಾಲೂಕು ಹಂತದಲ್ಲಿ ಸೂಕ್ತ ಸ್ಥಳವನ್ನು ಗುರುತಿಸಿ ತರಬೇತಿಯನ್ನು ನೀಡಬೇಕು. ತರಬೇತಿ ದಿನಾಂಕವನ್ನು ಆಯಾಯ ಜಿಲ್ಲೆಯ ಜಿಲ್ಲಾಧಿಕಾರಿಗಳು ನಿರ್ಧರಿಸಬೇಕು. ಗಣತಿದಾರರಿಂದ ಮೇ 5 ರಿಂದ ಸಮೀಕ್ಷೆ ಕಾರ್ಯವನ್ನು ಆರಂಭಿಸಿ ಮೇ 17ಕ್ಕೆ ಪೂರ್ಣಗೊಳಿಸಬೇಕು ಎಂದು ಅವರು ನಿರ್ದೇಶನ ನೀಡಿದರು.
ಗಣತಿದಾರರಿಂದ ಮನೆ-ಮನೆ ಸಮೀಕ್ಷೆ ಮುಕ್ತಾಯಗೊಂಡ ನಂತರ ಗುರುತಿಸಿರುವ ಮತಗಟ್ಟೆ ಪ್ರದೇಶದಲ್ಲಿ ವಿಶೇಷ ಶಿಬಿರಗಳನ್ನು ಆಯೋಜಿಸಲು ಕ್ರಮಕೈಗೊಳ್ಳಬೇಕು. ಮತಗಟ್ಟೆ ಪ್ರದೇಶದಲ್ಲಿ ಗುರುತಿಸಿರುವ ವಿಶೇಷ ಶಿಬಿರಗಳಿಗೆ ಪರಿಶಿಷ್ಟ ಜಾತಿ ಜನಾಂಗದವರು ತೆರಳಿ ಗಣತಿದಾರರಿಗೆ ಜಾತಿ ಕುರಿತು ಮಾಹಿತಿಯನ್ನು ಮೇ 19 ರಿಂದ ಮೇ 21ರವರೆಗೆ ಸಲ್ಲಿಸಲು ಅವಕಾಶ ಕಲ್ಪಿಸಬೇಕು ಎಂದು ಅವರು ತಿಳಿಸಿದರು.
ಮನೆ-ಮನೆ ಸಮೀಕ್ಷೆ ಹಾಗೂ ವಿಶೇಷ ಶಿಬಿರದಲ್ಲಿ ಜಾತಿಯ ಬಗ್ಗೆ ಘೋಷಣೆ ಮಾಡದೇ ಇರುವವರು ಮೇ 19ರಿಂದ ಮೇ 23ರವರೆಗೆ ಆನ್‌ಲೈನ್ ಮೂಲಕ ಸ್ವಯಂ ಘೋಷಣೆ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಸ್ವಯಂ ಘೋಷಣೆಗೆ ಆಧಾರ್ ನಂಬರ್ ಹಾಗೂ ಆರ್.ಡಿ.ನಂಬರ್ ಕಡ್ಡಾಯವಾಗಿರುತ್ತದೆ.
-ನ್ಯಾ.ಎಚ್.ಎನ್.ನಾಗಮೋಹನ ದಾಸ್, ಒಳಮೀಸಲಾತಿ ವರ್ಗೀಕರಣದ ಏಕಸದಸ್ಯ ವಿಚಾರಣಾ ಆಯೋಗದ ಅಧ್ಯಕ್ಷ