ಪ್ರಜಾಪ್ರಭುತ್ವ ವ್ಯವಸ್ಥೆಗೆ ದ್ರೋಹ, ಬಿ.ವೈ.ರಾಘವೇಂದ್ರ ವಿರುದ್ಧ ಮೊಕದ್ದಮೆ ದಾಖಲಿಸಿ : ಕೆ.ಎಸ್.ಈಶ್ವರಪ್ಪ
ಬೆಂಗಳೂರು : ಶಿವಮೊಗ್ಗ ಲೋಕಸಭಾ ಚುನಾವಣೆಯಲ್ಲಿ ಸೋಲುವ ಭೀತಿಯಿಂದ ಬಿಜೆಪಿ ಅಭ್ಯರ್ಥಿ ಬಿ.ವೈ,ರಾಘವೇಂದ್ರ ತನ್ನ ವಿರುದ್ಧ ಅಪಪ್ರಚಾರ ಮಾಡಿ ಪ್ರಜಾಪ್ರಭುತ್ವ ವ್ಯವಸ್ಥೆಗೆ ದ್ರೋಹ ಬಗೆದಿರುವರೆಂದು ಆರೋಪಿಸಿ ರಾಜ್ಯ ಚುನಾವಣಾ ಆಯೋಗಕ್ಕೆ ಪಕ್ಷೇತರ ಅಭ್ಯರ್ಥಿ ಕೆ.ಎಸ್.ಈಶ್ವರಪ್ಪ ದೂರು ಸಲ್ಲಿಸಿದ್ದಾರೆ.
ಮಂಗಳವಾರ ಬೆಂಗಳೂರಿನಲ್ಲಿ ಮುಖ್ಯ ಚುನಾವಣಾಧಿಕಾರಿಗೆ ಭೇಟಿ ನೀಡಿದ ಅವರು, ಬಿಜೆಪಿ ಅಭ್ಯರ್ಥಿ ಬಿ.ವೈ. ರಾಘವೇಂದ್ರ ವಿರುದ್ಧ ಕೆಲವು ದಾಖಲಾತಿಗಳನ್ನು ಪೆನ್‍ಡ್ರೈವ್ ಮೂಲಕ ಚುನಾವಣಾ ಆಯೋಗಕ್ಕೆ ಸಲ್ಲಿಸಿದರು.
ಬಳಿಕ ಮುಖ್ಯ ಚುನಾವಣಾಧಿಕಾರಿ ಕಚೇರಿ ಬಳಿ ಮಾತನಾಡಿದ ಅವರು, ಚುನಾವಣೆ ಸೋಲುವ ಭೀತಿಯಿಂದ ಬಿಜೆಪಿ ಅಭ್ಯರ್ಥಿ ರಾಘವೇಂದ್ರ ಕೆಲವು ನಕಲಿ ಫೋಟೋ ಬಿಡುಗಡೆ ಮಾಡಿದಲ್ಲದೆ, ನನ್ನದು, ಪ್ರಧಾನಿ ಮೋದಿ ಅವರದ್ದು ಪೋಟೋ ಹಾಕಿ ಸುಳ್ಳು ಪ್ರಚಾರ ಮಾಡಿದ್ದಾರೆ. ಸೋಲಿನ ಭೀತಿಯಲ್ಲಿ ರಾಘವೇಂದ್ರ ಇದೆಲ್ಲ ಮಾಡಿದ್ದಾರೆ ಎಂದು ಆರೋಪಿಸಿದರು.
ಈಗಾಗಲೇ ಶಿವಮೊಗ್ಗ ಚುನಾವಣಾ ಅಧಿಕಾರಿಗಳಿಗೂ ದೂರು ಕೊಟ್ಟಿದ್ದೇನೆ. ಅಪ್ಪ ಮಕ್ಕಳ ಹಿಡಿತದಿಂದ ಪಕ್ಷವನ್ನು ಹೊರಗೆ ತರಬೇಕೆನ್ನುವುದು ನನ್ನ ಉದ್ದೇಶ. ಇವರ ರೀತಿ ನಾನು ಷಡ್ಯಂತ್ರ ಮಾಡಲಿಲ್ಲ. ಜಿಲ್ಲಾ ಪೊಲೀಸರಿಗೂ ದೂರುಕೊಟ್ಟಿದ್ದೆ, ಅವರು ರಾಘವೇಂದ್ರ ಹೆಸರು ಉಲ್ಲೇಖಿಸದೇ ಅನಾಮಿಕ ಎಂದು ದೂರು ದಾಖಲಿಸಿದ್ದಾರೆ. ಇದು ನನಗೆ ಸಮಾಧಾನ ಆಗಿಲ್ಲ. ಹೀಗಾಗಿ ಚುನಾವಣಾ ಆಯೋಗಕ್ಕೆ ದೂರು ಕೊಟ್ಟಿದ್ದೇನೆ ಎಂದು ಅವರು ಹೇಳಿದರು.
ಈ ಹಿಂದೆ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಗೆ ಆರು ವರ್ಷ ಉಚ್ಛಾಟನೆ ಮಾಡಿದ್ದರು. ಆ ಉಚ್ಛಾಟನೆ ಪದಕ್ಕೆ ಬೆಲೆ ಇದೆಯಾ?. ಮತ್ತೆ ಅವರ ಮನೆಗೆ ಯಡಿಯೂರಪ್ಪ ಹೋಗಿ ಶೆಟ್ಟರ್ ಕಾಲು ಹಿಡಿದು ಕರೆತಂದರು. ಅವರ ಉಚ್ಛಾಟನೆಗೆ ಬೆಲೆ ಎಲ್ಲಿ ಬಂತು?. ನಾನು ಅವರ ಉಚ್ಛಾಟನೆ ತಲೆಯಲ್ಲಿ ಇಟ್ಟಿಕೊಂಡಿಲ್ಲ. ನಾನು ಚುನಾವಣೆಯಲ್ಲಿ ಗೆಲ್ಲುತ್ತೇನೆ. ಆನಂತರ ಪ್ರಧಾನಿ ಮೋದಿ ಅವರನ್ನು ಹೋಗಿ ಭೇಟಿ ಮಾಡುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಪ್ರಜ್ವಲ್ ಬಗ್ಗೆ ಮಾತನಾಡಲು ಅಸಹ್ಯ ಆಗುತ್ತೇ: ಈಶ್ವರಪ್ಪ
ಪ್ರಜ್ವಲ್ ಪ್ರಕರಣದ ಬಗ್ಗೆ ಮಾತನಾಡಲು ಅಸಹ್ಯ ಆಗುತ್ತೆ. ಇವರ ರಾಜಕೀಯ ಕುತಂತ್ರದಲ್ಲಿ ರಾಜ್ಯದ ಜನ ತಲೆ ತಗ್ಗಿಸುವಂತಾಗಿದೆ. ಹೆಣ್ಣನ್ನು ಮುಂದಿಟ್ಟುಕೊಂಡು ರಾಜಕೀಯ ಮಾಡುವವರು ದ್ರೋಹಿಗಳು. ಈ ಪ್ರಕರಣ ಸಿಬಿಐಗೆ ಕೊಡಲಿ ಎಂದು ಕೆ.ಎಸ್.ಈಶ್ವರಪ್ಪ ನುಡಿದರು.