ಬೆಂಗಳೂರಿನಲ್ಲಿ ಅ.26ಕ್ಕೆ ಕಂಬಳ ನಡೆಸುತ್ತಿಲ್ಲ : ಹೈಕೋರ್ಟ್‌ಗೆ ಮಾಹಿತಿ ನೀಡಿದ ಕಂಬಳ ಸಮಿತಿ

Update: 2024-10-24 03:42 GMT

Photo : PTI

ಬೆಂಗಳೂರು: ನಗರದ ಅರಮನೆ ಮೈದಾನದಲ್ಲಿ ಅ.26ರಂದು ಕಂಬಳ ಸ್ಪರ್ಧೆ ನಡೆಸುತ್ತಿಲ್ಲ ಮತ್ತು ಬೇರೆಲ್ಲೂ ಕಂಬಳ ನಡೆಸಲು ಸರಕಾರದ ಸಕ್ಷಮ ಪ್ರಾಧಿಕಾರಕ್ಕೆ ಮನವಿ ಸಲ್ಲಿಸಿಲ್ಲ ಎಂದು ಬೆಂಗಳೂರು ಕಂಬಳ ಸಮಿತಿಯು ಹೈಕೋರ್ಟ್‌ಗೆ ಮಾಹಿತಿ ನೀಡಿದೆ.

ಬೆಂಗಳೂರು ಕಂಬಳ ಪ್ರಶ್ನಿಸಿ ಪ್ರಾಣಿ ದಯಾ ಸಂಘ ಪೆಟಾ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್.ವಿ.ಅಂಜಾರಿಯಾ ಮತ್ತು ನ್ಯಾಯಮೂರ್ತಿ ಕೆ.ವಿ.ಅರವಿಂದ್ ನೇತೃತ್ವದ ವಿಭಾಗೀಯ ಪೀಠದಲ್ಲಿ ವಿಚಾರಣೆ ನಡೆಯಿತು.

ಈ ವೇಳೆ ಬೆಂಗಳೂರು ಕಂಬಳ ಸಮಿತಿ ಪರ ವಕೀಲ ವಿನೋದ್ ಕುಮಾರ್, ಅ. 26ರಂದು ಕಂಬಳ ಸ್ಪರ್ಧೆ ಆಯೋಜಿಸುತ್ತಿಲ್ಲ ಎಂದು ಮಾಹಿತಿ ನೀಡಿದರು. ಅರ್ಜಿದಾರ ಪೆಟಾ ಪರ ಹಿರಿಯ ವಕೀಲ ಧ್ಯಾನ್ ಚಿನ್ನಪ್ಪ, ಕಂಬಳ ಸ್ಪರ್ಧೆ ನಡೆಸುವಾಗ ಅನುಮತಿ ನೀಡಲಾಗುತ್ತಿದೆ ಎಂಬ ವಿಚಾರವನ್ನು ನಮಗೆ ತಿಳಿಸಬೇಕು. ಆಗ ನಾವು ನ್ಯಾಯಾಲಯದ ಮುಂದೆ ಬರುತ್ತೇವೆ. ನ.9ರಂದು ದಕ್ಷಿಣ ಕನ್ನಡದ ಪಿಲಿಕುಳದ ಪ್ರಾಣಿ ಸಂಗ್ರಹಾಲಯದ ಪಕ್ಕದಲ್ಲಿ ಕಂಬಳ ಸ್ಪರ್ಧೆ ಆಯೋಜನೆ ಮಾಡಲಾಗುತ್ತಿದೆ ಎನ್ನಲಾಗಿದೆ. ಈ ಸಂಬಂಧ ಪ್ರಾಣಿ ಸಂಗ್ರಹಾಲಯದ ನಿರ್ದೇಶಕರು ಜಿಲ್ಲಾಧಿಕಾರಿಗೆ ಪತ್ರ ಬರೆದು ಸ್ಪರ್ಧೆಯ ಸಂದರ್ಭದಲ್ಲಿನ ಕೂಗಾಟದಿಂದ ಪ್ರಾಣಿಗಳಿಗೆ ಸಮಸ್ಯೆಯಾಗುತ್ತಿದೆ ಎಂದು ಹೇಳಿದ್ದಾರೆ ಎಂದು ತಿಳಿಸಿದರು.

ರಾಜ್ಯ ಸರಕಾರದ ಪರ ಅಡ್ವೊಕೇಟ್ ಜನರಲ್ ಕೆ.ಶಶಿಕಿರಣ್ ಶೆಟ್ಟಿ ಹಾಜರಾಗಿ, ಕಳೆದ ವರ್ಷ ಬೆಂಗಳೂರು ಕಂಬಳಕ್ಕೆ ಕಾನೂನು ಪ್ರಕಾರ ಅನುಮತಿಸಿರುವುದಕ್ಕೆ ಸಂಬಂಧಿಸಿದ ದಾಖಲೆಗಳನ್ನು ನ್ಯಾಯಾಲಯದ ಮುಂದೆ ಇಡಲಾಗುವುದು. ಪೆಟಾ ಆಕ್ಷೇಪ ಇರುವುದು ಪ್ರಾಣಿಗಳಿಗೆ ಹಿಂಸೆ ನೀಡಲಾಗುತ್ತಿದೆ ಎಂದಾಗಿದೆ. ಈಗ ಕಂಬಳವನ್ನು ದಕ್ಷಿಣ ಕನ್ನಡ ಮತ್ತು ಉಡುಪಿಯಲ್ಲಿ ಮಾತ್ರ ನಡೆಸಬೇಕೆ ಎಂಬ ಪ್ರಶ್ನೆ ನ್ಯಾಯಾಲಯದ ಮುಂದಿದೆ. ಕಂಬಳ ಸ್ಪರ್ಧೆಯು ಕರ್ನಾಟಕದ ಸಂಸ್ಕೃತಿಗೆ ಸಂಬಂಧಿಸಿದ್ದು. ಇದನ್ನು ಕರ್ನಾಟಕ ಮಾತ್ರವಲ್ಲದೇ ದೇಶಾದ್ಯಂತ ಕೊಂಡೊಯ್ಯುವ ಸಂದರ್ಭ ಬಂದಿದೆ. ಇಲ್ಲಿ ಪ್ರಾಣಿಗಳಿಗೆ ಹಿಂಸೆಯಾಗುತ್ತಿದೆಯೇ ಎಂಬ ಪ್ರಶ್ನೆ ಇದೆ. ಕುದುರೆ ರೇಸ್ ನಡೆದಾಗ ಕುದುರೆಗಳನ್ನು ಬೇರೆ ದೇಶಗಳಿಂದ ಆಮದು/ರಫ್ತು ಮಾಡಲಾಗುತ್ತದೆ. ಬೇರೆ ರಾಜ್ಯಗಳಿಗೂ ಅವುಗಳನ್ನು ಸಾಗಿಸಲಾಗುತ್ತದೆ. ಯಾವುದೇ ನಿರ್ಧಾರ ಕೈಗೊಂಡರೂ ಪೀಠಕ್ಕೆ ತಿಳಿಸಲಾಗುವುದು ಎಂದರು.

ರಾಜ್ಯ ಸರಕಾರಕ್ಕೆ ಆಕ್ಷೇಪಣೆ ಸಲ್ಲಿಸಲು ನಿರ್ದೇಶಿಸಿದ ನ್ಯಾಯಾಲಯವು ಅರ್ಜಿ ವಿಚಾರಣೆಯನ್ನು ನವೆಂಬರ್ 5ಕ್ಕೆ ಮುಂದೂಡಿದೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News