ಪಿಜಿ ಡೆಂಟಲ್ ಅಂತಿಮ ಸುತ್ತಿನ ಸೀಟು ಹಂಚಿಕೆ ; ನಾಳೆಯಿಂದ ಆರಂಭ
ಬೆಂಗಳೂರು: ಪ್ರಸಕ್ತ ಸಾಲಿನ ಸ್ನಾತಕೋತ್ತರ ದಂತ ವೈದ್ಯಕೀಯ ಪದವಿಯ ಪ್ರವೇಶಕ್ಕೆ ಸಂಬಂಧಿಸಿದಂತೆ ಆನ್‍ಲೈನ್‍ನಲ್ಲಿ ಅಂತಿಮ ಸುತ್ತಿನ (ಮಾಪ್ ಅಪ್) ಸೀಟು ಹಂಚಿಕೆ ಪ್ರಕ್ರಿಯೆ ಆ.26ರಿಂದ ಆರಂಭವಾಗಲಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ತಿಳಿಸಿದ್ದಾರೆ.
ರವಿವಾರ ಪ್ರಕಟನೆ ಹೊರಡಿಸಿರುವ ಅವರು, ಇದುವರೆಗೂ ಸೀಟು ಸಿಗದವರು, ಸಿಕ್ಕಿಯೂ ಪ್ರವೇಶ ಪಡೆಯದಿರುವವರು ಅಂತಿಮ ಸುತ್ತಿನಲ್ಲಿ ಸೀಟು ಪಡೆಯಬಹುದು. ಆದರೆ ಕಡ್ಡಾಯವಾಗಿ ಎರಡು ಲಕ್ಷ ರೂಪಾಯಿ ಡೆಪಾಸಿಟ್ ಪಾವತಿಸಿದವರು ಮಾತ್ರ ಅಂತಿಮ ಸುತ್ತಿನ ಸೀಟು ಹಂಚಿಕೆಯಲ್ಲಿ ಭಾಗವಹಿಸಬಹುದು. ಸೀಟು ಸಿಕ್ಕ ನಂತರ ಈ ಠೇವಣಿ ಮೊತ್ತವನ್ನು ಶುಲ್ಕದ ಜತೆ ಹೊಂದಾಣಿಕೆ ಮಾಡಿಕೊಳ್ಳಲಾಗುವುದು ಎಂದು ವಿವರಿಸಿದ್ದಾರೆ
ಆ.26ರಿಂದ 27ರ ಮಧ್ಯಾಹ್ನ 2ಗಂಟೆವರೆಗೆ ಚಲನ್ ಡೌನ್‍ಲೋಡ್ ಮಾಡಿಕೊಂಡು ಡೆಪಾಸಿಟ್ ಮಾಡಬೇಕು. ಬಳಿಕ ಇದುವರೆಗೂ ಮೂಲ ದಾಖಲೆ ಸಲ್ಲಿಸದೇ ಇರುವವರು ಅಂದು ಕೆಇಎ ಕಚೇರಿಯಲ್ಲಿ ಸಲ್ಲಿಸಬೇಕು. ಆ.27ರ ಸಂಜೆ 6ರಿಂದ ಆ.29ರ ಬೆಳಿಗ್ಗೆ 10 ರವರೆಗೆ ಇಚ್ಛೆಗಳನ್ನು ದಾಖಲಿಸಲು ಅವಕಾಶ ನೀಡಲಾಗುವುದು.
ಆ.29ರಂದು ಸಂಜೆ 4ಗಂಟೆಗೆ ಸೀಟು ಹಂಚಿಕೆ ಫಲಿತಾಂಶ ಪ್ರಕಟಿಸಲಾಗುವುದು. ಆ.30ರಿಂದ ಆ.31ರೊಳಗೆ ಶುಲ್ಕ ಪಾವತಿಸಿ, ಸೆ.2ರೊಳಗೆ ಕಾಲೇಜಿಗೆ ವರದಿ ಮಾಡಿಕೊಳ್ಳಬಹುದು ಎಂದು ಅವರು ಹೇಳಿದರು.