ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಬೆಂಗಳೂರಿನ ಟರ್ಮಿನಲ್ 2ಗೆ ಸ್ಕೈಟ್ರಾಕ್ಸ್ 5 ಸ್ಟಾರ್ ಮಾನ್ಯತೆ

Update: 2025-04-10 22:32 IST
ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಬೆಂಗಳೂರಿನ ಟರ್ಮಿನಲ್ 2ಗೆ ಸ್ಕೈಟ್ರಾಕ್ಸ್ 5 ಸ್ಟಾರ್ ಮಾನ್ಯತೆ
  • whatsapp icon

ಬೆಂಗಳೂರು : ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಬೆಂಗಳೂರಿನ ಟರ್ಮಿನಲ್ 2 ಸ್ಕೈಟ್ರಾಕ್ಸ್ ‘5 ಸ್ಟಾರ್ ಮಾನ್ಯತೆ’ ಪಡೆದ ಭಾರತದ ಮೊದಲ ಟರ್ಮಿನಲ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಜಾಗತಿಕವಾಗಿ ಗೌರವಿಸಲ್ಪಡುವ ಸ್ಕೈಟ್ರಾಕ್ಸ್ ಮಾನದಂಡಗಳ ಆಧಾರದ ಮೇಲೆ ಈ ಮಾನ್ಯತೆಯನ್ನು ನೀಡಲಾಗಿದೆ. ಜೊತೆಗೆ, ಭಾರತ ಮತ್ತು ದಕ್ಷಿಣ ಏಷ್ಯಾದ ಅತ್ಯುತ್ತಮ ಪ್ರಾದೇಶಿಕ ವಿಮಾನ ನಿಲ್ದಾಣ ಎಂಬ ಹಿರಿಮೆಯನ್ನು ಸತತ 2ನೇ ಬಾರಿ ಮುಡಿಗೇರಿಸಿಕೊಳ್ಳುವ ಮೂಲಕ, ಕೆಂಪೇಗೌಡ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣವು ಪ್ರಮುಖ ಜಾಗತಿಕ ವಿಮಾನಯಾನ ಕೇಂದ್ರವಾಗಿ ಹೊರಹೊಮ್ಮಿದೆ.

ಸ್ಕೈಟ್ರಾಕ್ಸ್ ವಲ್ಡ್ ಏರ್‍ಪೆರ್ಟ್ ಅವಾರ್ಡ್, ವಿಮಾನ ನಿಲ್ದಾಣಗಳ ಶ್ರೇಷ್ಠತೆಯ ಮಾನದಂಡವೆಂದು ಜಾಗತಿಕವಾಗಿ ಹೆಸರುವಾಸಿಯಾಗಿದ್ದು, ಪ್ರಯಾಣಿಕರ ಅನುಭವ ಹೆಚ್ಚಿಸುವಲ್ಲಿ ಉತ್ತಮ ಸಾಧನೆ ಮಾಡಿದ ವಿಮಾನ ನಿಲ್ದಾಣಗಳನ್ನು ಗುರುತಿಸುತ್ತದೆ. ಟರ್ಮಿನಲ್ ವಿನ್ಯಾಸ, ಸ್ವಚ್ಛತೆ, ಭದ್ರತೆ, ಡಿಜಿಟಲ್ ಏಕೀಕರಣ, ಆತಿಥ್ಯ, ಒಳಗೊಳ್ಳುವಿಕೆ ಮತ್ತು ಸುಸ್ಥಿರತೆ ಸೇರಿದಂತೆ 30ಕ್ಕೂ ಹೆಚ್ಚು ವಿಭಾಗಗಳಲ್ಲಿ 800ಕ್ಕೂ ಹೆಚ್ಚು ಪ್ರಯಾಣಿಕರ ಅಭಿಪ್ರಾಯ, ಲೆಕ್ಕಪರಿಶೋಧನೆಯ ನಂತರ ವಿಮಾನ ನಿಲ್ದಾಣದ ಟರ್ಮಿನಲ್ 2ಗೆ 5 ಸ್ಟಾರ್ ಮಾನ್ಯತೆಯನ್ನು ನೀಡಲಾಗಿದೆ.

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್-2 ಪ್ರಯಾಣಿಕರ ಪ್ರಯಾಣದ ಅನುಭವವನ್ನು ಅತ್ಯುತ್ತಮಗೊಳಿಸುವತ್ತ ಸತತ ಪ್ರಯತ್ನ ನಡೆಸುತ್ತಿದ್ದು, ಸೇವಾ ದಕ್ಷತೆ ಮತ್ತು ಒದಗಿಸುವ ಸೌಕರ್ಯಗಳ ನಡುವೆ ಸಮತೋಲನ ಕಾಯ್ದುಕೊಂಡಿದೆ.

ಮಾನದಂಡಗಳು :

-ವಿಶ್ವ ದರ್ಜೆಯ ಟರ್ಮಿನಲ್ ಅನುಭವ: ಟರ್ಮಿನಲ್-2 ರ ಪರಿಸರ ಸ್ನೇಹಿ ‘ಉದ್ಯಾನವನದಲ್ಲಿ ಟರ್ಮಿನಲ್’ ವಿನ್ಯಾಸ, ಹಸಿರು ವಾತಾವರಣ, ಹೇರಳವಾದ ನೈಸರ್ಗಿಕ ಬೆಳಕು ಮತ್ತು ಪ್ರಕೃತಿ ಸೊಬಗಿನ ನಿರ್ಮಾಣಗಳು ಪ್ರಯಾಣಿಕರಿಗೆ ವಿಶೇಷ ಅನುಭವ ಒದಗಿಸುತ್ತವೆ. ಪ್ರಯಾಣಿಕ-ಕೇಂದ್ರಿತ ಮಾರ್ಗ ಶೋಧಕ ಸೌಲಭ್ಯಗಳು (ವೇಫೈಂಡಿಂಗ್) ಯಾವುದೇ ಅಡೆತಡೆಯಿಲ್ಲದೇ ಪ್ರಯಾಣಿಸಲು ಅನುಕೂಲ ಒದಗಿಸುತ್ತದೆ. ಅಷ್ಟೇ ಅಲ್ಲದೆ, ಟರ್ಮಿನಲ್ 2ರಲ್ಲಿನ ಕಲೆ ಮತ್ತು ಸಾಂಸ್ಕೃತಿಕ ವಿನ್ಯಾಸವು ಪ್ರಯಾಣಿಕರ ಮನಸೂರೆಗೊಳಿಸುವಂತಿದ್ದು, ಅನನ್ಯ ಆಕರ್ಷಕ ಅನುಭವಕ್ಕೆ ಕಾರಣವಾಗಿದೆ.

ತಡೆರಹಿತ ಡಿಜಿಟಲ್ ನಾವೀನ್ಯತೆ :

ಡಿಜಿ ಯಾತ್ರಾದ ಮೂಲಕ ಬಯೋಮೆಟ್ರಿಕ್ ಪ್ರವೇಶ, ಕೃತಕ ಬುದ್ಧಿಮತ್ತೆ ಚಾಲಿತ ಬಿಎಲ್‍ಆರ್ ಪಲ್ಸ್ ಅಪ್ಲಿಕೇಶನ್, ಫಾಸ್ಟ್-ಟ್ಯಾಕ್ಡ್ ವಲಸೆ ಮತ್ತು ಸುಧಾರಿತ ಸರತಿ ಸಾಲು ನಿರ್ವಹಣೆಯೊಂದಿಗೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬೆಂಗಳೂರಿನಲ್ಲಿ ಪ್ರಯಾಣಿಕರು ಹೆಚ್ಚಿನ ಸೇವಾ ದಕ್ಷತೆಯನ್ನು ಪಡೆಯಬಹುದಾಗಿದೆ. ನಡೆಯಬೇಕಾದ ದೂರದ ಮಾಹಿತಿಯ ಸೂಚಕಗಳು ಮತ್ತು ಸ್ವಯಂಚಾಲಿತ ಭದ್ರತಾ ವ್ಯವಸ್ಥೆಗಳು ಡಿಜಿಟಲ್ ಅನುಭವವನ್ನು ಮತ್ತಷ್ಟು ಸುಗಮಗೊಳಿಸುತ್ತದೆ.

-ಪ್ರತಿಯೊಬ್ಬರ ಒಳಗೊಳ್ಳುವಿಕೆ :

ಕೆಂಪೇಗೌಡ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣ ಬೆಂಗಳೂರು ದೇಶದ ವಿಮಾನ ನಿಲ್ದಾಣಗಳಲ್ಲೇ ಮೊದಲ ಸಂವೇದನಾ ಕೊಠಡಿಯನ್ನು ಆರಂಭಿಸಿದೆ. ಇದು ಸಂವೇದನಾ ಸೂಕ್ಷ್ಮತೆಗಳನ್ನು ಹೊಂದಿರುವ ಪ್ರಯಾಣಿಕರಿಗೆ ಒತ್ತಡ ಮುಕ್ತ ಅನುಭವವನ್ನು ಒದಗಿಸುತ್ತಿದೆ. ಸಂವೇದನಾ ಆಧಾರಿತ ಸ್ಲೈಡಿಂಗ್ ಬಾಗಿಲುಗಳು, ಆಡಿಯೊ ಪ್ರಾಂಪ್ಟ್‍ಗಳೇ ಮೊದಲಾದ ಸೀಮಿತ ಚಲನಶೀಲ ಪ್ರಯಾಣಿಕ ಸ್ನೇಹಿ ಸೌಲಭ್ಯಗಳು ಸೇರಿದಂತೆ, ಗುಪ್ತ ದಿವ್ಯಾಂಗ ಸನ್‍ಫ್ಲಾವರ್ ಲ್ಯಾನ್ಯಾರ್ಡ್ ಕಾರ್ಯಕ್ರಮವು ಅಗತ್ಯವಿರುವ ಪ್ರಯಾಣಿಕರಿಗೆ ಸಹಾಯ ಒದಗಿಸುತ್ತದೆ.

-ಸುಸ್ಥಿರತೆಯ ಹೆಜ್ಜೆಗುರುತು :

ಪ್ಲಾಟಿನಂ ಐಇಇಆ ಪೂರ್ವ-ಪ್ರಮಾಣೀಕರಣ ಮತ್ತು ಎಸಿಐ 5ನೇ ಹಂತದ ಕಾರ್ಬನ್ ಮಾನ್ಯತೆಯನ್ನು ಹೊಂದಿರುವ ವಿಶ್ವದ ಅತಿದೊಡ್ಡ ಟರ್ಮಿನಲ್ ಆಗಿರುವ ಟರ್ಮಿನಲ್ 2, ನವೀಕರಿಸಬಹುದಾದ ಇಂಧನ, ಪರಿಸರ ಸ್ನೇಹಿ ಮೂಲಸೌಕರ್ಯಗಳಿಗೆ ಒತ್ತು ನೀಡಿದೆ.

-ಲೌಂಜ್ ಅನುಭವಗಳ ಉತ್ಕೃಷ್ಟತೆ :

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬೆಂಗಳೂರಿನಲ್ಲಿ ಪ್ರಯಾಣಿಕರು, ಜಾಗತಿಕ ಮತ್ತು ಸ್ಥಳೀಯ ಬ್ರ್ಯಾಂಡ್‍ಗಳ ಆಯ್ದ ಚಿಲ್ಲರೆ ವ್ಯಾಪಾರ ಮಳಿಗೆಗಳು, ಆಹಾರ ಮತ್ತು ಪಾನೀಯಗಳ ಅನುಭವವನ್ನು ಆನಂದಿಸಬಹುದಾಗಿದೆ. ಜೊತೆಗೆ, ವಿಮಾನ ನಿಲ್ದಾಣದಲ್ಲಿ ಲಭ್ಯವಿರುವ 080 ಲೌಂಜ್‍ಗಳು, ಪ್ರೀಮಿಯಂ ಆತಿಥ್ಯ ಕೊಡುಗೆಗಳು ಮತ್ತು ಸಹಯೋಗಿ ಸಂಸ್ಥೆಗಳು ಪ್ರಯಾಣಿಕರಿಗೆ ಅತ್ಯುತ್ತಮ ದರ್ಜೆಯ ಸೌಕರ್ಯ ಮತ್ತು ಸೇವೆಯನ್ನು ಒದಗಿಸುವ ಗುರಿಯನ್ನು ಹೊಂದಿವೆ. 

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News