‘ಕೆಆರ್‌ಎಸ್‍ನಲ್ಲಿ ಅದ್ದೂರಿ ಕಾವೇರಿ ಆರತಿಗೆ ಶಿಫಾರಸು’ ಅನುಷ್ಠಾನ ಸಮಿತಿ ರಚನೆ
ಬೆಂಗಳೂರು : ರಾಜ್ಯ ಸರಕಾರವು ದಸರಾ ಹಬ್ಬದ ಸಂಧರ್ಭದಲ್ಲಿ ಕೃಷ್ಣರಾಜ ಸಾಗರದಲ್ಲಿ (ಕೆಆರ್‌ಎಸ್) ಕಾವೇರಿ ಆರತಿಯನ್ನು ನಡೆಸಲು ನಿರ್ಧಾರವನ್ನು ಕೈಗೊಂಡಿದೆ. ಈ ನಿಟ್ಟಿನಲ್ಲಿ ಅಧ್ಯಯನ ನಡೆಸಿ ವರದಿಯನ್ನು ಸಲ್ಲಿಸಲು ರಚಿಸಿರುವ ಸಮಿತಿಯ ಶಿಫಾರಸುಗಳನ್ನು ಅನುಷ್ಠಾನ ಮಾಡಲು ಮತ್ತೊಂದು ಸಮಿತಿಯನ್ನು ರಚಿಸಿದ್ದು, ಇದಕ್ಕಾಗಿ 92 ಕೋಟಿ ರೂ.ಅನುದಾನವನ್ನು ನೀಡಿದೆ.
ವಿಶ್ವವಿಖ್ಯಾತ ದಸರಾ ಹಬ್ಬಕ್ಕೆ ಮತ್ತಷ್ಟು ಮೆರಗು ನೀಡುವ ನಿಟ್ಟಿನಲ್ಲಿ ಕಾವೇರಿ ನದಿಗೆ ನಮನ ಹಾಗೂ ಪೂಜೆ ಸಲ್ಲಿಸಲು ‘ಕಾವೇರಿ ಆರತಿ’ಯನ್ನು ಆಯೋಜಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಕೃಷಿ ಸಚಿವ ಚಲುವರಾಯಸ್ವಾಮಿ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ರಚಿಸಿದ್ದರು. ಈ ಸಮಿತಿಯ ನೀಡಿರುವ ಶಿಫಾರಸ್ಸುಗಳನ್ನು ಸಮಪರ್ಕವಾಗಿ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ, ಹಂಪಿಯಲ್ಲಿ ತುಂಗಾ ಆರತಿ, ಇಲ್ಲಿನ ಸ್ಯಾಂಕಿ ಕೆರೆಯಲ್ಲಿ ಕಾವೇರಿ ಆರತಿಯನ್ನು ಯಶಸ್ವಿಯಾಗಿ ನಡೆಯುವಲ್ಲಿ ಪ್ರಮುಖ ಪಾತ್ರವಹಿಸಿದ ಬೆಂಗಳೂರು ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿ ಅಧ್ಯಕ್ಷರಾದ ಡಾ ರಾಮ್ ಪ್ರಸಾತ್ ಮನೋಹರ್ ಅಧ್ಯಕ್ಷತೆಯಲ್ಲಿ ಶಿಫಾರಸ್ಸು ಅನುಷ್ಠಾನ ಸಮಿತಿಯನ್ನು ರಚಿಸಲಾಗಿದೆ.
ನನ್ನ ಮೇಲೆ ವಿಶ್ವಾಸವಿಟ್ಟು ಇಂತಹ ಮಹತ್ವದ ಜವಾಬ್ದಾರಿಯನ್ನು ನೀಡಲಾಗಿದೆ. ಕಾವೇರಿಗೆ ನಮನ ಸಲ್ಲಿಸುವಂತಹ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ರ ಮಹತ್ವಾಕಾಂಕ್ಷೆಯ ಕಾರ್ಯಕ್ರಮವನ್ನು ವಿಜ್ರಂಭಣೆಯಿಂದ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ನಮ್ಮ ತಂಡ ಕಾರ್ಯನಿರ್ವಹಿಸಲಿದೆ. ಅತ್ಯಂತ ವಿಜ್ರಂಭಣೆಯಿಂದ ಈ ಕಾರ್ಯಕ್ರಮವನ್ನು ನಡೆಸಲು ಎಲ್ಲ ರೀತಿಯ ಸಿದ್ದತೆಗಳನ್ನು ನಡೆಸಲಾಗುವುದು ಎಂದು ಡಾ.ರಾಮ್ ಪ್ರಸಾತ್ ಮನೋಹರ್ ತಿಳಿಸಿದ್ದಾರೆ.