ಉದ್ಯೋಗ ಸೃಷ್ಟಿಸುವುದು ನಿಮ್ಮ ಜೀವನದ ಗುರಿಯಾಗಲಿ : ಡಿ.ಕೆ.ಶಿವಕುಮಾರ್

Update: 2025-04-16 20:20 IST
ಉದ್ಯೋಗ ಸೃಷ್ಟಿಸುವುದು ನಿಮ್ಮ ಜೀವನದ ಗುರಿಯಾಗಲಿ : ಡಿ.ಕೆ.ಶಿವಕುಮಾರ್

PC | X@DKShivakumar

  • whatsapp icon

ಬೆಂಗಳೂರು : ಉದ್ಯೋಗ ಪಡೆಯುವುದಷ್ಟೇ ಅಲ್ಲ, ಉದ್ಯೋಗ ಸೃಷ್ಟಿಸುವುದು ನಿಮ್ಮ ಜೀವನದ ಗುರಿಯಾಗಲಿ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕಿವಿಮಾತು ಹೇಳಿದರು.

ಬುಧವಾರ ನಗರದ ಕೆಸಿಟಿ ಕಾಲೇಜು ಆವರಣದಲ್ಲಿ ಆಯೋಜಿಸಲಾಗಿದ್ದ ಬೃಹತ್ ಉದ್ಯೋಗ ಮೇಳದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ನಿಮ್ಮ ಜೀವನ ನಡೆಯಲು ನಿಮಗೆ ಉದ್ಯೋಗ ಬೇಕು ನಿಜ. ಆದರೆ ನೀವು ಉದ್ಯೋಗ ಮಾಡುವುದಕ್ಕಿಂತ ನೀವೇ ಹತ್ತಾರು ಜನರಿಗೆ ಉದ್ಯೋಗ ನೀಡುವ ಮಟ್ಟಕ್ಕೆ ಬೆಳೆಯುವತ್ತ ಗಮನಹರಿಸಿ. ಆಗ ಮಾತ್ರ ನೀವು ಯಶಸ್ವಿಯಾಗಲು ಸಾಧ್ಯ ಎಂದು ಹೇಳಿದರು.

ಉದ್ಯೋಗ ಸಿಗಲಿಲ್ಲ ಎಂದು ಎಂದಿಗೂ ಎದೆಗುಂದಬೇಡಿ. ಜೀವನದಲ್ಲಿ ಒಂದಲ್ಲಾ ಒಂದು ಅವಕಾಶ ಸಿಕ್ಕೇ ಸಿಗುತ್ತದೆ. ಸಿಕ್ಕ ಅವಕಾಶ ಸರಿಯಾಗಿ ಬಳಸಿಕೊಳ್ಳಿ. ಕೌಶಲ್ಯ ಆಧಾರಿತ ಉದ್ಯೋಗ ಮಾಡಿದರೆ ಉತ್ತಮ ಜೀವನ ಸಾಗಿಸಬಹುದು. ನೀವು ಯಾವುದೇ ಕೆಲಸ ಮಾಡಿದರು ಆತ್ಮಗೌರವ ಇರಬೇಕು ಎಂದು ಶಿವಕುಮಾರ್ ತಿಳಿಸಿದರು.

ಇಲ್ಲಿ ಅನೇಕರು ಉದ್ಯೋಗಕ್ಕಾಗಿ ಬಂದಿದ್ದೀರಿ. ನೀವು ನಿಮ್ಮ ಜೀವನದಲ್ಲಿ ಸಾವಿರಾರು ಮೆಟ್ಟಿಲು ಹತ್ತುವ ಆತ್ಮವಿಶ್ವಾಸವನ್ನು ಬೆಳೆಸಿಕೊಳ್ಳಿ. ನಿಮ್ಮ ಜೀವನದಲ್ಲಿ ಅನುಭವ ಸಿಕ್ಕಷ್ಟು ನಿಮ್ಮ ಬದುಕು, ಭವಿಷ್ಯ ಗಟ್ಟಿಯಾಗುತ್ತದೆ. ನಿಮ್ಮ ಬದುಕಿಗೆ ಉತ್ತಮ ಅನುಭವ ಪಡೆದುಕೊಳ್ಳಿ ಎಂದು ಅವರು ಹೇಳಿದರು.

ಮಲ್ಲಿಕಾರ್ಜುನ ಖರ್ಗೆ ಅವರು ಯುಪಿಎ ಸರಕಾರದ ಅವಧಿಯಲ್ಲಿ ಕಾರ್ಮಿಕ ಸಚಿವರಾಗಿದ್ದರು. ದೇಶದಲ್ಲಿ ಅನೇಕ ಕಾರ್ಮಿಕ ಸಚಿವರು ಬಂದು ಹೋಗಿದ್ದಾರೆ. ಆದರೆ ಆಸ್ಕರ್ ಫರ್ನಾಂಡಿಸ್‌ ಹಾಗೂ ಮಲ್ಲಿಕಾರ್ಜುನ ಖರ್ಗೆ ಕೈಗೊಂಡ ತೀರ್ಮಾನ ಬೇರೆ ಯಾರೂ ಕೈಗೊಂಡಿಲ್ಲ. ಕಲಬುರಗಿಯ ಇಎಸ್‍ಐ ಆಸ್ಪತ್ರೆ ಇದಕ್ಕೆ ಸಾಕ್ಷಿಯಾಗಿದೆ. ಆಮೂಲಕ ಬಡ ಕಾರ್ಮಿಕರ ಮಕ್ಕಳ ಆರೋಗ್ಯಕ್ಕೆ ನೆರವಾಗಿದ್ದಾರೆ. 371 ಜೆ ಮೂಲಕ ಈ ಭಾಗದ ಮಕ್ಕಳಿಗೆ ಉದ್ಯೋಗ ಹಾಗೂ ಶೈಕ್ಷಣಿಕವಾಗಿ ಉತ್ತೇಜನ ನೀಡಿದ್ದಾರೆ ಎಂದು ಉಪ ಮುಖ್ಯಮಂತ್ರಿ ಸ್ಮರಿಸಿದರು.

ಕೋವಿಡ್ ಸಮಯದಲ್ಲಿ ಈ ಭಾಗದ ಕಾರ್ಮಿಕರು ಬೆಂಗಳೂರಿನಲ್ಲಿ ನನ್ನನ್ನು ಭೇಟಿ ಮಾಡಿ ಆಗಿನ ಬಿಜೆಪಿ ಸರಕಾರ ಬಸ್ ದರವನ್ನು ಮೂರು ಪಟ್ಟು ಹೆಚ್ಚಿಸಿ ವಸೂಲಿ ಮಾಡುತ್ತಿದೆ ಎಂದು ದೂರು ನೀಡಿದರು. ಆಗ ನಮ್ಮ ನಾಯಕರ ಜತೆ ಚರ್ಚಿಸಿ ಕೆಪಿಸಿಸಿ ವತಿಯಿಂದ 1 ಕೋಟಿ ರೂ.ಗಳನ್ನು ಸಾರಿಗೆ ಇಲಾಖೆಗೆ ಕೊಡಲು ಮುಂದಾದೆ. ಆಗ ಸರಕಾರ ಒತ್ತಡಕ್ಕೆ ಮಣಿದು ಎಲ್ಲಾ ಕಾರ್ಮಿಕರಿಗೂ ಉಚಿತ ಬಸ್ ಪ್ರಯಾಣ ವ್ಯವಸ್ಥೆ ಕಲ್ಪಿಸಲಾಯಿತು ಎಂದು ಶಿವಕುಮಾರ್ ಹೇಳಿದರು.

ಕಲ್ಯಾಣ ಕರ್ನಾಟಕದ 26 ಸಾವಿರ ಜನ ನಿರುದ್ಯೋಗಿ ಯುವಕರಿಗೆ ಉದ್ಯೋಗ ಕೊಡಿಸಲು ಮುಂದಾಗಿರುವ ಸಚಿವ ಶರಣ ಪ್ರಕಾಶ್ ಪಾಟೀಲ್ ಹಾಗೂ ಅವರ ತಂಡಕ್ಕೆ ಸರಕಾರದ ಪರವಾಗಿ ಹಾಗೂ ವೈಯಕ್ತಿಕವಾಗಿ ಅಭಿನಂದನೆ ಸಲ್ಲಿಸುತ್ತೇನೆ. ಕೌಶಲ್ಯ ದೀಪವಿದ್ದಂತೆ. ನೀವು ಒಮ್ಮೆ ಕಲಿತರೆ ಜೀವನ ಪಯರ್ಂತ ನಿಮ್ಮ ಜೀವನದ ದಾರಿ ಬೆಳಗುತ್ತಿರುತ್ತದೆ. ಈ ಇಲಾಖೆಯ ಜವಾಬ್ದಾರಿ ವಹಿಸಿರುವ ಸಚಿವರು ಯಶಸ್ವಿಯಾಗಿ ಮುನ್ನಡೆಸುತ್ತಿದ್ದಾರೆ ಎಂದು ಅವರು ಶ್ಲಾಘಿಸಿದರು.

ನಮ್ಮ ಸರಕಾರ ಅನೇಕ ಕಾರ್ಯಕ್ರಮ ರೂಪಿಸುತ್ತಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಎಲ್ಲಾ ವರ್ಗಗಳ ರಕ್ಷಣೆ ಸಿಗುತ್ತದೆ. ಇದೇ ಕಾಂಗ್ರೆಸ್ ಪಕ್ಷದ ಶಕ್ತಿ. ನಮ್ಮ ಸರ್ಕಾರದ ಮೇಲೆ ನಿಮ್ಮ ಆಶೀರ್ವಾದವಿರಲಿ. ಕಲ್ಯಾಣ ಕರ್ನಾಟಕ ಭಾಗದಲ್ಲಿ ಐದು ಸಂಸದರನ್ನು ಗೆಲ್ಲಿಸಿ ದೊಡ್ಡ ಶಕ್ತಿ ತುಂಬಿದ್ದೀರಿ. ನಿಮಗೆ ಕೊಟಿ ನಮನ ಅರ್ಪಿಸುತ್ತೇನೆ ಎಂದು ಶಿವಕುಮಾರ್ ತಿಳಿಸಿದರು.

ಗಾಂಧಿ ಕುಟುಂಬಕ್ಕೆ ಲಾಭವಾಗಿಲ್ಲ:

‘ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ(ಈಡಿ)ವು ಕಾಂಗ್ರೆಸ್ ನಾಯಕರಾದ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ವಿರುದ್ಧ ಚಾರ್ಜ್‍ಶೀಟ್ ಸಲ್ಲಿಕೆ ಮಾಡಿದೆ. ಆದರೆ, ಇದರಲ್ಲಿ ಅವರಿಗೆ ಯಾವುದೇ ರೀತಿಯಲ್ಲಿಯೂ ಲಾಭವಾಗಿಲ್ಲ. ಇದು ಕಾಂಗ್ರೆಸ್ ಪಕ್ಷದ ಆಸ್ತಿ ಮತ್ತು ಅವರು ಪಕ್ಷದ ಮುಖ್ಯಸ್ಥರು, ಆದುದರಿಂದ, ಅವರ ಹೆಸರು ಉಲ್ಲೇಖವಾಗಿದೆ. ಇದರಲ್ಲಿ ತಪ್ಪೇನಿದೆ? ಇದನ್ನು ಕೇವಲ ರಾಜಕೀಯ ದ್ವೇಷಕ್ಕಾಗಿ ಮಾಡಲಾಗುತ್ತಿದೆ’

-ಡಿ.ಕೆ.ಶಿವಕುಮಾರ್, ಉಪ ಮುಖ್ಯಮಂತ್ರಿ

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News