ಕುಮಾರಸ್ವಾಮಿ ರಾಜಕಾರಣ ಬಿಟ್ಟು ರಾಜ್ಯದಲ್ಲಿ ಉದ್ಯೋಗ ಸೃಷ್ಟಿ ಮಾಡಲಿ: ಡಿ.ಕೆ.ಶಿವಕುಮಾರ್

Update: 2024-09-30 07:31 GMT

ಬೆಂಗಳೂರು, ಸೆ.30: "ಕುಮಾರಸ್ವಾಮಿ ರಾಜಕಾರಣ, ಬೇರೆ ಮಾತು ಎಲ್ಲವನ್ನು ಬಿಟ್ಟು ರಾಜ್ಯದಲ್ಲಿ 50 ಸಾವಿರದಿಂದ 1 ಲಕ್ಷ ಜನರಿಗೆ ಉದ್ಯೋಗ ನೀಡುವಂತಹ ಕೆಲಸ ಮಾಡಲಿ. ಕಾಂಗ್ರೆಸ್ ಸರ್ಕಾರ ಅವರಿಗೆ ಬೇಕಾದಂತಹ ಸಹಕಾರ ನೀಡುತ್ತದೆ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ಗೃಹಸಚಿವ ಡಾ.ಜಿ.ಪರಮೇಶ್ವರ ಅವರನ್ನು ಸದಾಶಿವ ನಗರ ನಿವಾಸದಲ್ಲಿ ಸೋಮವಾರ ಭೇಟಿ ಮಾಡಿದ ಬಳಿಕ ಅವರು ಮಾಧ್ಯಮದವರ ಜೊತೆ ಮಾತನಾಡುತ್ತಿದ್ದರು.

ಸರ್ಕಾರದ ಮಟ್ಟದಲ್ಲಿ ಅಧಿಕಾರಿಗಳಿಂದ ಮಾಹಿತಿ ಸೋರಿಕೆಯಾಗುತ್ತಿದೆ. ನನಗೆ ಉತ್ತಮವಾಗಿ ಗುಪ್ತಚರ ಮಾಹಿತಿ ದೊರಕುತ್ತದೆ ಎನ್ನುವ ಕುಮಾರಸ್ವಾಮಿ ಹೇಳಿಕೆ ಬಗ್ಗೆ ಮಾಧ್ಯಮದವರು ಗಮನಸೆಳೆದಾಗ ಅವರು ಈ ರೀತಿ ಪ್ರತಿಕ್ರಿಯಿಸಿದರು.

ಎತ್ತಿನಹೊಳೆ ವಿಚಾರವಾಗಿ ಸದಾಶಿವನಗರದಲ್ಲಿ ಗೃಹಸಚಿವ ಡಾ.ಜಿ. ಪರಮೇಶ್ವರ ಅವರೊಟ್ಟಿಗೆ ಚರ್ಚೆ ಬಳಿಕ ಮಾಧ್ಯಮಗಳ ಪ್ರಶ್ನೆಗಳಿಗೆ ಸೋಮವಾರ ಪ್ರತಿಕ್ರಿಯೆ ನೀಡಿದ ಅವರು, “ಕುಮಾರಸ್ವಾಮಿಗೆ ಮೋದಿ ಅವರು ಉಕ್ಕು, ಕೈಗಾರಿಕೆ ಎನ್ನುವ ದೊಡ್ಡ ಹಾಗೂ ಉತ್ತಮ ಖಾತೆ ಕೊಟ್ಟಿದ್ದಾರೆ. ಅವರಿಗೆ ಸಿಕ್ಕಿರುವ ಒಳ್ಳೇ ಅವಕಾಶ ಬಳಸಿಕೊಳ್ಳಲಿ” ಎಂದರು.

“ಯೋಗಕ್ಕಿಂತ ಯೋಗಕ್ಷೇಮ ಮುಖ್ಯವಾದುದು. ಹಾಸನ, ಬೆಂಗಳೂರು, ಮಂಡ್ಯ, ಬೀದರ್, ಕಲಬುರ್ಗಿ ಸೇರಿದಂತೆ ಇತರೇ ಭಾಗಗಳಿಗೆ ಉತ್ತಮ ಕೆಲಸ ಮಾಡಿ, ಏನಾದರೂ ಸಾಕ್ಷಿ ಬಿಟ್ಟು ಹೋಗಲಿ. ರಾಜಕೀಯ ಇದ್ದಿದ್ದೇ... ಏಕೆ ಇಂತಹ ಅವಕಾಶವನ್ನು ಕಳೆದುಕೊಳ್ಳುತ್ತಾ ಇದ್ದಾರೆ” ಎಂದು ವ್ಯಂಗ್ಯವಾಡಿದರು.

ರಾಜಕೀಯ ಬಿಟ್ಟು ಬೇರೆ ವಿಚಾರವಿಲ್ಲವೇ?

ನಿಮ್ಮ ಹಾಗೂ ಗೃಹ ಸಚಿವ ಪರಮೇಶ್ವರ್ ನಡುವೆ ರಾಜಕೀಯ ಚರ್ಚೆ ನಡೆಯಿತೇ ಎಂದು ಕೇಳಿದಾಗ, “ನಿಮಗೆ ರಾಜಕೀಯ ಬಿಟ್ಟು ಬೇರೆ ವಿಚಾರಗಳು ಕಾಣಿಸುವುದಿಲ್ಲವೇ?. ಜನರು ನಮ್ಮ ಮೇಲೆ ವಿಶ್ವಾಸವನ್ನಿಟ್ಟು ಅಧಿಕಾರ ಕೊಟ್ಟಿದ್ದಾರೆ, ಅವರ ಆಶೋತ್ತರಗಳನ್ನು ಈಡೇರಿಸಬೇಕು” ಎಂದರು.

“ನಾವೆಲ್ಲಾ ಪ್ರತಿದಿನ ರಾಜಕೀಯ ಮಾಡುತ್ತಲೇ ಇರುತ್ತೇವೆ. ಅಭಿವೃದ್ದಿಯಿದ್ದರೇ ತಾನೇ ರಾಜಕೀಯ. ಐದು ಗ್ಯಾರಂಟಿಗಳನ್ನು ಈಡೇರಿಸಿದ್ದೇವೆ. ಎತ್ತಿನಹೊಳೆ ಕೆಲಸ ಮುಗಿಸಬೇಕು, ಪ್ರಣಾಳಿಕೆಗಳಲ್ಲಿ ನೀಡಿರುವ ಭರವಸೆಗಳನ್ನು ಈಡೇರಿಸಬೇಕು. ಪ್ರತಿದಿನ ಸಮಯ ಓಡುತ್ತಿರುತ್ತದೆ” ಎಂದರು.

ಅಧಿಕಾರಿಗಳು ಇಲ್ಲದೇ ಪರಮೇಶ್ವರ ಹಾಗೂ ನೀವು ಮಾತ್ರ ಒಟ್ಟಿಗೆ ಸೇರಿದ್ದೀರಿ ಎಂದು ಕೇಳಿದಾಗ, “ನಾವು 136 ಕಾಂಗ್ರೆಸ್ ಶಾಸಕರು ಒಟ್ಟಿಗೆ ಇದ್ದೇವೆ. ಇಲ್ಲಿ ಚರ್ಚೆ ಮಾಡುವಾಗ ಅಧಿಕಾರಿಗಳು ಬೇಕಾಗಿಲ್ಲ. ನಾಯಕರ ಹಿಂದೆ ಅಧಿಕಾರಿಗಳು ಬೇಕಾಗಿಲ್ಲ. ನಾವು ಆಲೋಚಿಸುತ್ತೇವೆ, ಚರ್ಚೆ ಮಾಡುತ್ತೇವೆ, ಅಭಿಪ್ರಾಯ ಕೇಳುತ್ತೇವೆ. ಮಾತನಾಡುವವರು ಹಾಗೂ ತೀರ್ಮಾನಿಸುವವರು ಒಬ್ಬರೇ ” ಎಂದು ಹೇಳಿದರು.

ನನಗೂ ಅದಕ್ಕೂ ಸಂಬಂಧವಿಲ್ಲ

ಎಡಿಜಿಪಿ ಚಂದ್ರಶೇಖರ್ ಅವರ ವಿರುದ್ದ ಕುಮಾರಸ್ವಾಮಿ ಅವರ ಆರೋಪದ ಬಗ್ಗೆ ಕೇಳಿದಾಗ, “ತನಿಖೆ ಮಾಡುವವರು ಅವರು, ತನಿಖೆಗೆ ಒಳಗಾಗುವವರು ಅವರು. ಅದಕ್ಕೂ ನನಗೂ ಸಂಬಂಧವಿಲ್ಲ” ಎಂದು ಸ್ಪಷ್ಟಪಡಿಸಿದರು.

ಐಟಿಯಿಂದ ತನಿಖೆಯಾಗಲಿ

ಸರ್ಕಾರ ಬೀಳಿಸಲು 1 ಸಾವಿರ ಕೋಟಿ ರೂ. ಮೀಸಲಿಡಲಾಗಿದೆ ಎನ್ನುವ ಯತ್ನಾಳ್ ಅವರ ಹೇಳಿಕೆ ಬಗ್ಗೆ ಕೇಳಿದಾಗ, “ಇದರ ಬಗ್ಗೆ ಈಗಾಗಲೇ ಹೈಕಮಾಂಡ್ ಗಮನಕ್ಕೆ ತರಲಾಗಿದೆ. ಪಕ್ಷ ಹಾಗೂ ಸರ್ಕಾರ ಉರುಳಿಸಲು ಈ ಕೆಲಸ ಮಾಡಲಾಗುತ್ತಿದೆ. ನಮ್ಮ ಕಾನೂನು ಸಲಹೆಗಾರರ ಬಳಿ ಚರ್ಚೆ ನಡೆಸಲಾಗುವುದು. ಈ ಕೃತ್ಯ ಐಟಿಯವರಿಂದ ತನಿಖೆಗೆ ಒಳಗಾಗಬೇಕು” ಎಂದರು.

2025ಕ್ಕೆ ತುಮಕೂರಿಗೆ ಎತ್ತಿನಹೊಳೆ ನೀರು

“ಮುಂದಿನ 2025 ರ ವೇಳೆಗೆ ತುಮಕೂರಿಗೆ ಎತ್ತಿನಹೊಳೆ ನೀರನ್ನು ಹರಿಸಲು ಪ್ರಯತ್ನ ಮಾಡಲಾಗುವುದು. ಈಗಾಗಲೇ ಎತ್ತಿನಹೊಳೆ ನೀರನ್ನು ಮೇಲಕ್ಕೆ ಎತ್ತಿ ಸಂಗ್ರಹ ಮಾಡಲಾಗಿದೆ. ತುಮಕೂರು ಹಾಗೂ ಹಾಸನ ಜಿಲ್ಲೆಯಲ್ಲಿ ಅರಣ್ಯ ಭೂಮಿಯನ್ನು ಗುರುತಿಸಲಾಗಿದೆ. ಇದನ್ನು ನೀರಾವರಿ ಇಲಾಖೆಗೆ ವರ್ಗಾವಣೆ ಮಾಡಬೇಕು. ಈ ವಿಚಾರವಾಗಿ ಪ್ರತ್ಯೇಕ ಸಭೆಯನ್ನು ನಡೆಸಲಾಗುವುದು ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ. ಅರಣ್ಯ ಸಚಿವರ ಬಳಿಯೂ ಮಾತನಾಡಲಾಗವುದು” ಎಂದರು.

ದಸರಾ ನಂತರ ಎತ್ತಿನಹೊಳೆಯಿಂದ ಬೈರಗೊಂಡ್ಲುವರೆಗೂ ಸ್ಥಳ ವೀಕ್ಷಣೆ

“ಮಳೆ ಕಡಿಮೆಯಾಗುತ್ತಿದೆ, ತುಮಕೂರು, ಬೆಂಗಳೂರು ಗ್ರಾಮಾಂತರ, ರಾಮನಗರ, ಮಂಡ್ಯ ಭಾಗದಲ್ಲಿ ಕುಡಿಯುವ ನೀರಿಗೆ ತೊಂದರೆಯಾಗುತ್ತಿದೆ. ಬಿಜೆಪಿ ಅವಧಿಯಲ್ಲಿ ಕೊರಟಗೆರೆ ಬಳಿಯ ಬೈರಗೊಂಡ್ಲು ಜಲಾಶಯದ ನಿರ್ಮಾಣ ಯೋಜನೆಯನ್ನು ಬದಲಾವಣೆ ಮಾಡಿದ್ದರು. ಈ ಕಾರಣಕ್ಕೆ ಸ್ಥಳ ವೀಕ್ಷಣೆ ಮಾಡಬೇಕು. ಇಲ್ಲಿ ದೊಡ್ಡಬಳ್ಳಾಪುರದ ಒಂದಷ್ಟು ಭಾಗವೂ ಸೇರಿಕೊಂಡಿದೆ. ಪರಿಹಾರ ವಿಚಾರದಲ್ಲಿ ವ್ಯಾಜ್ಯಗಳಿವೆ. ಈ ಭಾಗದ ರೈತರು ಒಂದೇ ರೀತಿಯ ಪರಿಹಾರ ನೀಡಿ ಎಂದು ಹೇಳುತ್ತಿದ್ದಾರೆ. ದಸರಾ ನಂತರ ಎತ್ತಿನಹೊಳೆಯಿಂದ ಬೈರಗೊಂಡ್ಲುವರೆಗೂ ಸ್ಥಳ ವೀಕ್ಷಣೆ ನಡೆಸಿ ತೊಂದರೆಗಳನ್ನು ಪರಿಶೀಲನೆ ಮಾಡಲಾಗುವುದು” ಎಂದು ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News