ಸಕಲ ಸರಕಾರಿ ಗೌರವದೊಂದಿಗೆ ನೆರವೇರಿದ ಮಂಜುನಾಥ್, ಭರತ್ ಭೂಷಣ್ ಅಂತ್ಯಸಂಸ್ಕಾರ

ಬೆಂಗಳೂರು : ಜಮ್ಮು-ಕಾಶ್ಮೀರದ ಪಹಲ್ಗಾಮ್‍ನಲ್ಲಿ ನಡೆದ ಉಗ್ರರ ದಾಳಿಗೆ ಬಲಿಯಾದ ಶಿವಮೊಗ್ಗದ ಮಂಜುನಾಥ್ ಹಾಗೂ ಬೆಂಗಳೂರಿನ ಭರತ್ ಭೂಷಣ್ ಅವರ ಪಾರ್ಥಿವ ಶರೀರದ ಅಂತ್ಯ ಸಂಸ್ಕಾರವನ್ನು ಸರಕಾರಿ ಗೌರವಗಳೊಂದಿಗೆ ಪ್ರತ್ಯೇಕವಾಗಿ ಶಿವಮೊಗ್ಗ ಹಾಗೂ ಬೆಂಗಳೂರಿನಲ್ಲಿ ನೆರವೇರಿಸಲಾಯಿತು.
ಜಮ್ಮು-ಕಾಶ್ಮೀರದಿಂದ ವಿಶೇಷ ವಿಮಾನದಲ್ಲಿ ಮೃತ ಮಂಜುನಾಥ್ ಪಾರ್ಥಿವ ಶರೀರ ಬೆಂಗಳೂರಿನ ಕೇಂಪೇಗೌಡ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮಂಜುನಾಥ್ ಅವರ ಪಾರ್ಥಿವ ಶರೀರನ್ನು ಶಿವಮೊಗ್ಗಕ್ಕೆ ಹಾಗೂ ಬೆಂಗಳೂರಿನ ಭರತ್ ಭೂಷಣ್ ಮೃತದೇಹವನ್ನು ಇಲ್ಲಿನ ಮತ್ತೀಕೆರೆಯಲ್ಲಿನ ಅವರ ನಿವಾಸಕ್ಕೆ ತರಲಾಯಿತು.
ಅಂತಿಮ ವಿಧಿ-ವಿಧಾನಗಳನ್ನು ನೆರವೇರಿಸಿದ ಬಳಿಕ ಮೃತ ಮಂಜುನಾಥ್ ಅಂತ್ಯಕ್ರಿಯೆ ಶಿವಮೊಗ್ಗದ ರೋಟರಿ ಚಿತಾಗಾರದಲ್ಲಿ ನಡೆಸಿದರೆ, ಭರತ್ ಭೂಷಣ್ ಅಂತ್ಯಕ್ರಿಯೆ ಇಲ್ಲಿನ ಹೆಬ್ಬಾಳದ ಚಿತಾಗಾರದಲ್ಲಿ ಪೊಲೀಸ್ ಸಿಬ್ಬಂದಿ ಮೂರು ಸುತ್ತು ಕುಶಾಲ ತೋಪುಗಳನ್ನು ಸಿಡಿಸುವ ಮೂಲಕ ಸರಕಾರಿ ಗೌರವಗಳೊಂದಿಗೆ ಅಂತ್ಯ ಸಂಸ್ಕಾರ ನೆರವೇರಿಸಲಾಯಿತು.
ಗಣ್ಯರಿಂದ ಅಂತಿಮ ದರ್ಶನ: ಬೆಂಗಳೂರಿನ ಭರತ್ ಭೂಷಣ್ ನಿವಾಸದ ಬಳಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಇನ್ನಿತರ ಗಣ್ಯರು ಮೃತದೇಹದ ಅಂತಿಮ ದರ್ಶನ ಪಡೆದರು.
ಈ ವೇಳೆ ಮಾತನಾಡಿದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ‘ಜಮ್ಮು-ಕಾಶ್ಮೀರದ ಪಹಲ್ಗಾಮ್‍ನಲ್ಲಿ ಪ್ರವಾಸಿಗರ ಮೇಲೆ ಉಗ್ರರ ದಾಳಿಯ ಹಿಂದೆ ಒಂದಲ್ಲ ಒಂದು ಲೋಪದ ಕಾರಣವಿರುತ್ತದೆ. ಪ್ರವಾಸಿ ತಾಣದಲ್ಲಿ ಹೆಚ್ಚು ಸುರಕ್ಷತೆ ಇರಬೇಕು. ಎಲ್ಲಿ ಲೋಪವಾಗಿದೆ ಎಂದು ಅಧ್ಯಯನ ಮಾಡಿ ಮುಂದೆ ಇಂತಹ ದುರ್ಘಟನೆಗಳು ಆಗದಂತೆ ಅಗತ್ಯ ಕ್ರಮ ಕೈಗೊಳ್ಳಬೇಕಿದೆ ಎಂದು ಆಗ್ರಹಿಸಿದರು.
ಪಹಲ್ಗಾಮ್‍ನಲ್ಲಿ ನಡೆದಿರುವ ಉಗ್ರರ ಕೃತ್ಯ ಖಂಡನೀಯ. ಈ ಘಟನೆಯಿಂದ ಇಡೀ ದೇಶವೇ ಉದ್ವಿಗ್ನಗೊಂಡಿದ್ದು, ಕೇಂದ್ರ ಸರಕಾರ ಇದನ್ನ ಗಂಭೀರವಾಗಿ ಪರಿಗಣಿಸಿದೆ. ಭವಿಷ್ಯದಲ್ಲಿ ಇಂತಹ ಕೃತ್ಯಗಳಿಗೆ ಕೈಹಾಕದಂತೆ ಭಯೋತ್ಪಾದಕರಿಗೆ ಸೂಕ್ತ ಪಾಠ ಕಲಿಸುವ ವಿಶ್ವಾಸವಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ತಿಳಿಸಿದರು.
ಉದ್ಯಾನವನಕ್ಕೆ ಭರತ್ ಭೂಷಣ್ ಹೆಸರು: ಜಮ್ಮು-ಕಾಶ್ಮೀರದ ಪಹಲ್ಗಾಮ್‍ನಲ್ಲಿ ನಡೆದ ಉಗ್ರರ ದಾಳಿಯಲ್ಲಿ ಮೃತಪಟ್ಟ ಬೆಂಗಳೂರಿನ ಭರತ್ ಭೂಷಣ್ ಹೆಸರನ್ನು ಇಲ್ಲಿನ ಜೆ.ಪಿ. ಪಾರ್ಕ್ ವಾರ್ಡ್‍ನಲ್ಲಿರುವ ಉದ್ಯಾನವನಕ್ಕೆ ನಾಮಕರಣ ಮಾಡಲಾಗಿದೆ.