ಲಾಜಿಸ್ಟಿಕ್ಸ್ ವೆಚ್ಚದಲ್ಲಿ ಮಿತವ್ಯಯ ಅತ್ಯಗತ್ಯ : ಎಂ.ಬಿ.ಪಾಟೀಲ್

ಮುಂಬೈ : ಉಕ್ಕು ವಲಯದಲ್ಲಿನ ಲಾಜಿಸ್ಟಿಕ್ಸ್ ವೆಚ್ಚವನ್ನು ಈಗಿರುವ ಶೇ.14ರಿಂದ ಸ್ಪರ್ಧಾತ್ಮಕ ದರವಾದ ಶೇ.8ಕ್ಕೆ ಇಳಿಸುವ ಅಗತ್ಯವಿದೆ. ಕರ್ನಾಟಕ ಸರಕಾರವು ಕ್ಲಸ್ಟರ್ ಆಧರಿತ ಕೈಗಾರಿಕಾ ಬೆಳವಣಿಗೆ, ವಿಶ್ವದರ್ಜೆಯ ಲಾಜಿಸ್ಟಿಕ್ಸ್ ಮೂಲಸೌಕರ್ಯ ಮತ್ತು ಸಮಗ್ರ ಕೈಗಾರಿಕಾ ಕಾರಿಡಾರುಗಳ ಅಭಿವೃದ್ಧಿಗೆ ಹಲವು ರಚನಾತ್ಮಕ ಉಪಕ್ರಮಗಳನ್ನು ತೆಗೆದುಕೊಂಡಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಹೇಳಿದ್ದಾರೆ.
ಶುಕ್ರವಾರ ಮುಂಬೈನಲ್ಲಿ ನಡೆಯುತ್ತಿರುವ 6ನೆ ವರ್ಷದ `ಇಂಡಿಯಾ ಸ್ಟೀಲ್-25’ ಅಂತರ ರಾಷ್ಟ್ರೀಯ ಪ್ರದರ್ಶನ ಮತ್ತು ವಾಣಿಜ್ಯ ಸಮಾವೇಶದ ಭಾಗವಾಗಿ ಏರ್ಪಡಿಸಿದ್ದ `ಕರ್ನಾಟಕದಲ್ಲಿನ ಉಕ್ಕು ವಲಯದ ಭವಿಷ್ಯ’ ಕುರಿತ ದುಂಡು ಮೇಜಿನ ಚರ್ಚೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಕರ್ನಾಟಕ ರಾಜ್ಯದ ಬಳ್ಳಾರಿ, ಚಿತ್ರದುರ್ಗ ಮತ್ತು ಸಂಡೂರು ಪ್ರದೇಶಗಳಲ್ಲಿನ ಕಬ್ಬಿಣದ ಅದಿರಿನ ನಿಕ್ಷೇಪಗಳು ಭಾರತದ ಮೆಟಲರ್ಜಿ ಆಧರಿತ ಆರ್ಥಿಕತೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿವೆ. ದೇಶದ ಉಕ್ಕು ಉತ್ಪಾದನೆಯಲ್ಲಿ ಕರ್ನಾಟಕದ ಪಾಲು ಶೇ.15ರಷ್ಟಿದೆ. ಜತೆಗೆ ಉಕ್ಕು ಉದ್ಯಮದ ದೈತ್ಯ ಕಂಪನಿಗಳಾಸ ಜಿಂದಾಲ್ ಸ್ಟೀಲ್ಸ್, ಕಲ್ಯಾಣಿ ಸ್ಟೀಲ್ಸ್, ಕಿರ್ಲೋಸ್ಕರ್ ಫರೋಸ್ ಮತ್ತು ಬಲ್ದೋಟ ಉದ್ಯಮ ಸಮೂಹಗಳು ರಾಜ್ಯದಲ್ಲಿ ನೆಲೆಯೂರಿವೆ ಎಂದು ಅವರು ತಿಳಿಸಿದರು.
ಉದ್ಯಮ ಬೆಳವಣಿಗೆಗೆ ಮೂಲಸೌಕರ್ಯ, ಬಂದರುಗಳು, ಕೈಗಾರಿಕಾ ಕ್ಲಸ್ಟರುಗಳು, ಟ್ರಕ್ ಟರ್ಮಿನಲ್‍ಗಳು ಮತ್ತು ನಾನಾ ಬಗೆಯ ಸಾರಿಗೆ ವ್ಯವಸ್ಥೆಯ ಸಂಪರ್ಕ ಜಾಲಗಳು ಅತ್ಯಗತ್ಯವಾಗಿ ಬೇಕಾಗುತ್ತವೆ. ಈ ನಿಟ್ಟಿನಲ್ಲಿ ಕೈಗಾರಿಕಾ ಮೂಲಸೌಕರ್ಯದ ಅಭಿವೃದ್ಧಿಯ ಸಲುವಾಗಿ ಕೇಂದ್ರ ಸರಕಾರವು ಈಗ ಕೊಡುತ್ತಿರುವುದಕ್ಕಿಂತಲೂ ಹೆಚ್ಚಿನ ಸಹಕಾರವನ್ನು ನಮಗೆ ಕೊಡಬೇಕು ಎಂದು ಅವರು ಮನವಿ ಮಾಡಿದರು.
ಉದ್ದೇಶಿತ ಹುಬ್ಬಳ್ಳಿ-ಅಂಕೋಲಾ ರೈಲ್ವೆ ಮಾರ್ಗದ ಕನಸು ನನಸಾದರೆ, ಬಂದರುಗಳಿಂದ ಒಳನಾಡಿಗೆ ಒಳ್ಳೆಯ ಸಂಪರ್ಕ ಸಾಧ್ಯವಾಗುತ್ತದೆ. ಇನ್ನೊಂದೆಡೆಯಲ್ಲಿ, ಹಲವು ರಸ್ತೆಗಳನ್ನು ರಾಷ್ಟ್ರೀಯ ಹೆದ್ದಾರಿಗಳನ್ನಾಗಿ ಮೇಲ್ದರ್ಜೆಗೆ ಏರಿಸಲಾಗುತ್ತಿದೆ. ಬೆಂಗಳೂರಿನಲ್ಲಿ ಅಸ್ತಿತ್ವಕ್ಕೆ ಬರುತ್ತಿರುವ ಮಲ್ಟಿ-ಮೋಡಲ್ ಲಾಜಿಸ್ಟಿಕ್ಸ್ ಪಾರ್ಕಿನಿಂದ ಬೃಹತ್ ಪ್ರಮಾಣದ ಸರಕು ಸಾಗಣೆಗೆ ಅನುಕೂಲವಾಗಲಿದೆ. ಅಲ್ಲದೆ ನವ ಮಂಗಳೂರು ಬಂದರಿನಿಂದ ರಫ್ತಾಗುತ್ತಿರುವ ಉಕ್ಕು ಸ್ಥಳೀಯ ಮತ್ತು ಜಾಗತಿಕ ಪೂರೈಕೆ ಸರಪಳಿಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ ಎಂದು ಅವರು ವಿವರಿಸಿದರು.
ಚೆನ್ನೈ-ಬೆಂಗಳೂರು ಕೈಗಾರಿಕಾ ಕಾರಿಡಾರ್ ಮತ್ತು ಬೆಂಗಳೂರು-ಮುಂಬೈ ಆರ್ಥಿಕ ಕಾರಿಡಾರ್ ಯೋಜನೆಗಳು ದಕ್ಷಿಣ ಮತ್ತು ಪಶ್ಚಿಮ ಭಾರತಗಳನ್ನು ಮತ್ತಷ್ಟು ಹತ್ತಿರಕ್ಕೆ ತರಲಿವೆ. ಇವು ಈ ಭಾಗಗಳಲ್ಲಿರುವ ಕೈಗಾರಿಕಾ ನೆಲೆಗಳನ್ನು ಬೆಸೆಯಲಿದ್ದು, ಸರಕು ಸಾಗಣೆಗೆ ಈಗ ಬೇಕಾಗುತ್ತಿರುವ ಸಮಯವನ್ನು ಸಾಕಷ್ಟು ಕಡಿಮೆ ಮಾಡಲಿವೆ. ಕರ್ನಾಟಕ ಸರಕಾರವು ಡಿಜಿಟಲ್ ಸೌಲಭ್ಯ ಮತ್ತು ಸುಸ್ಥಿರ ಮಾದರಿಯ ಲಾಜಿಸ್ಟಿಕ್ಸ್ ಕಾರ್ಯ ಪರಿಸರವನ್ನು ಸೃಷ್ಟಿಸಲು ಬದ್ಧವಾಗಿದೆ. ಇದರ ಭಾಗವಾಗಿ ಸರಕು ಸಾಗಣೆ ಕಾರಿಡಾರ್, ಬಂದರುಗಳ ಆಧುನೀಕರಣ, ಒಳನಾಡು ಜಲಸಾರಿಗೆ ಅಭಿವೃದ್ಧಿಯನ್ನು ಮಾಡಲಾಗುತ್ತಿದೆ ಎಂದು ಪಾಟೀಲ ನುಡಿದಿದರು.