ಜಾನುವಾರುಗಳಿಗೆ ಬೇಸಿಗೆಯಲ್ಲಿ ಮೇವಿನ ಕೊರತೆ ನೀಗಿಸಲು ಕ್ರಮ : ಸಚಿವ ಕೃಷ್ಣಭೈರೇಗೌಡ

Update: 2025-03-19 22:56 IST
Photo of Krishna Bhairegowda

ಕೃಷ್ಣಭೈರೇಗೌಡ

  • whatsapp icon

ಬೆಂಗಳೂರು : ಪಶುಪಾಲಕ ಜಾನುವಾರುಗಳಿಗೆ ಬೇಸಿಗೆಯಲ್ಲಿ ಉಂಟಾಗುವ ಮೇವಿನ ಕೊರತೆಯನ್ನು ನೀಗಿಸಲು ಸರಕಾರ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡಿದೆ ಎಂದು ಕಂದಾಯ ಸಚಿವ ಕೃಷ್ಣಭೈರೇಗೌಡ ತಿಳಿಸಿದ್ದಾರೆ.

ಬುಧವಾರ ವಿಧಾನ ಪರಿಷತ್ತಿನ ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿ ಸದಸ್ಯ ಶಾಂತರಾಮ್ ಬುಡ್ನ ಸಿದ್ದಿ ಅವರ ಪ್ರಶ್ನೆಗೆ ಪಶುಸಂಗೋಪನೆ ಸಚಿವರ ಪರವಾಗಿ ಉತ್ತರಿಸಿದ ಅವರು, ಬೇಸಿಗೆಯಲ್ಲಿ ಪಶುಪಾಲಕ ಜಾನುವಾರುಗಳಿಗೆ ಉಂಟಾಗುವ ಮೇವಿನ ಕೊರತೆಯನ್ನು ನೀಗಿಸಲು ಮುನ್ನೆಚ್ಚರಿಕೆ ಕ್ರಮಗಳ ತೆಗೆದುಕೊಂಡಿದ್ದು, ಸಾಪ್ತಾಹಿಕ ಮೇವಿನ ವರದಿಯನ್ವಯ ಯಾವುದೇ ತಾಲ್ಲೂಕಿನಲ್ಲಿ ಮೇವಿನ ಲಭ್ಯತೆಯು 4 ವಾರಗಳಿಗಿಂತ ಕಡಿಮೆ ಆದಲ್ಲಿ ಮೇವಿನ ಬ್ಯಾಂಕ್ ಅನ್ನು ತೆರೆದು ರೈತರಿಗೆ ರಿಯಾಯಿತಿ ದರದಲ್ಲಿ ಒಣ ಮೇವನ್ನು ಪೂರೈಸಲು ಕ್ರಮವಹಿಸಲಾಗುವುದು ಎಂದರು.

ಸಾಪ್ತಾಹಿಕ ಮೇವಿನ ವರದಿಯನ್ವಯ ಯಾವುದೇ ತಾಲ್ಲೂಕಿನಲ್ಲಿ ಮೇವಿನ ಲಭ್ಯತೆಯು 2 ವಾರಗಳಿಗಿಂತ ಕಡಿಮೆಯಾದಲ್ಲಿ ಹೋಬಳಿ ಮಟ್ಟದಲ್ಲಿ ಜಾನುವಾರು ಶಿಬಿರವನ್ನು ತೆರೆದು ಜಾನುವಾರುಗಳಿಗೆ ಮೇವು, ನೀರು, ನೆರಳನ್ನು ಒದಗಿಸಿ ಸಂರಕ್ಷಿಸಲಾಗುವುದು ಎಂದು ಕೃಷ್ಣಭೈರೇಗೌಡ ಹೇಳಿದರು.

ಜಾನುವಾರುಗಳಿಗೆ ಮೇವಿನ ಸಮಸ್ಯೆ ಉಂಟಾಗದಂತೆ ಮುಂಜಾಗ್ರತೆಯಾಗಿ ಮೇವು ಉತ್ಪಾದನೆಯನ್ನು ಹೆಚ್ಚಿಸಲು ನೀರಾವರಿ ಸೌಲಭ್ಯವಿರುವ ರೈತರಿಗೆ ಕಡಿಮೆ ಅವಧಿಯಲ್ಲಿ ಮೇವು ಉತ್ಪಾದಿಸುವ ಮೇವಿನ ಬೀಜದ 4,52,463 ಮಿನಿ ಕಿಟ್‍ಗಳನ್ನು ನೀಡಲಾಗಿದೆ. ಇಲಾಖೆಯ ಕ್ಷೇತ್ರಗಳಲ್ಲಿ ಮೇವಿನ ಬೇರುಗಳನ್ನು ಉತ್ಪಾದಿಸಿ ಆಸಕ್ತ ರೈತರಿಗೆ ವಿತರಿಸಲಾಗುವುದು ಎಂದು ಕೃಷ್ಣಭೈರೇಗೌಡ ತಿಳಿಸಿದರು.

ಕಡಿಮೆ ದರ್ಜೆಯ ಮೇವಿಗೆ ಯೂರಿಯಾ ದ್ರಾವಣವನ್ನು ಸಿಂಪಡಿಸಿ ಒಣ ಮೇವು ಪೌಷ್ಠಿಕರಣಗೊಳಿಸುವ ಕುರಿತು ಹಾಗೂ ಹಸಿರು ಮೇವಿನಿಂದ ರಸಮೇವು ತಯಾರಿಸಿ, ಸಂರಕ್ಷಿಸಿ, ಬೇಸಿಗೆಯಲ್ಲಿ ಬಳಸಲು ರೈತರಿಗೆ ತರಬೇತಿ ಮತ್ತು ಪ್ರಾತ್ಯಕ್ಷಿಕೆ ನೀಡಲಾಗುತ್ತಿದೆ. ರೈತರು ಬೆಳೆಯುವ ಮೇವು ಪೋಲಾಗದಂತೆ ಸದ್ಬಳಕೆ ಮಾಡಿಕೊಳ್ಳಲು ರೈತರಿಗೆ ಪ್ರಸಕ್ತ ಸಾಲಿನಲ್ಲಿ ಒಟ್ಟಾರೆಯಾಗಿ 1,428 ಮೇವು ಕತ್ತರಿಸುವ ಯಂತ್ರವನ್ನು ವಿತರಿಸಲಾಗಿದೆ. ಅಲ್ಲದೆ, ತೋಟಗಾರಿಕೆ ಬೆಳೆಗಳ ಮಧ್ಯ ಖಾಲಿ ಇರುವ ಪ್ರದೇಶಗಳಲ್ಲಿ ಮೇವು ಬೆಳೆಯುವ ಕಾರ್ಯಕ್ರಮವನ್ನು ಅಳವಡಿಸಿಕೊಳ್ಳಲು ರೈತರಿಗೆ ಸೂಕ್ತ ಮಾರ್ಗದರ್ಶನ ನೀಡಲಾಗುತ್ತಿದೆ ಎಂದು ಕೃಷ್ಣಭೈರೇಗೌಡ ಹೇಳಿದರು. 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News