ಸ್ಟೇಜ್ ಆಧಾರದಲ್ಲಿ ಮೆಟ್ರೋ ಪ್ರಯಾಣ ದರ ಇಳಿಕೆ

Update: 2025-02-13 20:31 IST
ಸ್ಟೇಜ್ ಆಧಾರದಲ್ಲಿ ಮೆಟ್ರೋ ಪ್ರಯಾಣ ದರ ಇಳಿಕೆ

ಸಾಂದರ್ಭಿಕ ಚಿತ್ರ 

  • whatsapp icon

ಬೆಂಗಳೂರು: ನಮ್ಮ ಮೆಟ್ರೋ ಪ್ರಯಾಣ ದರವನ್ನು ಸ್ಟೇಜ್ ಆಧಾರದಲ್ಲಿ ಇಳಿಕೆ ಮಾಡಲಾಗಿದ್ದು, ಪರಿಷ್ಕೃತ ದರ ಶುಕ್ರವಾರದಿಂದಲೇ(ಫೆ.14) ಜಾರಿಗೆ ಬರಲಿದೆ ಎಂದು ಬಿಎಂಆರ್ ಸಿಎಲ್‍ನ ವ್ಯವಸ್ಥಾಪಕ ನಿರ್ದೇಶಕ ಮಹೇಶ್ವರ್ ರಾವ್ ತಿಳಿಸಿದ್ದಾರೆ.

ಗುರುವಾರ ನಗರದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಶೇ.90ರಿಂದ ಶೇ.100ರ ವರೆಗೆ ಹೆಚ್ಚಳವಾಗಿರುವ ನಿಲ್ದಾಣಗಳ ಮಧ್ಯೆ ಮೆಟ್ರೋ ದರವನ್ನು ಇಳಿಕೆ ಮಾಡಲಾಗುವುದು. ಶೇ.60ರಷ್ಟು ದರ ಹೆಚ್ಚಳವಾಗಿರುವಲ್ಲಿ ವಿವಿಧ ಹಂತಗಳ ದರವನ್ನು ಒಗ್ಗೂಡಿಸುತ್ತೇವೆ ಎಂದು ಹೇಳಿದರು.

ಮೆಟ್ರೋ ಪ್ರಯಾಣ ದರ ಏರಿಕೆಯಲ್ಲಿ ಯಾವುದೇ ಬದಲಾವಣೆ ಇಲ್ಲ. ಒಟ್ಟು ದರ ಹೆಚ್ಚಳದಲ್ಲಿ ಇಳಿಕೆಯೂ ಇರುವುದಿಲ್ಲ. ಕನಿಷ್ಠ ದರ 10ರೂ. ಮತ್ತು ಗರಿಷ್ಠ ದರ 90ರೂ. ನಿಗದಿ ಮಾಡಲಾಗಿದ್ದು, ಅದರಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ಅವರು ತಿಳಿಸಿದರು.

ಮೆಟ್ರೋ ಪ್ರಯಾಣ ದರ ಹೆಚ್ಚಳ ಮಾಡುವುದಕ್ಕೆ ಸಮಿತಿಯನ್ನು ರಚಿಸಲಾಗಿತ್ತು. ಸಮಿತಿಯ ಅಧ್ಯಯನ ವರದಿಯಲ್ಲಿನ ಶಿಫಾರಸ್ಸಿನ ಮೇರೆಗೆ ದರ ಹೆಚ್ಚಳ ಮಾಡಲಾಗಿದೆ. ದರ ಏರಿಕೆಗೆ ಪ್ರಯಾಣಿಕರ ವಿರೋಧ ಹಿನ್ನೆಲೆಯಲ್ಲಿ ರಾಜ್ಯ ಸರಕಾರದ ಸೂಚನೆ ಮೇರೆಗೆ ಮೂರು ದಿನಗಳಿಂದ ಸಭೆ ಮಾಡಲಾಗಿದೆ. ಯಾವ ನಿಲ್ದಾಣದಿಂದ ಯಾವ ನಿಲ್ದಾಣಕ್ಕೆ ದುಪ್ಪಟ್ಟು ದರ ಏರಿಕೆಯಾಗಿದೆಯೋ ಅಲ್ಲಿ ಕಡಿಮೆ ಮಾಡಲು ಪ್ರಯತ್ನಿಸಲಾಗುವುದು ಎಂದು ಅವರು ತಿಳಿಸಿದರು.

ನಮ್ಮ ಮೆಟ್ರೋ ನಿರ್ವಹಣೆಯ ವೆಚ್ಚ, ಸಾಲ ಹಾಗೂ ಅದರ ಬಡ್ಡಿ ಮುಂತಾದ ಅಂಶಗಳನ್ನು ಗಮನದಲ್ಲಿಟ್ಟುಕೊಂಡೇ ಟಿಕೆಟ್ ಬೆಲೆ ಏರಿಕೆ ಮಾಡಲಾಗಿದೆ. ನಮ್ಮ ಮೆಟ್ರೋ ನಿರ್ವಹಣಾ ವೆಚ್ಚ ಹೆಚ್ಚುತ್ತಿದೆ. ಸುಮಾರು 10 ಸಾವಿರ ಕೋಟಿ ರೂ.ಗಳಿಗೂ ಅಧಿಕ ಸಾಲ ಮತ್ತು ಬಡ್ಡಿಯನ್ನು ಮುಂದಿನ ಆರೇಳು ವರ್ಷಗಳಲ್ಲಿ ತೀರಿಸಬೇಕಿದೆ. ಹೀಗಾಗಿ ದರ ಹೆಚ್ಚಳ ಮಾಡಲಾಗಿದೆ ಎಂದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News