ಸಿದ್ದರಾಮಯ್ಯ ಹಣ-ಆಸ್ತಿ ಮಾಡಲು ರಾಜಕೀಯಕ್ಕೆ ಬಂದವರಾ? : ಸಚಿವ ಕೃಷ್ಣ ಬೈರೇಗೌಡ

Update: 2024-11-29 16:35 GMT

ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಹಣ, ಆಸ್ತಿ ಮಾಡಬೇಕು ಎಂದು ರಾಜಕೀಯಕ್ಕೆ ಬಂದವರಾ? ಅವರು ಆಸ್ತಿ ಮಾಡಬೇಕಿದ್ದರೆ ಕೇವಲ ನಿವೇಶನಗಳನ್ನು ಪಡೆದು ಆಸ್ತಿ ಮಾಡಬೇಕಿತ್ತಾ? ಜನಸೇವಕರನ್ನು, ಭ್ರಷ್ಟರನ್ನು ಒಂದೇ ತಕ್ಕಡಿಯಲ್ಲಿ ತೂಗಿದರೆ ಹೇಗೇ? ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಪ್ರಶ್ನಿಸಿದರು.

ಮಾಜಿ ಸಿಎಂ ಯಡಿಯೂರಪ್ಪ ವಿರುದ್ಧ ಸಾಮಾಜಿಕ ಕಾರ್ಯಕರ್ತ ಟಿ.ಜೆ.ಅಬ್ರಹಾಂ ನೀಡಿದ್ಧ ದೂರಿನ ಆಧಾರದಲ್ಲಿ ತನಿಖೆಗೆ ಅನುಮತಿ ಕೋರಿ ರಾಜ್ಯಪಾಲರಿಗೆ ಶಿಫಾರಸ್ಸು ಮಾಡಲು ಸಚಿವ ಸಂಪುಟ ತೆಗೆದುಕೊಂಡಿರುವ ನಿರ್ಣಯದ ಕುರಿತು ಶುಕ್ರವಾರ ವಿಕಾಸಸೌಧದಲ್ಲಿ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಅವರು ಪ್ರತಿಕ್ರಿಯಿಸಿದರು.

ಮುಡಾ ಪ್ರಕರಣದಲ್ಲಿ ಕಾನೂನು ಕ್ರಮಕ್ಕೆ ರಾಜ್ಯಪಾಲರು ಅನುಮತಿ ನೀಡಿದಾಗ ಯಾವುದೇ ಪ್ರಾಥಮಿಕ ತನಿಖೆ ನಡೆದಿರಲಿಲ್ಲ. ಆದರೆ, ಯಡಿಯೂರಪ್ಪ ಪ್ರಕರಣದಲ್ಲಿ ಅಂತಿಮ ತನಿಖೆಗೆ ಶಿಫಾರಸ್ಸು ಇದೆ. ದೂರುದಾರ ಅಬ್ರಹಾಂ ಇದ್ದರೂ, ಮುಡಾ ಹಾಗೂ ಯಡಿಯೂರಪ್ಪ ಪ್ರಕರಣವನ್ನು ಒಂದೇ ರೀತಿ ನೋಡಬಾರದು ಎಂದು ಅವರು ಹೇಳಿದರು.

1985ರಿಂದಲೂ ಸಿದ್ದರಾಮಯ್ಯ ಮಂತ್ರಿಯಾಗಿದ್ದಾರೆ. ಅವರು ದುಡ್ಡು ಮಾಡಲು ರಾಜಕೀಯಕ್ಕೆ ಬಂದವರಲ್ಲ, ಜನರ ಸೇವೆ ಮಾಡಲು ಬಂದವರು. ಸಿದ್ದರಾಮಯ್ಯ ವಿರುದ್ಧ ರಾಜಕೀಯ ಕಾರಣಗಳಿಗೆ ಆರೋಪಗಳನ್ನು ಮಾಡುತ್ತಿದ್ದಾರೆ. ಆದರೆ, ಅವರ ಪತ್ನಿ ಎಂದೂ ಸಾರ್ವಜನಿಕವಾಗಿ ಕಾಣಿಸಿಕೊಂಡವರಲ್ಲ. ಅಂತಹ ಮಹಿಳೆಯನ್ನು ರಾಜಕೀಯ ಕಾರಣಗಳಿಗಾಗಿ ಬೀದಿಗೆ ತಂದು ನಿಲ್ಲಿಸಿದ್ದು ಎಷ್ಟರ ಮಟ್ಟಿಗೆ ಸರಿ ಎಂದು ಕೃಷ್ಣ ಬೈರೇಗೌಡ ಪ್ರಶ್ನಿಸಿದರು.

ಪ್ರತಿಪಕ್ಷಗಳ ಎಲ್ಲ ಸುಳ್ಳು ಆರೋಪಗಳಿಗೆ ರಾಜ್ಯದ ಜನತೆ ಇತ್ತೀಚೆಗೆ ನಡೆದ ಉಪ ಚುನಾವಣೆಯಲ್ಲಿ ತಕ್ಕ ಉತ್ತರ ನೀಡಿದ್ದಾರೆ. ಮುಡಾ ಪ್ರಕರಣದ ತನಿಖೆಯೂ ನಡೆಯುತ್ತಿದ್ದು, ವಾಸ್ತವಾಂಶ ಹೊರ ಬರಲಿದೆ ಎಂದು ಕೃಷ್ಣ ಬೈರೇಗೌಡ ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News