ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳ ಕಾರ್ಯಕ್ಷಮತೆ ಪರಿಶೀಲಿಸಿದ ಸಚಿವ ನಿರ್ಮಲಾ ಸೀತಾರಾಮನ್

Update: 2024-11-09 17:17 GMT

ನಿರ್ಮಲಾ ಸೀತಾರಾಮನ್

ಬೆಂಗಳೂರು : ಕರ್ನಾಟಕ, ಆಂಧ್ರಪ್ರದೇಶ, ಕೇರಳ, ತಮಿಳುನಾಡು, ತೆಲಂಗಾಣ ಮತ್ತು ಕೇಂದ್ರಾಡಳಿತ ಪ್ರದೇಶ ಪುದುಚೇರಿಯನ್ನು ಒಳಗೊಂಡಿರುವ ದಕ್ಷಿಣ ವಲಯದ 10 ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳ ಕಾರ್ಯಕ್ಷಮತೆಯನ್ನು ಪರಿಶೀಲಿಸಲು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಶನಿವಾರ ಬೆಂಗಳೂರಿನಲ್ಲಿ ಸಭೆ ನಡೆಸಿದರು.

ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವ ಪಂಕಜ್ ಚೌಧರಿ, ಹಣಕಾಸು ಸೇವೆಗಳ ಇಲಾಖೆ ಕಾರ್ಯದರ್ಶಿ ಎಂ.ನಾಗರಾಜು, ಈ.ಡಿ, ಆರ್ಬಿಐ ಅಧಿಕಾರಿಗಳು, ಪ್ರಾದೇಶಿಕ ಗ್ರಾಮೀಣ ಬ್ಯಾಂಕು(ಆರ್.ಆರ್.ಬಿ) ಗಳು ಮತ್ತು ಪ್ರಾಯೋಜಕ ಬ್ಯಾಂಕುಗಳ ಅಧ್ಯಕ್ಷರು, ಹಣಕಾಸು ಸೇವೆಗಳ ಇಲಾಖೆ ಹೆಚ್ಚುವರಿ ಕಾರ್ಯದರ್ಶಿ, ನಬಾರ್ಡ್ ಮತ್ತು ಎಸ್ಐಡಿಬಿಐ ಪ್ರತಿನಿಧಿಗಳು, ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶದ ಇತರ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

ಸಭೆಯಲ್ಲಿ ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳ ವ್ಯವಹಾರದ ಕಾರ್ಯಕ್ಷಮತೆ, ಡಿಜಿಟಲ್ ತಂತ್ರಜ್ಞಾನ ಸೇವೆಗಳನ್ನು ಮೇಲ್ದರ್ಜೆಗೇರಿಸುವುದು, ಕೃಷಿ ಮತ್ತು ಸೂಕ್ಷ್ಮ ಹಾಗೂ ಸಣ್ಣ ಉದ್ಯಮಕ್ಕೆ ಸಂಬಂಧಿಸಿದ ಚಟುವಟಿಕೆಗಳಲ್ಲಿ ವ್ಯವಹಾರ ಬೆಳವಣಿಗೆಯನ್ನು ಉತ್ತೇಜಿಸುವ ಬಗ್ಗೆ ಚರ್ಚೆಗಳನ್ನು ನಡೆಸಲಾಯಿತು.

ಗ್ರಾಮೀಣ ಆರ್ಥಿಕತೆಯನ್ನು ಬೆಂಬಲಿಸುವಲ್ಲಿ ಆರ್.ಆರ್.ಬಿ ಗಳ ಪ್ರಮುಖ ಪಾತ್ರವನ್ನು ಗಮನಿಸಿದ ನಿರ್ಮಲಾ ಸೀತಾರಾಮನ್, ತಮ್ಮ ಪ್ರಾಯೋಜಕ ಬ್ಯಾಂಕುಗಳ ಸಕ್ರಿಯ ಬೆಂಬಲದೊಂದಿಗೆ ಭಾರತ ಸರಕಾರದ ವಿವಿಧ ಪ್ರಮುಖ ಯೋಜನೆಗಳಾದ ಮುದ್ರಾ, ಪ್ರಧಾನಮಂತ್ರಿ ವಿಶ್ವಕರ್ಮ ಇತ್ಯಾದಿಗಳ ಅಡಿಯಲ್ಲಿ ಸಾಲ ವಿತರಣೆಯನ್ನು ಹೆಚ್ಚಿಸಲು ಆರ್.ಆರ್.ಬಿ ಗಳನ್ನು ಒತ್ತಾಯಿಸಿದರು.

ಹೈನುಗಾರಿಕೆ, ಪಶುಸಂಗೋಪನೆ, ಮೀನುಗಾರಿಕೆ ಮುಂತಾದವುಗಳ ಮೇಲೆ ವಿಶೇಷ ಗಮನಹರಿಸಿ, ತಳಮಟ್ಟದಲ್ಲಿ ಕೃಷಿ ಸಾಲ ವಿತರಣೆಯಲ್ಲಿ ತಮ್ಮ ಪಾಲನ್ನು ಹೆಚ್ಚಿಸಲು ಆರ್.ಆರ್.ಬಿ ಗಳಿಗೆ ನಿರ್ದೇಶನ ನೀಡಿದ ಅವರು, ಕೃಷಿ ಸಂಬಂಧಿತ ಚಟುವಟಿಕೆಗಳ ಸಂಪೂರ್ಣ ಸಾಮಥ್ರ್ಯವನ್ನು ಬಳಸಿಕೊಳ್ಳಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ತಿಳಿಸಿದರು.

ವಿಶೇಷವಾಗಿ ಕೇರಳದ ಮೀನುಗಾರಿಕಾ ವಲಯ ಮತ್ತು ತೆಲಂಗಾಣದ ಡೈರಿ ವಲಯಕ್ಕೆ ಸಾಲ ವಿತರಣೆಯನ್ನು ಹೆಚ್ಚಿಸಲು ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳು ಮತ್ತು ಪ್ರಾಯೋಜಕ ಬ್ಯಾಂಕುಗಳು ಆಯಾ ರಾಜ್ಯ ಸರಕಾರದ ಇಲಾಖೆಗಳೊಂದಿಗೆ ನಿಕಟವಾಗಿ ಕೆಲಸ ಮಾಡುವಂತೆ ನಿರ್ಮಲಾ ಸೀತಾರಾಮನ್ ನಿರ್ದೇಶನ ನೀಡಿದರು.

2024ನೇ ಹಣಕಾಸು ವರ್ಷದ ಅವಧಿಯಲ್ಲಿ ದಕ್ಷಿಣ ವಲಯದ ಆರ್.ಆರ್.ಬಿ ಗಳು 3,816 ಕೋಟಿ ರೂ.ಗಳ ಏಕೀಕೃತ ಲಾಭವನ್ನು ಗಳಿಸಿವೆ, ಇದು ಎಲ್ಲ ಆರ್.ಆರ್.ಬಿ ಗಳ ಒಟ್ಟು ನಿವ್ವಳ ಏಕೀಕೃತ ಲಾಭದ ಶೇ.50 ಕ್ಕಿಂತ ಹೆಚ್ಚು ಎಂದು ಶ್ಲಾಘಿಸಿದ ಅವರು, ಉಳಿತಾಯ ಖಾತೆ ಠೇವಣಿಗಳನ್ನು ಹೆಚ್ಚಿಸುವ ಪ್ರಾಮುಖ್ಯತೆ, ಸುಸ್ಥಿರ ಸಾಲದ ಬೆಳವಣಿಗೆಯ ವೇಗವನ್ನು ಇನ್ನಷ್ಟು ವೇಗಗೊಳಿಸಲು ಸಿಎಎಸ್ಎ ಠೇವಣಿಗಳನ್ನು ಸಜ್ಜುಗೊಳಿಸಲು ದಕ್ಷಿಣ ವಲಯದಲ್ಲಿ ಆರ್.ಆರ್.ಬಿ ಗಳನ್ನು ಬಲಪಡಿಸುವ ಅಗತ್ಯವನ್ನು ಹೇಳಿದರು.

ಪ್ರಧಾನಮಂತ್ರಿ ಜನ್ ಧನ್ ಯೋಜನೆ, ಪ್ರಧಾನಮಂತ್ರಿ ಜೀವನ ಜ್ಯೋತಿ ಬಿಮಾ ಯೋಜನೆ, ಪ್ರಧಾನಮಂತ್ರಿ ಸುರಕ್ಷಾ ಬಿಮಾ ಯೋಜನೆ, ಅಟಲ್ ಪಿಂಚಣಿ ಯೋಜನೆ ಮುಂತಾದ ಹಣಕಾಸು ಸೇರ್ಪಡೆ ಯೋಜನೆಗಳ ಅಡಿಯಲ್ಲಿ ಸಂಪೂರ್ಣತೆಯ ಕಡೆಗೆ ಪ್ರಯತ್ನಗಳನ್ನು ಮುಂದುವರಿಸುವಂತೆ ಮತ್ತು ಆಯಾ ಗುರಿಗಳನ್ನು ಸಾಧಿಸುವಂತೆ ಅವರು ಹೇಳಿದರು.

ಪ್ರಧಾನಮಂತ್ರಿ ಜನ್ ಧನ್ ಯೋಜನೆ ಅಡಿಯಲ್ಲಿ ನಿಷ್ಕ್ರಿಯ ಖಾತೆಗಳನ್ನು ಕಾರ್ಯಗತಗೊಳಿಸಲು ವಿಶೇಷ ಅಭಿಯಾನವನ್ನು ಪ್ರಾರಂಭಿಸುವಂತೆ ಬ್ಯಾಂಕುಗಳಿಗೆ ಸೂಚಿಸಿದ ಅವರು, ಎಂಎಸ್ಎಂ ಇ ಗಳಿಗೆ ಸಾಲ ಬೆಂಬಲವನ್ನು ಬಲಪಡಿಸಲು ಮತ್ತು ಡಿಜಿಟಲ್ ಆವಿಷ್ಕಾರಗಳ ಮೂಲಕ ಗ್ರಾಹಕರ ಸೇರ್ಪಡೆ ಪ್ರಕ್ರಿಯೆಗಳನ್ನು ಸುಗಮಗೊಳಿಸುವ ಕುರಿತು ವಿಶೇಷ ಒತ್ತು ನೀಡುವಂತೆ ತಿಳಿಸಿದರು.

10 ಆರ್.ಆರ್.ಬಿ ಗಳು ಗ್ರಾಹಕ-ಕೇಂದ್ರಿತ ಡಿಜಿಟಲ್ ಸೇವೆಗಳಾದ ಮೈಕ್ರೋ-ಎಟಿಎಂಗಳು, ಕಾಲ್ ಸೆಂಟರ್ ಗಳು, ನೆಟ್ ಬ್ಯಾಂಕಿಂಗ್, ವಿಡಿಯೋ ಕೆವೈಸಿ, ಆರ್ ಟಿ ಜಿ ಎಸ್, ಐಎಂಪಿಎಸ್, ಇತ್ಯಾದಿ ವಿವಿಧ ತಂತ್ರಜ್ಞಾನದ ಉನ್ನತೀಕರಣವನ್ನು ಪೂರ್ಣಗೊಳಿಸಿರುವುದಕ್ಕೆ ಶ್ಲಾಘಿಸಿದ ನಿರ್ಮಲಾ ಸೀತಾರಾಮನ್, ಆಯಾ ಪ್ರಾಯೋಜಕ ಬ್ಯಾಂಕುಗಳ ಸಹಾಯದಿಂದ ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳು ಈ ಸೇವೆಗಳ ಬಳಕೆಯನ್ನು ತಮ್ಮ ಗ್ರಾಹಕರಲ್ಲಿ ಉತ್ತೇಜಿಸುವಂತೆ ಒತ್ತಾಯಿಸಿದರು.

ಅಭ್ಯರ್ಥಿಗಳಲ್ಲಿ ಸ್ಥಳೀಯ ಭಾಷೆಯ ಜ್ಞಾನ ಮತ್ತು ಪ್ರಾವೀಣ್ಯತೆಯನ್ನು ಖಚಿತಪಡಿಸಿಕೊಳ್ಳಲು ಆರ್.ಆರ್.ಬಿ ಗಳ ನೇಮಕಾತಿ ನಿಯಮಗಳನ್ನು ಪರಿಶೀಲಿಸಲು ಮತ್ತು ಅದನ್ನು ಸೂಕ್ತವಾಗಿ ಮಾರ್ಪಡಿಸಲು ಹಣಕಾಸು ಸೇವೆಗಳ ಇಲಾಖೆಗೆ ನಿರ್ದೇಶನ ನೀಡಿದ ನಿರ್ಮಲಾ ಸೀತಾರಾಮನ್, ‘ಒಂದು ರಾಜ್ಯ-ಒಂದು ಆರ್.ಆರ್.ಬಿ' ತತ್ವದ ಮೇಲೆ ಆರ್.ಆರ್.ಬಿ ಗಳ ವಿಲೀನದ ಪ್ರಸ್ತಾಪದ ಕುರಿತು ತಮ್ಮ ಅಭಿಪ್ರಾಯಗಳನ್ನು ನೀಡುವಂತೆ ರಾಜ್ಯ ಸರಕಾರಗಳನ್ನು ಒತ್ತಾಯಿಸಿದರು.

Full View

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News