ಕೃಷಿ ಉತ್ಪನ್ನಗಳ ನೇರ ಮಾರಾಟಕ್ಕೆ ಮುಂದಾದರೆ ರೈತರಿಗೆ ಆರ್ಥಿಕ ಸದೃಢತೆ ಸಾಧ್ಯ : ಸಚಿವ ಪರಮೇಶ್ವರ್

Update: 2025-04-26 22:25 IST
ಕೃಷಿ ಉತ್ಪನ್ನಗಳ ನೇರ ಮಾರಾಟಕ್ಕೆ ಮುಂದಾದರೆ ರೈತರಿಗೆ ಆರ್ಥಿಕ ಸದೃಢತೆ ಸಾಧ್ಯ : ಸಚಿವ ಪರಮೇಶ್ವರ್
  • whatsapp icon

ಬೆಂಗಳೂರು : ರೈತರನ್ನು ಆರ್ಥಿಕವಾಗಿ ಸದೃಡರನ್ನಾಗಿಸಲು ರೈತರೇ ತಾವು ಬೆಳೆದ ಉತ್ಪನ್ನಗಳನ್ನು ನೇರ ಮಾರಾಟಮಾಡಲು ಮುಂದಾಗಬೇಕು ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.

ಶನಿವಾರ ಕೃಷಿ ವಿವಿಯ, ಜಿ.ಕೆ.ವಿ.ಕೆ ಆವರಣದಲ್ಲಿ ಆಯೋಜಿಸಿದ್ದ ರೈತ ಸಂತೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಪ್ರಸ್ತುತ ಪರಿಸ್ಥಿತಿಯಲ್ಲಿ ಹವಾಮಾನ ವೈಪರಿತ್ಯ ನಿರ್ವಹಣೆ ರೈತರಿಗೆ ಅತಿ ದೊಡ್ಡ ಸವಾಲಾಗಿ ಪರಿಣಮಿಸಿದೆ. ಇಂತಹ ಸಂದರ್ಭದಲ್ಲಿ ರೈತರ ಸಂತೆಗಳು ಮಧ್ಯವರ್ತಿಗಳ ಹಾವಳಿ ಇಲ್ಲದೆ ನೇರ ಮಾರುಕಟ್ಟೆಯಿಂದ ಹೆಚ್ಚಿನ ಆದಾಯ ಕಲ್ಪಿಸುವಲ್ಲಿ ಸಹಕಾರಿಯಾಗಲಿದೆ ಎಂದು ತಿಳಿಸಿದರು.

ಮುಂದಿನ ದಿನಗಳಲ್ಲಿ ರೈತರ ನೇರ ಮಾರುಕಟ್ಟೆಗೆ ಉತ್ತಮ ಅವಕಾಶಗಳಿದ್ದು, ಹಿಂದೆ ನಡೆಸುತ್ತಿದ್ದ ವಾರದ ಸಂತೆಗಳನ್ನು ಮಹಿಳಾ ಸ್ವಸಹಾಯ ಸಂಘಗಳ ಮೂಲಕ ವಿಶೇಷವಾಗಿ ಗ್ರಾಮೀಣ ಪ್ರದೇಶದಲ್ಲಿ ಮತ್ತೆ ಜಾರಿಗೆ ತರುವುದು ಅತ್ಯಗತ್ಯವಾಗಿದೆ. ಇದರಿಂದಾಗಿ ಉತ್ತಮ ಲಾಭಾಂಶದ ಜೊತೆಗೆ ಗ್ರಾಹಕರಿಗೆ ತಾಜಾ ಉತ್ಪನ್ನಗಳನ್ನು ಒದಗಿಸಬಹುದಾಗಿದೆ ಎಂದು ತಿಳಿಸಿದರು.

ಕರ್ನಾಟಕ ಕೃಷಿ ಬೆಲೆ ಆಯೋಗದ ಅಧ್ಯಕ್ಷ ಡಾ.ಅಶೋಕ್ ದಳವಾಯಿ ಮಾತನಾಡಿ, ರೈತ ಸಂತೆಯಲ್ಲಿ ಕಡಿಮೆ ದರದಲ್ಲಿ ತಾಜಾ ಕೃಷಿ ಉತ್ಪನ್ನಗಳು ನೇರವಾಗಿ ಗ್ರಾಹಕರಿಗೆ ತಲುಪಲು ಸಹಕಾರಿಯಾಗಿದೆ. ಕೃಷಿ ವಿಶ್ವವಿದ್ಯಾನಿಲಯದಲ್ಲಿ ಈ ಕಾರ್ಯಕ್ರಮದ ಆಚರಣೆಯಿಂದ ಸಂತೆಯ ವಾತಾವರಣ ಏರ್ಪಟ್ಟಿದೆ. ಸಾರ್ವಜನಿಕರು, ನಗರವಾಸಿಗಳು ಅದರಲ್ಲೂ ಮುಖ್ಯವಾಗಿ ರೈತರು ಈ ಸಂತೆಯ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಕೃಷಿ ವಿವಿಯ ಕುಲಪತಿ ಡಾ. ಎಸ್.ವಿ.ಸುರೇಶ, ವಿಶ್ವ ವಿದ್ಯಾನಿಲಯದ ವ್ಯವಸ್ಥಾಪನಾ ಮಂಡಳಿ ಸದಸ್ಯರು, ಅಧಿಕಾರಿಗಳು, ಪ್ರಾಧ್ಯಾಪಕರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.

‘ರೈತರು ಹಾಗೂ ನಗರವಾಸಿ ಗ್ರಾಹಕರಿಗೆ ಒಂದೇ ಸೂರಿನಡಿ ಮಾರುಟ್ಟೆಯನ್ನು ಕಲ್ಪಿಸುವ ನಿಟ್ಟಿನಲ್ಲಿ ಹಾಗೂ ಕೃಷಿ ವಿಶ್ವವಿದ್ಯಾನಿಲಯದ ವ್ಯಾಪ್ತಿಗೊಳಪಡುವ ವಿವಿಧ ಕೃಷಿ ಸಂಶೋಧನಾ, ವಿಸ್ತರಣೆ ಹಾಗೂ ಕೃಷಿ ಮಹಾವಿದ್ಯಾನಿಲಯಗಳಲ್ಲಿ ಉತ್ಪಾದಿಸಲಾದ ಕೃಷಿ ಉತ್ಪನ್ನಗಳು ಹಾಗೂ ಕೃಷಿ ತಂತ್ರಜ್ಞಾನ, ತಾಂತ್ರಿಕತೆಗಳನ್ನು ಪರಿಚಯ ಮಾಡಿಸಲು ಬಿತ್ತನೆ ಬೀಜಗಳು, ಸಿರಿಧಾನ್ಯಗಳ ಮೌಲ್ಯವರ್ಧಿತ ಉತ್ಪನ್ನಗಳು, ಸಾವಯವ ಉತ್ಪನ್ನಗಳು, ವಿವಿಧ ಸಸ್ಯಾಭಿವೃದ್ಧಿ ಸಾಮಗ್ರಿಗಳು, ಪ್ರಮುಖವಾಗಿ ತೋಟಗಾರಿಕಾ ಬೆಳಗಳಾದ ಹಣ್ಣುಗಳು, ಸುಗಂಧ ಮತ್ತು ಔಷಧೀಯ ಸಸ್ಯಗಳು, ಜೈವಿಕ ಗೊಬ್ಬರಗಳು, ಕೃಷಿ ಯಂತ್ರೋಪಕರಣಗಳು, ಎರೆಹುಳು ಗೊಬ್ಬರ, ಸಸ್ಯ ಸಂರಕ್ಷಣಾ ಜೈವಿಕ ಕೀಟನಾಶಕಗಳು, ಕರಕುಶಲ ವಸ್ತುಗಳು, ಅಡಿಕೆ ಉತ್ಪನ್ನಗಳು, ರೇಷ್ಮೆ ಕೃಷಿಯ ಉಪ ಉತ್ಪನ್ನಗಳು, ಆಣಬೆ ಮತ್ತು ಜೇನುಕೃಷಿ, ವಾಣಿಜೀಕರಣ ಉತ್ಪನ್ನಗಳು, ಪಶುಸಂಗೋಪನೆ, ಕೇಕ್ ಪ್ರದರ್ಶನ, ರಾಜಮುಡಿ ಅಕ್ಕಿ, ರಾಸಾಯನಿಕ ಮುಕ್ತ ಬೆಲ್ಲ ಮತ್ತು ಕೃಷಿ ಪ್ರಕಟಣೆಗಳ ಮಾರುಕಟ್ಟೆಗೆ ಅವಕಾಶ ಕಲ್ಪಿಸಲಾಗಿದೆ’

-ಡಾ.ಎಸ್.ವಿ.ಸುರೇಶ, ಕೃಷಿ ವಿವಿ, ಕುಲಪತಿ

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News