ಜಗತ್ತಿಗೆ ಮಹಾವೀರದ ಶಾಂತಿ ಸಂದೇಶ ಅವಶ್ಯ : ಸಚಿವ ಶಿವರಾಜ ತಂಗಡಗಿ

ಬೆಂಗಳೂರು : ಯುದ್ಧ ಮತ್ತು ಅಹಿಂಸೆ ಗಳಿಂದ ನಲುಗುತ್ತಿರುವ ಪ್ರಸ್ತುತ ಜಾಗತಿಕ ಸಂದರ್ಭದಲ್ಲಿ ಭಗವಾನ್ ಮಹಾವೀರರ ಶಾಂತಿ ಸಂದೇಶ ಅತ್ಯಂತ ಅವಶ್ಯ ಎಂದು ಹಿಂದುಳಿದ ವರ್ಗಗಳ ಕಲ್ಯಾಣ, ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ ತಿಳಿಸಿದ್ದಾರೆ.
ಗುರುವಾರ ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಆಯೋಜಿಸಿದ್ದ ಭಗವಾನ್ ಮಹಾವೀರರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಹಾವೀರರು, ಬುದ್ಧ, ಬಸವ, ಅಂಬೇಡ್ಕರ್ ಮಹಾತ್ಮ ಗಾಂಧಿ ಮುಂತಾದ ಮಹನೀಯರು ಜನಿಸಿದ ಭಾರತ ಇಡೀ ಜಗತ್ತಿಗೆ ಶಾಂತಿಯ ಸಂದೇಶ ಸಾರಿದ ಭೂಮಿಯಾಗಿದೆ ಎಂದರು.
ಕರ್ನಾಟಕದ ಸಾಂಸ್ಕೃತಿಕ ಪರಂಪರೆಗೆ ಜೈನರ ಕೊಡುಗೆ ಬಹಳ ದೊಡ್ಡದಿದೆ. ಅದನ್ನು ಸ್ಮರಿಸುವುದು ನಮ್ಮ ಕರ್ತವ್ಯ. ಈ ವರ್ಷ ಭಗವಾನ್ ಮಹಾವೀರ ರಾಷ್ಟ್ರೀಯ ಶಾಂತಿ ಪ್ರಶಸ್ತಿಯನ್ನು ಪಂಡಿತರತ್ನ ಎಸ್ ಶಾಂತಿರಾಜ ಶಾಸ್ತ್ರಿ ಟ್ರಸ್ಟ್ ಗೆ ಘೋಷಣೆ ಮಾಡಲಾಗಿದೆ. ಸದ್ಯದಲ್ಲಿಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ದಿನಾಂಕ ಪಡೆದು ವಿವಿಧ ಪ್ರಶಸ್ತಿಗಳ ಪ್ರದಾನ ಸಮಾರಂಭದಲ್ಲಿ ಈ ಪ್ರಶಸ್ತಿಯನ್ನು ನೀಡಲಾಗುವುದು ಎಂದು ಹೇಳಿದರು.
ಕಾಂಗ್ರೆಸ್ ಪಕ್ಷಕ್ಕೆ ಹಸ್ತದ ಚಿನ್ಹೆಯನ್ನು ನೀಡಿದ್ದು ಸಹ ಜೈನ ಮುನಿಗಳೇ, ಜೈನ ಸಮುದಾಯದ ಅಭಿವೃದ್ಧಿಗೆ ಅಗತ್ಯವಾದ ಎಲ್ಲಾ ನೆರವನ್ನು ನಮ್ಮ ಸರಕಾರ ನೀಡುತ್ತದೆ ಎಂದು ತಿಳಿಸಿದರು.
ಯೋಜನೆ ಮತ್ತು ಸಾಂಖ್ಯಿಕ ಸಚಿವ ಡಿ.ಸುಧಾಕರ್ ಮಾತನಾಡಿ, ಕಾಂಗ್ರೆಸ್ ಸರಕಾರ ಜೈನ ಸಮುದಾಯದ ಪರವಾಗಿದೆ. ಪ್ರಸಕ್ತ ವರ್ಷ 100 ಕೋಟಿ ರೂ. ಅನುದಾನವನ್ನು ಜೈನ ಸಮುದಾಯದ ಅಭಿವೃದ್ಧಿಗೆ ಬಳಸಲು ಉದ್ದೇಶಿಸಿದೆ. ಜೈನ ಬಸದಿಗಳ ಜೀರ್ಣೋದ್ಧಾರಕ್ಕೆ ನಮ್ಮ ಸರಕಾರ ಮುಂದಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸಿಂಹನಗದ್ದೆ ಜೈನಮಠ, ನರಸಿಂಹ ರಾಜಪುರದ ಸ್ವಾಮೀಜಿ ಸ್ವಸ್ತಿಶ್ರೀ ಲಕ್ಷ್ಮಿಸೇನ ಭಟ್ಟಾರಕ ಪಟ್ಟಾಚಾರ್ಯ, ರಾಜ್ಯಸಭೆ ಸದಸ್ಯ ಲೆಹರ್ ಸಿಂಗ್ ಸಿರೋಯ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕಿ ಕೆ.ಎಂ.ಗಾಯಿತ್ರಿ, ಕರ್ನಾಟಕ ಜೈನ್ ಅಸೋಸಿಯೇಷನ್ ಅಧ್ಯಕ್ಷ ಎಸ್.ಜಿತೇಂದ್ರ ಕುಮಾರ್, ಕನ್ನಡ ಸಂಸ್ಕøತಿ ಇಲಾಖೆಯ ಜಂಟಿ ನಿರ್ದೇಶಕ ಬಲವಂತರಾವ್ ಪಾಟೀಲ್, ಬನಶಂಕರಿ ಮತ್ತಿತರರು ಹಾಜರಿದ್ದರು.