ಆಡಳಿತ ಪಕ್ಷದ ಶಾಸಕರೇ ದಂಗೆ ಏಳುವ ಸ್ಥಿತಿಯಲ್ಲಿದ್ದಾರೆ : ಬಿ.ವೈ.ವಿಜಯೇಂದ್ರ

Update: 2024-11-22 16:01 GMT

ಬಿ.ವೈ.ವಿಜಯೇಂದ್ರ

ಬೆಂಗಳೂರು : ‘ಪ್ರತಿಪಕ್ಷ ಬಿಜೆಪಿ, ಆಡಳಿತಾರೂಢ ಕಾಂಗ್ರೆಸ್ ಸರಕಾರ ಉರುಳಿಸಲು ಆಸಕ್ತಿ ಹೊಂದಿಲ್ಲ. ಆದರೆ, ಅಭಿವೃದ್ಧಿ ಇಲ್ಲದ ಆಡಳಿತ ವೈಖರಿ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷದ ಶಾಸಕರೇ ಸರಕಾರದ ವಿರುದ್ಧ ದಂಗೆ ಏಳುವ ಸ್ಥಿತಿಯಲ್ಲಿದ್ದಾರೆ’ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಎಚ್ಚರಿಸಿದ್ದಾರೆ.

ಶುಕ್ರವಾರ ಹೊಸದಿಲ್ಲಿಯಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ‘ಆಡಳಿತ ಪಕ್ಷದ ಸಚಿವರು, ಶಾಸಕರಲ್ಲಿ ಸಿಎಂ ಬಗ್ಗೆ ಭರವಸೆ ಕುಸಿದುಬಿದ್ದಿದೆ. ಶಾಸಕರ ಅಸಮಾಧಾನ ಭುಗಿಲೆದ್ದಿರುವ ಸಂದರ್ಭದಲ್ಲೇ ಗೃಹ ಸಚಿವ ಡಾ.ಜಿ.ಪರಮೇಶ್ವರ್‌ರಿಗೂ ಈ ಸರಕಾರ ಬಹಳ ದಿನ ಉಳಿಯುವುದಿಲ್ಲ ಎಂದು ಅನಿಸಿದೆ. ಅದನ್ನೇ ಮೈಸೂರಿನಲ್ಲಿ ಪರಮೇಶ್ವರ್ ವ್ಯಕ್ತಪಡಿಸಿದ್ದಾರೆ’ ಎಂದು ವಿಶ್ಲೇಷಿಸಿದರು.

►ಬಡವರಿಗೆ ಬರೆ :

‘ರಾಜ್ಯದ ಕಾಂಗ್ರೆಸ್ ಸರಕಾರಕ್ಕೆ ಅರೆಬೆಂದ ಗ್ಯಾರಂಟಿಗಳನ್ನು ಜನರಿಗೆ ತಲುಪಿಸಲು ಸಾಧ್ಯವಾಗುತ್ತಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಬಡವರ ಮೇಲೆ ಪ್ರಹಾರ ಮಾಡುವುದನ್ನು ನಿಲ್ಲಿಸಬೇಕು. ಸಿದ್ದರಾಮಯ್ಯನವರು ಪ್ರಾಮಾಣಿಕರಾಗಿದ್ದರೆ ಗ್ಯಾರಂಟಿ ಯೋಜನೆಗಳನ್ನು ಈಡೇರಿಸಲು ಸಾಧ್ಯವಾಗುತ್ತಿಲ್ಲ ಎಂದು ಜನರ ಕ್ಷಮೆ ಕೇಳಬೇಕು’ ಎಂದು ವಿಜಯೇಂದ್ರ ಒತ್ತಾಯಿಸಿದರು.

‘ಬಿಪಿಎಲ್ ಕಾರ್ಡ್ ವಿಷಯದಲ್ಲಿ ಒಂದೇ ಕಲ್ಲಿಗೆ ಎರಡು ಹಕ್ಕಿ ಹೊಡೆಯುವ ಕೆಲಸವನ್ನು ಕಾಂಗ್ರೆಸ್ ಸರಕಾರ ಮಾಡುತ್ತಿದೆ. ಅನರ್ಹರ ಕಾರ್ಡ್ ಬದಲಿಸಲು ಆಕ್ಷೇಪವಿಲ್ಲ. ಆದರೆ, ರಾಜ್ಯ ಸರಕಾರವು ಸಮರ್ಪಕ ಮಾನದಂಡವೇ ಇಲ್ಲದೆ ಪ್ಯಾನ್ ಕಾರ್ಡ್, ಆದಾಯ ತೆರಿಗೆ ವಿಚಾರ ಮುಂದಿಟ್ಟುಕೊಂಡು 10ರಿಂದ 20 ಲಕ್ಷ ಬಿಪಿಎಲ್ ಕಾರ್ಡ್‌ಗಳನ್ನು ವಜಾ ಮಾಡಿದೆ ಎಂದು ಅವರು ಟೀಕಿಸಿದರು.

‘ಬಿಪಿಎಲ್ ಕಾರ್ಡಿಗೆ ಕತ್ತರಿ ಹಾಕಿದರೆ, ಗೃಹಲಕ್ಷ್ಮಿ ಹಣ ಉಳಿತಾಯ ಆಗುತ್ತದೆ. ಗೃಹಲಕ್ಷ್ಮಿ ಹಣ ಇವರಿಗೆ ಕೊಡಲು ಸಾಧ್ಯವಾಗುತ್ತಿಲ್ಲ. 5ಕೆಜಿ ಅಕ್ಕಿಗೆ ಕೊಡುವ ಹಣವೂ ಉಳಿಯಲಿದೆ. ಸಾವಿರಾರು ಕೋಟಿ ರೂ. ಉಳಿತಾಯಕ್ಕಾಗಿ ಈ ಕ್ರಮಕ್ಕೆ ಮುಂದಾಗಿದ್ದಾರೆ. ಬಿಪಿಎಲ್ ಕಾರ್ಡ್ ರದ್ದು ಮಾಡುವ ಮೂಲಕ ಸರಕಾರ ಬಡವರಿಗೆ ಬರೆ ಎಳೆಯಲು ಮುಂದಾಗಿದೆ ಎಂದು ದೂರಿದರು.

►ಕಪಟ ನಾಟಕ :

ನಬಾರ್ಡ್ನಿಂದ ಸಾಲದ ಮಿತಿ ಹೆಚ್ಚಿಸುವ ಸಂಬಂಧ ಸಿಎಂ ಸಿದ್ದರಾಮಯ್ಯ ಕಪಟ ನಾಟಕವನ್ನಾಡುತ್ತಿದ್ದಾರೆ. ಕೇಂದ್ರದಿಂದ ಬರುವ ಹಣದ ಕುರಿತು ತಪ್ಪು ಮಾಹಿತಿ ಕೊಡುತ್ತಿದ್ದಾರೆ. ಬ್ಯಾಂಕ್‌ಗಳು ಶೇ.40ರಷ್ಟು ಮೊತ್ತವನ್ನು ಆದ್ಯತಾ ವಲಯವಾದ ಕೃಷಿ ಕ್ಷೇತ್ರಕ್ಕೆ ಕೊಡುತ್ತಿರುವುದು ಅವರಿಗೆ ತಿಳಿದಿಲ್ಲವೇ?. ಎಲ್ಲ ಸತ್ಯ ಗೊತ್ತಿದ್ದರೂ ನಬಾರ್ಡ್ನಿಂದ ಅನ್ಯಾಯ ಆಗುತ್ತಿದೆ ಎಂದು ಕೇಂದ್ರದ ಮೇಲೆ ಗೂಬೆ ಕೂರಿಸುವ ಕೆಲಸ ಮಾಡುವುದು ಸರಿಯಲ್ಲ ಎಂದು ಆಕ್ಷೇಪಿಸಿದರು.

‘ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಅಧಿಕಾರ ದುರುಪಯೋಗಪಡಿಸಿಕೊಂಡು, ತನಿಖಾ ಸಂಸ್ಥೆಗಳ ಮೇಲೆ ಒತ್ತಡ ಹೇರಿ ತಮಗೆ ಬೇಕಾದ ರೀತಿಯಲ್ಲಿ ತನಿಖೆ ನಡೆಸುತ್ತಿದ್ದಾರೆ. ಇದರ ಪರಿಣಾಮವಾಗಿ ಮುಂದೆ ಮುಡಾ ಪ್ರಕರಣದಲ್ಲಿ ಕ್ಲೀನ್ಚಿಟ್ ಪಡೆಯುವ ಪ್ರಯತ್ನ ಮಾಡುತ್ತಿದ್ದಾರೆ. ಈ ಸರಕಾರಕ್ಕೆ ಬಡವರ ಮೇಲೆ ಕಾಳಜಿ ಇಲ್ಲ. ಕೇಂದ್ರ ಸರಕಾರವನ್ನು ದೂರುವುದೇ ಇವರಿಗೆ ಕಾಯಕವಾಗಿದೆ’

-ವಿಜಯೇಂದ್ರ ಬಿಜೆಪಿ ರಾಜ್ಯಾಧ್ಯಕ್ಷ

Full View

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News