ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್ ಪಾಸ್ : ಮಾರ್ಗಸೂಚಿ ಪ್ರಕಟ

Update: 2024-09-26 15:13 GMT

ಬೆಂಗಳೂರು : ಆಯವ್ಯಯದ ಘೋಷಣೆಯಂತೆ ಗ್ರಾಮೀಣ ಪತ್ರಕರ್ತರಿಗೆ ವೃತ್ತಿ ಸಂಬಂಧಿ ಚಟುವಟಿಕೆಗಳಿಗೆ ಜಿಲ್ಲಾ ವ್ಯಾಪ್ತಿಯಲ್ಲಿ ಪ್ರಯಾಣಿಸಲು ಉಚಿತ ಬಸ್ ಪಾಸ್ ನೀಡುವ ಯೋಜನೆಗೆ ಸರಕಾರವು ಅನುಮೋದನೆ ನೀಡಿದ್ದು, ಪಾಸ್ ಪಡೆಯುವ ಕುರಿತು ಮಾರ್ಗಸೂಚಿಗಳನ್ನು ಪ್ರಕಟಿಸಿದೆ.

2024ರ ಮಾರ್ಚ್ 21ರಲ್ಲಿದ್ದಂತೆ ಮಾಧ್ಯಮ ಪಟ್ಟಿಯಲ್ಲಿರುವ ಮುದ್ರಣ, ವಿದ್ಯುನ್ಮಾನ ಮಾಧ್ಯಮಗಳ ಸಂಖ್ಯೆಯನ್ನಾಧರಿಸಿ, ರಾಜ್ಯಾದ್ಯಂತ ಒಟ್ಟು 5,222 ಪತ್ರಕರ್ತರಿಗೆ ಈ ಯೋಜನೆಯನ್ನು ಒದಗಿಸಲು, ಕೆಎಸ್ಸಾರ್ಟಿಸಿ ನೀಡಿರುವ ಅಂದಾಜಿನಂತೆ, ಪ್ರತಿ ಪಾಸುದಾರರಿಗೆ ಪ್ರತಿ ತಿಂಗಳಿಗೆ 2,500 ರೂ. ಗಳಾಗಬಹುದೆಂದು ವೆಚ್ಚವನ್ನು ಅಂದಾಜಿಸಿಲಾಗಿದೆ ಎಂದು ಪ್ರಸ್ತಾವ ಸಲ್ಲಿಸಿತ್ತು.

ಈ ಲೆಕ್ಕಚಾರದಂತೆ ಪ್ರತಿ ತಿಂಗಳಿಗೆ 1,30,55,000 ರೂ.ಗಳು ಹಾಗೂ ವಾರ್ಷಿಕ ಅಂದಾಜು ಅನುದಾನ 15,66,60,000ರೂ.ಗಳ ಅವಶ್ಯಕತೆ ಇದೆ. ಯೋಜನೆಯನ್ನು ಸಾರಿಗೆ ಇಲಾಖೆಯ ಸಹಯೋಗದೊಂದಿಗೆ ಷರತ್ತುಗಳನ್ವಯ ತಕ್ಷಣದಿಂದ ಜಾರಿಗೆ ಬರುವಂತೆ ಅನುಷ್ಠಾನಗೊಳಿಸಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.

ಪಾಸ್ ಪಡೆಯಲು ಬಯಸುವ ಅರ್ಜಿದಾರರು ಪ್ರತಿನಿಧಿಸುವ ಮಾಧ್ಯಮ ಸಂಸ್ಥೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಮಾಧ್ಯಮ ಪಟ್ಟಿಯಲ್ಲಿ ಇರಬೇಕು. ಅರ್ಜಿದಾರರು ಪೂರ್ಣಾವಧಿಗೆ ನೇಮಕವಾಗಿದ್ದು, ಕನಿಷ್ಠ 4 ವರ್ಷಗಳಾಗಿರಬೇಕು. ಪೂರ್ಣಾವಧಿ ಪತ್ರಕರ್ತರಾಗಿ ಸೇವೆ ಸಲ್ಲಿಸುತ್ತಿರುವ ಬಗ್ಗೆ ನೇಮಕಾತಿ ಆದೇಶ, ವೇತನ ರಸೀದಿ/ಬ್ಯಾಂಕ್ ಸ್ಟೇಟ್‍ಮೆಂಟ್ ಅಥವಾ ಸೇವಾನುಭವಕ್ಕೆ ಸಂಬಂಧಪಟ್ಟಂತೆ ಸೂಕ್ತ ದಾಖಲೆಗಳನ್ನು ಒದಗಿಸಬೇಕು. ಯೋಜನೆಯನ್ನು ಜಿಲ್ಲಾ ವ್ಯಾಪ್ತಿಯಲ್ಲಿ ಸಂಚರಿಸುವ ಕರ್ನಾಟಕ ಸಾರಿಗೆ ವ್ಯಾಪ್ತಿಯ(ಎಕ್ಸ್‌ ಪ್ರೆಸ್ ಸೇರಿ) ಎಲ್ಲ ಬಸ್ಸುಗಳಲ್ಲಿ ಉಚಿತವಾಗಿ ಸಂಚರಿಸಲು ಸೀಮಿತಗೊಳಿಸಿದೆ.

ಯಾರಿಗೆ ಪಾಸ್ ಅವಕಾಶ ಇಲ್ಲ:

•ಸಾಮಾನ್ಯ ಮನರಂಜನಾ ಹಾಗೂ ಇತರೆ ಪ್ರಕಾರಗಳ ವಾಹಿನಿಗಳ ಪ್ರತಿನಿಧಿಗಳಿಗೆ, ನಿಯತಕಾಲಿಕೆಗಳಿಗೆ, ವಿಶೇಷ ಮಾಧ್ಯಮ ಪಟ್ಟಿಯಲ್ಲಿರುವ ಪತ್ರಿಕೆಗಳಿಗೆ ಬಸ್‍ಪಾಸ್ ನೀಡಲು ಅವಕಾಶವಿಲ್ಲ.

•ಈಗಾಗಲೇ ಮಾಧ್ಯಮ ಮಾನ್ಯತಾ ಪತ್ರ ಹಾಗೂ ಕೆಎಸ್ಸಾರ್ಟಿಸಿ ಬಸ್‍ಪಾಸ್ ಹೊಂದಿರುವ ಪತ್ರಕರ್ತರು, ಪತ್ರಕರ್ತರ ಮಾಸಾಶನ ಪಡೆಯುವ ಪತ್ರಕರ್ತರು ಬಸ್‍ಪಾಸ್ ಪಡೆಯಲು ಅರ್ಹರಾಗಿರುವುದಿಲ್ಲ.

ಪತ್ರಿಕೆ: ರಾಜ್ಯಮಟ್ಟದ ಪತ್ರಿಕೆಯ ಜಿಲ್ಲೆಗಳಲ್ಲಿ ಸಂಸ್ಥೆಯ ಮುಖ್ಯಸ್ಥರು ಸೂಚಿಸುವ ತಾಲೂಕಿಗೆ ಓರ್ವ ವರದಿಗಾರನಿಗೆ, ಜಿಲ್ಲಾಮಟ್ಟದ ಪತ್ರಿಕೆಗಳ ಜಿಲ್ಲೆಗೆ ಓರ್ವ ವರದಿಗಾರನಿಗೆ ಹಾಗೂ ಪ್ರಾದೇಶಿಕ ಪತ್ರಿಕೆಗಳ ಒಬ್ಬ ವರದಿಗಾರರು ಹಾಗೂ ಒಬ್ಬ ಛಾಯಾಗ್ರಾಹಕನಿಗೆ ನೀಡಲಾಗುತ್ತದೆ.

ಉಪಗ್ರಹ ವಾಹಿನಿ: ತಾಲೂಕು ಕೇಂದ್ರಗಳಲ್ಲಿ ಉಪಗ್ರಹ ವಾಹಿನಿಗಳ ವರದಿಗಾರರು ಮತ್ತು ಕ್ಯಾಮೆರಾಮ್ಯಾನ್ ಸೇವೆ ಸಲ್ಲಿಸುತ್ತಿದ್ದಲ್ಲಿ ಜಿಲ್ಲೆಗೆ ಓರ್ವ ವರದಿಗಾರ ಮತ್ತು ಓರ್ವ ಕ್ಯಾಮೆರಾಮ್ಯಾನ್‍ಗೆ ನೀಡಲಾಗುವುದು.

ಅರ್ಜಿ ಸಲ್ಲಿಕೆ ವಿಧಾನ: ಆಸಕ್ತ ಪತ್ರಕರ್ತರು ನಿಗದಿತ ನಮೂನೆಯಲ್ಲಿ ಅರ್ಜಿಗಳನ್ನು ಭರ್ತಿ ಮಾಡಿ, ಸಂಪಾದಕರ, ಮುಖ್ಯಸ್ಥರ ಶಿಫಾರಸಿನೊಂದಿಗೆ ಪೂರಕ ದಾಖಲೆಗಳೊಂದಿಗೆ ಅರ್ಜಿಗಳನ್ನು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ತಮ್ಮ ಕಾರ್ಯ ವ್ಯಾಪ್ತಿಯ ಜಿಲ್ಲಾ ಮಟ್ಟದ ಉಪ ನಿರ್ದೇಶಕರು, ಹಿರಿಯ ಸಹಾಯಕ ನಿರ್ದೇಶಕರು/ಸಹಾಯಕ ನಿರ್ದೇಶಕರ ಕಚೇರಿಗೆ ಸಲ್ಲಿಸಬೇಕು.

ಆಯ್ಕೆ ಸಮಿತಿಯು ಅನುಮೋದಿಸಿದ ಅರ್ಜಿದಾರರ ಮಾಹಿತಿಯನ್ನು ವಾರ್ತಾ ಇಲಾಖೆಯ ಆಯಾ ಜಿಲ್ಲೆಗಳ ವಾರ್ತಾ ಅಧಿಕಾರಿಗಳು ಸೇವಾ ಸಿಂಧು ತಂತ್ರಾಂಶದಲ್ಲಿ ಅಪ್‍ಲೋಡ್ ಮಾಡಬೇಕು. ನಂತರ ಬಾಪೂಜಿ ಸೇವಾ ಕೇಂದ್ರ, ಬೆಂಗಳೂರು ಒನ್, ಕರ್ನಾಟಕ ಒನ್ ಮತ್ತು ಗ್ರಾಮ-ಒನ್‍ಗಳ ಮೂಲಕ ಪಾಸ್‍ಗಳನ್ನು ವಿತರಿಸಲಾಗುವುದು. ಬಸ್ ಪಾಸ್‍ನ ಅವಧಿ 2 ವರ್ಷಗಳಾಗಿರುತ್ತದೆ. ಬಸ್ ಪಾಸ್‍ನ ಅವಧಿ ಪೂರ್ಣಗೊಂಡ ನಂತರ ಸಂಪಾದಕರ ಶಿಫಾರಸಿನೊಂದಿಗೆ ನವೀಕರಣಕ್ಕಾಗಿ ಅರ್ಜಿ ಸಲ್ಲಿಸಬೇಕು.

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News