ಕೆಸಿ ಜನರಲ್ ಆಸ್ಪತ್ರೆ ಅವ್ಯವಸ್ಥೆ : ದೂರಗಳ ಸುರಿಮಳೆ
ಬೆಂಗಳೂರು : ರಾಜಧಾನಿ ಬೆಂಗಳೂರಿನ ಕೆ.ಸಿ.ಜನರಲ್ ಆಸ್ಪತ್ರೆಗೆ ಕರ್ನಾಟಕ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್.ಪಾಟೀಲ್, ಉಪಲೋಕಾಯುಕ್ತ ಕೆ.ಎನ್.ಫಣೀಂದ್ರ ಹಾಗೂ ಜಸ್ಟೀಸ್ ಬಿ.ವೀರಪ್ಪ ನೇತೃತ್ವದ ನಿಯೋಗ ದಿಢೀರ್ ಭೇಟಿ ನೀಡಿದಾಗ ರೋಗಿಗಳು ಇಲ್ಲಿನ ಅವ್ಯವಸ್ಥೆ ಬಗ್ಗೆ ಅಳಲು ತೋಡಿಕೊಂಡಿದರು. ಈ ವೇಳೆ ಮಹಿಳೆಯೊಬ್ಬರು ತಮಗಾದ ಅನುಭವ ಹೇಳಿ ಕಣ್ಣೀಟ್ಟರು.
ಶುಕ್ರವಾರ ಮಲ್ಲೇಶ್ವರಂನಲ್ಲಿರುವ ಕೆ.ಸಿ.ಜನರಲ್ ಆಸ್ಪತ್ರೆಯಲ್ಲಿ ಅವ್ಯವಸ್ಥೆ, ವೈದ್ಯರ ಅಲಭ್ಯತೆ, ಔಷಧಗಳ ಕೊರತೆ, ಶುಚಿತ್ವದ ಕುರಿತು ನಿರಂತರವಾಗಿ ದೂರುಗಳು ಬಂದ ಹಿನ್ನೆಲೆಯಲ್ಲಿ ಭೇಟಿ ನೀಡಿರುವ ಶುಕ್ರವಾರ ಲೋಕಾಯುಕ್ತ ನ್ಯಾಯಮೂರ್ತಿ ನೇತೃತ್ವದ ನಿಯೋಗ, ರೋಗಿಗಳ ಅಹವಾಲು ಆಲಿಸಿದರು.
ಆಸ್ಪತ್ರೆಗೆ ಕಳೆದ ತಿಂಗಳು ತಮ್ಮ ಮಗಳನ್ನು ಹೆರಿಗೆಗೆಂದು ಕರೆತಂದಾಗ ವಾರ್ಡ್‍ನ ಸಿಬ್ಬಂದಿ ಹಣಕ್ಕಾಗಿ ಬೇಡಿಕೆಯಿಟ್ಟಿದ್ದರು. ತಾಯಿ ಕಾರ್ಡ್‍ನ್ನೇ ಕಿತ್ತಿಟ್ಟುಕೊಂಡು ಕನಿಷ್ಟ ಎಂದರೂ 500 ರೂಪಾಯಿ ಕೇಳಿದರು ಎಂದು ಲೋಕಾಯುಕ್ತ ನ್ಯಾಯಮೂರ್ತಿಗಳ ಮುಂದೆ ಮಹಿಳೆಯೊಬ್ಬರು ಕಣ್ಣೀರು ಹಾಕಿದರು.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್.ಪಾಟೀಲ್, ‘ಆಸ್ಪತ್ರೆಯಲ್ಲಿ ಸಾಕಷ್ಟು ಅವ್ಯವಸ್ಥೆಗಳಿರುವುದು ಕಂಡುಬಂದಿದ್ದು, ಅವುಗಳನ್ನು ಸರಿಪಡಿಸಬೇಕಾದ ಜವಾಬ್ದಾರಿ ವೈದ್ಯಕೀಯ ಇಲಾಖೆ, ಸೂಪರಿಂಟೆಂಡೆಂಟ್ ಹಾಗೂ ವೈದ್ಯರುಗಳ ಮೇಲಿದೆ. ಜತೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಮಾಡಲಿದ್ದೇವೆ’ ಎಂದರು.
ಆಸ್ಪತ್ರೆಯ ‘ಡಿ’ ಗ್ರೂಪ್ ಸಿಬ್ಬಂದಿ ಮತ್ತು ನರ್ಸ್ ಹಣಕ್ಕೆ ಬೇಡಿಕೆಯಿಡುತ್ತಾರೆ. ಹಣ ಕೊಡದಿದ್ದಾಗ ಚಿಕಿತ್ಸೆ ನೀಡುವುದಿಲ್ಲ ಎಂದು ರೋಗಿಗಳಿಂದ ಸಾಕಷ್ಟು ದೂರುಗಳು ಬಂದಿದ್ದವು. ರೋಗಿಯೊಬ್ಬರು ತಮ್ಮ ಸಂಬಂಧಿಯನ್ನು ಕರೆದುಕೊಂಡು ಬಂದಾಗ ಹಣಕ್ಕೆ ಬೇಡಿಕೆಯಿಟ್ಟಿದ್ದಾರೆ ಎಂದು ವೈದ್ಯರ ಸಮ್ಮುಖದಲ್ಲೇ ಆರೋಪಿಸಿದ್ದು, ಈ ಸಂಬಂಧ ಪರಿಶೀಲಿಸಿ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದರು.