ಕನ್ನಡ ಬೋಧಿಸದ ಕೇಂದ್ರ ಪಠ್ಯಕ್ರಮ ಇಲಾಖೆಗಳ ವಿರುದ್ಧ ಕ್ರಮವಹಿಸಿ : ಡಾ.ಬಿಳಿಮಲೆ

ಬೆಂಗಳೂರು : ಕನ್ನಡ ಬೋಧಿಸದ ಕೇಂದ್ರ ಪಠ್ಯಕ್ರಮ ಇಲಾಖೆಗಳ ವಿರುದ್ಧ ಕ್ರಮಕ್ಕೆ ಮುಂದಾಗಿ ಎಂದು ಶಿಕ್ಷಣ ಇಲಾಖೆಗೆ ಕನ್ನಡ ಅಭಿವೃದ್ಧಿ ಪ್ರಾಧೀಕಾರದ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆ ಆಗ್ರಹಿಸಿದ್ದಾರೆ.
ಈ ಕುರಿತಂತೆ ಶಾಲಾ ಶಿಕ್ಷಣ ಇಲಾಖೆಯ ಆಯುಕ್ತರಿಗೆ ಪತ್ರ ಬರೆದಿರುವ ಅವರು, ಕನ್ನಡ ಅಭಿವೃದ್ಧಿ ಪ್ರಾಧಿಕಾರವೇ ಅಂತಹ ಕೆಲವು ಶಾಲೆಗಳ ಪಟ್ಟಿಯನ್ನು ಒದಗಿಸಿದೆ. ಇಲಾಖಾಧಿಕಾರಿಗಳು ತನಿಖೆ ಮಾಡಿದರೆ ಸತ್ಯ ತಿಳಿಯುತ್ತದೆ ಎಂದು ಹೇಳಿದ್ದಾರೆ.
ಬೆಂಗಳೂರು ನಗರದಲ್ಲಿಯೇ ಹೆಚ್ಚು ಖಾಸಗಿ ಕೇಂದ್ರ ಪಠ್ಯಕ್ರಮದ ಶಾಲೆಗಳು ಕನ್ನಡ ಭಾಷಾ ಬೋಧನೆಯನ್ನು ಕೈಗೊಳ್ಳದಿದ್ದರೂ ಶಿಕ್ಷಣ ಇಲಾಖೆ ಈ ಶಾಲೆಗಳ ವಿರುದ್ಧ ಯಾವುದೇ ಕ್ರಮಕ್ಕೆ ಮುಂದಾಗದಿರುವುದು ವಿಷಾದನೀಯ ಎಂದು ಹೇಳಿದ್ದಾರೆ.
ಕಾಯ್ದೆ ಉಲ್ಲಂಘಿಸುವ ಶಾಲೆಗಳ ವಿರುದ್ಧ ಯಾವುದೇ ಕ್ರಮಕ್ಕೆ ಮುಂದಾಗದಿರುವ ಕನ್ನಡ ಭಾಷೆಯ ಬಗ್ಗೆ ಇಲಾಖೆ ತೋರುವ ಅಗೌರವವಷ್ಟೇ ಅಲ್ಲ ನೆಲದ ಕಾನೂನಿನ ಉಲ್ಲಂಘನೆಯೂ ಆಗಿರುತ್ತದೆ. ಈ ಬಗ್ಗೆ ಇಲಾಖೆ ಎಚ್ಚೆತ್ತುಕೊಳ್ಳಬೇಕಿದೆ ಎಂದಿದ್ದಾರೆ. ಶಿಕ್ಷಣ ಇಲಾಖೆಯ ಸಚಿವರ ಅಧ್ಯಕ್ಷತೆಯಲ್ಲಿ 2020ರಲ್ಲಿ ರಚನೆಯಾಗಿರುವ ಸಮಿತಿಯ ಸಭೆಯನ್ನು ಕೂಡಲೇ ಕರೆಯಬೇಕೆಂದು ಅವರು ಆಗ್ರಹಿಸಿದ್ದಾರೆ.