ವಿಧಾನಸಭೆಯಲ್ಲಿ ಕೋಲಾಹಲಕ್ಕೆ ಕಾರಣವಾದ ‘ಆರೆಸ್ಸೆಸ್’ : ಎರಡು ಬಾರಿ ಸದನ ಮುಂದೂಡಿಕೆ

Update: 2025-03-17 21:14 IST
ವಿಧಾನಸಭೆಯಲ್ಲಿ ಕೋಲಾಹಲಕ್ಕೆ ಕಾರಣವಾದ ‘ಆರೆಸ್ಸೆಸ್’ : ಎರಡು ಬಾರಿ ಸದನ ಮುಂದೂಡಿಕೆ
  • whatsapp icon

ಬೆಂಗಳೂರು : ರಾಜ್ಯದಲ್ಲಿನ ಕಾನೂನು ಸುವ್ಯವಸ್ಥೆ ಬಗ್ಗೆ ಮಾಹಿತಿ ನೀಡುವ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ‘ಅಪರಾಧ ಹೆಚ್ಚು ಮಾಡುವವರು ನೀವೆ?, ಆರೆಸ್ಸೆಸ್ ನವರು’ ಎಂದು ನೀಡಿದ ಹೇಳಿಕೆಯು ಬಿಜೆಪಿ ಸದಸ್ಯರನ್ನು ಕೆರಳುವಂತೆ ಮಾಡಿತು. ಇದರಿಂದಾಗಿ, ವಿಧಾನಸಭೆಯಲ್ಲಿ ಆಡಳಿತ ಹಾಗೂ ವಿಪಕ್ಷಗಳ ನಡುವಿನ ವಾಗ್ವಾದದಿಂದಾಗಿ ಕೋಲಾಹಲ ಏರ್ಪಟ್ಟಿತ್ತು.

ಸೋಮವಾರ ವಿಧಾನಸಭೆಯಲ್ಲಿ ರಾಜ್ಯಪಾಲರ ಭಾಷಣ ವಂದನಾ ನಿರ್ಣಯದ ಮೇಲಿನ ಚರ್ಚೆಗೆ ಸರಕಾರದ ವತಿಯಿಂದ ಉತ್ತರ ನೀಡುವ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆರೆಸ್ಸೆಸ್ ಕುರಿತು ನೀಡಿದ ಹೇಳಿಕೆಯಿಂದಾಗಿ ಬಿಜೆಪಿ ಸದಸ್ಯರು ಕೆಂಡಾಮಂಡಲರಾದರು. ಅಲ್ಲದೇ, ಮುಖ್ಯಮಂತ್ರಿ ತಮ್ಮ ಹೇಳಿಕೆಯನ್ನು ಹಿಂಪಡೆಯಬೇಕು. ಇಲ್ಲದಿದ್ದರೆ, ಸದನ ನಡೆಸಲು ಬಿಡುವುದಿಲ್ಲ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಪಟ್ಟು ಹಿಡಿದರು.

ಇದಕ್ಕೆ ತಿರುಗೇಟು ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಆರೆಸ್ಸೆಸ್ ನಮ್ಮ ವೈರಿಗಳು. ಗಾಂಧಿ ಹತ್ಯೆಯಾದಾಗ ಸರ್ದಾರ್ ವಲ್ಲಭಭಾಯ್ ಪಟೇಲ್ ಆರೆಸ್ಸೆಸ್ ನಿಷೇಧ ಮಾಡಿದ್ದರು. ನೀವು ಏನೇ ಮಾಡಿದರೂ ಅದನ್ನು ಎದುರಿಸಲು ನಾವು ಸಿದ್ಧವಿದ್ದೇವೆ. ಇದಕ್ಕೆಲ್ಲ ನಾವು ಹೆದರುವವರಲ್ಲ. ಕೇವಲ ಬೆಂಕಿ ಹಚ್ಚೋದೆ ನಿಮ್ಮ ಕೆಲಸ ಎಂದು ಹೇಳಿದರು.

ಈ ವೇಳೆ ಮಧ್ಯಪ್ರವೇಶಿಸಿದ ಸಚಿವ ಪ್ರಿಯಾಂಕ್ ಖರ್ಗೆ, ಇವರ ಮಕ್ಕಳು ಯಾರಾದರೂ ಆರೆಸ್ಸೆಸ್ ಶಾಖೆಗೆ ಹೋಗುತ್ತಿದ್ದಾರಾ? ಉತ್ತರ ನೀಡಲಿ. ಇವರ ಮಕ್ಕಳು ಮಾತ್ರ ಉತ್ತಮ ಶಿಕ್ಷಣ ಪಡೆಯಬೇಕು. ಬಡವರ ಮಕ್ಕಳು ಇವರ ಶಾಖೆಗಳಿಗೆ ಹೋಗಿ ಜೀವ ಹಾಳು ಮಾಡಿಕೊಳ್ಳಬೇಕು ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಬಿಜೆಪಿ ಸದಸ್ಯ ಸುನೀಲ್ ಕುಮಾರ್, ನಿಮ್ಮ ಮಕ್ಕಳಿಗೆ ನಮ್ಮ ಶಾಖೆಗೆ ಬರುವ ಯೋಗ್ಯತೆಯಿಲ್ಲ ಎಂದರು.

ಇದಕ್ಕೆ ತಿರುಗೇಟು ನೀಡಿದ ಪ್ರಿಯಾಂಕ್ ಖರ್ಗೆ, ನಮ್ಮ ಮಕ್ಕಳು ಸತ್ತರೂ ಆರೆಸ್ಸೆಸ್ ಶಾಖೆಗೆ ಸೇರುವುದಿಲ್ಲ. ಕ್ವಿಟ್ ಇಂಡಿಯಾ ಚಳವಳಿ, ದುಂಡು ಮೇಜಿನ ಸಭೆ, ಸ್ವಾತಂತ್ರ್ಯ ಹೋರಾಟ ನಡೆಯುವಾಗ ಆರೆಸ್ಸೆಸ್‍ನವರು ಎಲ್ಲಿ ಹೋಗಿದ್ದರು? ಎಂದು ಪ್ರಶ್ನಿಸಿದರು.

ನಿಮಗೆ ಗಲಾಟೆ ಮಾಡಿ ಎಂದು ಹೇಳಿಕೊಟ್ಟವರು ಯಾರು ಎಂದು ನನಗೆ ಗೊತ್ತಿದೆ. ನೀವೆಲ್ಲ ಆರೆಸ್ಸೆಸ್‍ನವರ ಸುಮ್ಮನೆ ಕುಳಿತುಕೊಳ್ಳಿ ಎಂದು ಕೆಲ ಬಿಜೆಪಿ ಶಾಸಕರಿಗೆ ಸಿದ್ದರಾಮಯ್ಯ ತಿರುಗೇಟು ನೀಡಿದರು. ಇದರಿಂದ ಮತ್ತಷ್ಟು ಕೆರಳಿದ ಬಿಜೆಪಿ ಶಾಸಕರು, ದೇಶದ್ರೋಹ ಚಟುವಟಿಕೆ ಮಾಡುವ ಪಿಎಫ್‍ಐ ಸಂಘಟನೆ ಮೇಲಿನ ಪ್ರಕರಣವನ್ನು ಹಿಂಪಡೆದವರು ಕಾಂಗ್ರೆಸ್‍ನವರು ಎಂದು ಹೇಳಿ, ಆರೆಸ್ಸೆಸ್ ಪರ ಘೋಷಣೆಗಳನ್ನು ಕೂಗಿದರು.

ಈ ವೇಳೆ ಸ್ಪೀಕರ್ ಪೀಠದಲ್ಲಿದ್ದ ಶಿವಲಿಂಗೇಗೌಡ ಸದನವನ್ನು 10 ನಿಮಿಷಗಳ ಕಾಲ ಮುಂದೂಡಿದರು. ಪುನಃ ಸದನ ಸೇರುತ್ತಿದ್ದಂತೆ ಕಾಂಗ್ರೆಸ್ ಪಕ್ಷದ ಕೆಲ ಸದಸ್ಯರು ರಾಷ್ಟ್ರಧ್ವಜ ಹಿಡಿದುಕೊಂಡು ಬಂದು ಪ್ರದರ್ಶನ ಮಾಡಿದರು. ಈ ವೇಳೆ ಕಾಂಗ್ರೆಸ್ ಸದಸ್ಯರು ರಾಷ್ಟ್ರಧ್ವಜಕ್ಕೆ ಅವಮಾನ ಮಾಡುತ್ತಿದ್ದಾರೆ ಎಂದು ಬಿಜೆಪಿ ಸದಸ್ಯ ಅಶ್ವತ್ಥ ನಾರಾಯಣ ಆಕ್ಷೇಪ ವ್ಯಕ್ತಪಡಿಸಿ, ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.

ನಾನೂ ಆರೆಸ್ಸೆಸ್, ಪ್ರಧಾನಿ, ಕೇಂದ್ರ ಗೃಹ ಸಚಿವ ಆರೆಸ್ಸೆಸ್‍ನವರು. ನಿಮ್ಮನ್ನು ಪಾಕಿಸ್ತಾನದ ಏಜೆಂಟ್, ಭಯೋತ್ಪಾದಕರ ಬೆಂಬಲಿಗರು ಎಂದು ಕರೆಯೋಣವೇ? ನಿಮ್ಮಿಂದ ಪಾಠ ಕಲಿಯುವ ಅಗತ್ಯವಿಲ್ಲ. ನೀವು ಅಧಿಕಾರಕ್ಕಾಗಿ ದೇಶ ಒಡೆದವರು, ಆರೆಸ್ಸೆಸ್ ದೇಶ ಕಟ್ಟುವ ಸಂಸ್ಥೆ. ಮುಖ್ಯಮಂತ್ರಿ ಆಡಿರುವ ಮಾತನ್ನು ಕಡತದಿಂದ ತೆಗೆಯಬೇಕು ಎಂದು ಅಶೋಕ್ ಆಗ್ರಹಿಸಿದರು.

ಸಂವಿಧಾನಕ್ಕಿಂತ ದೊಡ್ಡ ಸಂಸ್ಥೆಯೇ ಆರೆಸ್ಸೆಸ್? ಕಾನೂನು ವ್ಯಾಪ್ತಿಗೆ ಅದು ಬರುವುದಿಲ್ಲವೇ? ಅದರ ಬಗ್ಗೆ ಇಲ್ಲಿ ಚರ್ಚೆ ಮಾಡಬಾರದೆ? ಎಂದು ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಆರ್.ಅಶೋಕ್, ಆರೆಸ್ಸೆಸ್ ಬಗ್ಗೆ ಧಮ್ ಇದ್ದರೆ ಹೊರಗೆ ಮಾತನಾಡಿ, ಇಲ್ಲಿ ಸದನದ ರಕ್ಷಣೆ ಯಾಕೆ ಪಡೆಯುತ್ತಿದ್ದೀರಿ ಎಂದರು. ಸುನೀಲ್ ಕುಮಾರ್ ಮಾತನಾಡಿ, ರಾಹುಲ್ ಗಾಂಧಿ, ಸೋನಿಯಾ ಗಾಂಧಿಯನ್ನು ಚೀನಾ ಹಾಗೂ ಪಾಕಿಸ್ತಾನದ ಏಜೆಂಟ್ ಗಳೆಂದು ಕರೆಯುತ್ತೇವೆ. ಅದನ್ನು ಒಪ್ಪಿಕೊಳ್ಳಿ ಎಂದು ಕಿಚಾಯಿಸಿದರು.

ಇದಕ್ಕೆ ತಿರುಗೇಟು ನೀಡಿದ ಪ್ರಿಯಾಂಕ್ ಖರ್ಗೆ, ಪ್ರಧಾನಿ ನರೇಂದ್ರ ಮೋದಿ, ಪಾಕಿಸ್ತಾನದ ಮಾಜಿ ಪ್ರಧಾನಿ ನವಾಝ್ ಶರೀಫ್ ನಿವಾಸಕ್ಕೆ ಭೇಟಿ ನೀಡಿದ್ದ ಭಾವಚಿತ್ರ ಪ್ರದರ್ಶಿಸಿ, ಆಹ್ವಾನ ಇಲ್ಲದೆಯೇ ಪಾಕಿಸ್ತಾನಕ್ಕೆ ಹೋಗಿ ಬಿರಿಯಾನಿ ತಿಂದು ಬಂದಿದ್ದು ಯಾರು? ಎಂದು ಪ್ರಶ್ನಿಸಿದರು. ಅದಕ್ಕೆ ಪ್ರತಿಯಾಗಿ ಬಿಜೆಪಿ ಸದಸ್ಯರು ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ಯಾಸಿರ್ ಮಲಿಕ್ ಹಸ್ತಲಾಘವ ಮಾಡುತ್ತಿರುವ ಫೋಟೋ ಹಿಡಿದು ಘೋಷಣೆಗಳನ್ನು ಕೂಗುತ್ತಿದ್ದರು.

ಈ ವೇಳೆ ಮಧ್ಯಪ್ರವೇಶ ಮಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ನಾನು ಯಾವುದೇ ಅಸಂಸದೀಯ ಪದ ಬಳಕೆ ಮಾಡಿಲ್ಲ. ಆದುದರಿಂದ ನನ್ನ ಮಾತನ್ನು ಹಿಂಪಡೆಯುವುದಿಲ್ಲ ಎಂದರು. ಈ ವೇಳೆ ಕಾಂಗ್ರೆಸ್ ಸದಸ್ಯ ಪಿ.ಎಂ.ನರೇಂದ್ರ ಸ್ವಾಮಿ ಹಾಗೂ ಬಿಜೆಪಿ ಸದಸ್ಯ ಬೈರತಿ ಬಸವರಾಜ ನಡುವೆ ಪರಸ್ಪರ ವಾಗ್ವಾದ ನಡೆಯಿತು.

ಅಲ್ಲದೇ, ವಿಪಕ್ಷದ ಸದಸ್ಯರು ಸದನದಲ್ಲಿ ನಡೆಯುತ್ತಿರುವ ಕಲಾಪವನ್ನು ಮೊಬೈಲ್‍ನಲ್ಲಿ ಚಿತ್ರೀಕರಿಸುತ್ತಿದ್ದಾರೆ ಎಂದು ಕಾಂಗ್ರೆಸ್ ಸದಸ್ಯರಾದ ನರೇಂದ್ರಸ್ವಾಮಿ ಹಾಗೂ ವಿಜಯಾನಂದ ಕಾಶಪ್ಪನವರ್ ದೂರಿದರು. ಇದಕ್ಕೆ ಪ್ರತಿಕ್ರಿಯಿಸಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ್, ಸದಸ್ಯರೊಬ್ಬರು ವಿಡಿಯೋ ರೆಕಾರ್ಡಿಂಗ್ ಮಾಡುತ್ತಿದ್ದಾರೆ ಎಂಬ ಆಪಾದನೆ ಬಂದಿದೆ. ಯಾರು ಅದನ್ನು ಮಾಡುತ್ತಿದ್ದಾರೋ ಅವರ ಹೆಸರು ಉಲ್ಲೇಖಿಸಿ, ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸ್ಪೀಕರ್‍ಗೆ ಆಗ್ರಹಿಸಿದರು.

ಈ ವೇಳೆ ಸದನದಲ್ಲಿ ಆಡಳಿತ ಮತ್ತು ವಿಪಕ್ಷ ಸದಸ್ಯರ ನಡುವೆ ಪರಸ್ಪರ ವಾಗ್ವಾದ ಏರ್ಪಡಿತ್ತು. ಪುನಃ 10 ನಿಮಿಷಗಳ ಕಾಲ ಸದನವನ್ನು ಸ್ಪೀಕರ್ ಪೀಠದಲ್ಲಿದ್ದ ಶಿವಲಿಂಗೇಗೌಡ ಮುಂದೂಡಿದರು.

ಆನಂತರ, ಸ್ಪೀಕರ್ ಯು.ಟಿ.ಖಾದರ್ ಸಮ್ಮುಖದಲ್ಲಿ ಆಡಳಿತ ಹಾಗೂ ವಿಪಕ್ಷಗಳ ನಡುವೆ ಸಂಧಾನ ಸಭೆ ನಡೆಸಲಾಯಿತು. ಸದನದ ಕಲಾಪ ಪುನಃ ಆರಂಭವಾಗುತ್ತಿದ್ದಂತೆ ಸ್ಪೀಕರ್ ಯು.ಟಿ.ಖಾದರ್, ಸದನದಲ್ಲಿ ಚರ್ಚೆ ವೇಳೆ ಕೆಲವು ಸಂಸದೀಯ, ಅಸಂಸದೀಯ ಪದಗಳ ಬಳಕೆ ಆಡಳಿತ ಹಾಗೂ ವಿಪಕ್ಷಗಳ ಕಡೆಯಿಂದ ಆಗಿದೆ. ಕೆಲವರಿಗೆ ನೋವು ಆಗುವಂತಹ ವಿಚಾರಗಳು ಪ್ರಸ್ತಾವ ಆಗಿದೆ. ಒಂದೆಡೆ ಆರೆಸ್ಸೆಸ್‍ನವರೇ ಅಪರಾಧ ಮಾಡುವವರು ಎಂಬ ಪದ ಬಳಕೆ ಹಾಗೂ ಪಾಕಿಸ್ತಾನಕ್ಕೆ ಬೆಂಬಲ ನೀಡುವವರು ಎಂದು ಟೀಕಿಸಿರುವುದು, ಏಕ ವಚನ ಪ್ರಯೋಗ ಆಗಿರುವುದನ್ನು ಕಡತದಿಂದ ತೆಗೆಸುತ್ತೇನೆ ಎಂದು ರೂಲಿಂಗ್ ನೀಡಿದ ನಂತರ ಸದನ ಮುಂದುವರೆಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News