ಶ್ರೀಘ್ರದಲ್ಲೇ ಒಳಮೀಸಲಾತಿ ಜಾರಿಗೊಳಿಸಿ: ಮಾದಿಗ ಸಮುದಾಯದ ಸ್ವಾಭಿಮಾನದ ಒಕ್ಕೂಟ ಆಗ್ರಹ

Update: 2025-03-19 22:42 IST
ಶ್ರೀಘ್ರದಲ್ಲೇ ಒಳಮೀಸಲಾತಿ ಜಾರಿಗೊಳಿಸಿ: ಮಾದಿಗ ಸಮುದಾಯದ ಸ್ವಾಭಿಮಾನದ ಒಕ್ಕೂಟ ಆಗ್ರಹ
  • whatsapp icon

ಬೆಂಗಳೂರು: ಸುಪ್ರೀಂ ಕೋರ್ಟ್ ಆದೇಶದಂತೆ ಸರಕಾರದಲ್ಲಿ ಲಭ್ಯವಿರುವ ದತ್ತಾಂಶಗಳನ್ನು ಪರಿಗಣಿಸಿ, ವಿಳಂಭ ನೀತಿ ಅನುಸರಿಸದೇ ಒಳಮೀಸಲಾತಿ ಜಾರಿಗೊಳಿಸುವಂತೆ ಆಗ್ರಹಿಸಿ, ನಗರದ ಫ್ರೀಡಂ ಪಾರ್ಕ್‍ನಲ್ಲಿ ಒಳಮೀಸಲಾತಿಗಾಗಿ ಮಾದಿಗ ಸಮುದಾಯದ ಸ್ವಾಭಿಮಾನದ ಒಕ್ಕೂಟದ ನೇತೃತ್ವದಲ್ಲಿ ಧರಣಿ ನಡೆಸಲಾಯಿತು.

ನ್ಯಾ.ಸದಾಶಿವ ಆಯೋಗದ ವರದಿ ಮತ್ತು ಒಳಮೀಸಲಾತಿ ವರ್ಗೀಕರಣದ ಶಿಫಾರಸ್ಸುಗಳನ್ನು ಸಚಿವ ಸಂಪುಟದಲ್ಲಿ ಅಧಿಕೃತಗೊಳಿಸಿ ಹೆಚ್ಚಳವಾಗಿರುವ ಮೀಸಲಾತಿಯ ಶೇ.17ರ ಅನುಪಾತದಲ್ಲಿ ಹೆಚ್ಚುವರಿ ಶೇ.2ರಷ್ಟು ಮೀಸಲಾತಿ ಮಿತಿಯನ್ನು ಜಾತಿ ಜನಸಂಖ್ಯೆಗೆ ಅನುಗುಣವಾಗಿ ಮಾದಿಗ ಮತ್ತು ಸಂಬಂಧಿತ ಜಾತಿಗಳಿಗೆ ಶೇ.7ರಷ್ಟು ಮೀಸಲಾತಿಯನ್ನು ನಿಗಧಿಪಡಿಸಿ ಎಂದು ಧರಣಿನಿರತರು ಆಗ್ರಹಿಸಿದರು.

ಸಚಿವ ಸಂಪುಟವು ನಿರ್ಣಯಿಸಿದಂತೆ ಒಳಮೀಸಲಾತಿ ಜಾರಿಯಾಗುವವರೆಗೂ ಸುಮಾರು 37ಸಾವಿರ ಸರಕಾರಿ ಹುದ್ದೆಗಳ ನೇಮಕಾತಿಯನ್ನು ತಡೆಹಿಡಿಯಬೇಕು. ಸರಕಾರ ತುರ್ತಾಗಿ ಪರಿಶಿಷ್ಟ ಜಾತಿಗಳಾದ ಆದಿ ಕರ್ನಾಟಕ, ಆದಿ ದ್ರಾವಿಡ, ಮತ್ತು ಆದಿ ಆಂದ್ರ ಜಾತಿಗಳಿಗೆ ಸಂಬಂಧಪಟ್ಟ 13 ಜಿಲ್ಲೆಗಳ ಸಮೀಕ್ಷೆಗೆ ಕೂಡಲೇ ದಿನಾಂಕವನ್ನು ನಿಗದಿಪಡಿಸಿ, ನಿಖರವಾದ ದತ್ತಾಂಶಗಳನ್ನು ಸಂಗ್ರಹಿಸಿ ಒಳಮೀಸಲಾತಿ ಪ್ರಕ್ರಿಯೆಗೆ ಚಾಲನೆ ಕೊಡಬೇಕು. ಅಥವಾ ಮಧ್ಯಂತರ ವರದಿ ನೀಡಿ ಮಾದಿಗ ಸಮುದಾಯಕ್ಕೆ ಪ್ರತ್ಯೇಕ ಮೀಸಲಾತಿ ನೀಡಬೇಕು ಎಂದು ಒತ್ತಾಯಿಸಿದರು.

49 ಅಲೆಮಾರಿ ಜಾತಿಗಳನ್ನು ಪ್ರತ್ಯೇಕವಾಗಿ ಗುರುತಿಸಿ, ಶೇ.1ಕ್ಕಿಂತ ಹೆಚ್ಚು ಒಳಮೀಸಲಾತಿಯನ್ನು ನೀಡಿ ಅಭಿವೃದ್ಧಿ ನಿಗಮದಲ್ಲಿ ವಿಶೇಷ ಪ್ಯಾಕೇಜ್ ಘೋಷಿಸಬೇಕು. ಮತ್ತು ಅಲೆಮಾರಿಗಳಿಗೆ ನ್ಯಾಯ ಒದಗಿಸಲು ಪ್ರತ್ಯೇಕ ಅಲೆಮಾರಿ ಆಯೋಗವನ್ನು ರಚನೆ ಮಾಡಬೇಕು ಎಂದು ಆಗ್ರಹಿಸಿದರು.

ಸಮಾಜ ಕಲ್ಯಾಣ ಇಲಾಕೆ ಬಜೆಟ್‍ನಲ್ಲಿ ಮತ್ತು ಎಸ್‍ಸಿಎಸ್‍ಪಿ, ಟಿಎಸ್‍ಪಿ ಅನುದಾನದಲ್ಲಿ ಜನಸಂಖ್ಯೆ ಆಧಾರದಲ್ಲಿ ಮೀಸಲಿಟ್ಟು ಅದೇ ವರ್ಷ ಖರ್ಚು ಮಾಡಲು ಕ್ರಮವಹಿಸಬೇಕು. ನ್ಯಾ.ಕಾಂತರಾಜು ಆಯೋಗದ ವರದಿಯನ್ನು ಕೂಡಲೇ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.

ಇದೇ ವೇಳೆ ಧರಣಿ ಸ್ಥಳಕ್ಕೆ ಭೇಟಿ ನೀಡಿದ ಅಬಕಾರಿ ಸಚಿವ ಆರ್.ಬಿ.ತಿಮ್ಮಾಪೂರ ಮನವಿ ಸ್ವೀಕರಿಸಿದರು.

ಧರಣಿಯಲ್ಲಿ ಬಿಎಸ್‍ಪಿ ರಾಜ್ಯಾಧ್ಯಕ್ಷ ಮಾರಸಂದ್ರ ಮುನಿಯಪ್ಪ, ಆರ್‍ಪಿಐ ರಾಷ್ಟ್ರೀಯ ಅಧ್ಯಕ್ಷ ಎನ್.ಮೂರ್ತಿ, ಬಿಎಸ್‍ಪಿ ರಾಷ್ಟ್ರೀಯ ಸಂಯೋಜಕ ಎಂ.ಗೋಪಿನಾಥ್, ಮಾದಿಗ ಮೀಸಲಾತಿ ಹೋರಾಟ ಸಮಿತಿಯ ಕಾರ್ಯಾಧ್ಯಕ್ಷ ಕೇಶವಮೂರ್ತಿ, ರಾಜ್ಯಾಧ್ಯಕ್ಷ ಶಿವರಾಜ ಅಕ್ಕರಕಿ, ಕರ್ನಾಟಕ ಬಹುಜನ ಚಳವಳಿ ರಾಜ್ಯಾಧ್ಯಕ್ಷ ಕನಕೇನಹಳ್ಳಿ ಕೃಷ್ಣಪ್ಪ, ಬಿಎಸ್‍ಪಿ ರಾಜ್ಯ ಸಂಯೋಜಕ ಆರ್.ಮುನಿಯಪ್ಪ, ನಿವೃತ್ತ ಐಆರ್‍ಎಸ್ ಅಧಿಕಾರಿ ಎಚ್.ಆರ್.ಭೀಮಾಶಂಕರ್ ಮತ್ತಿತರರು ಹಾಜರಿದ್ದರು.


Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News