ಸರಕಾರಿ ಕಟ್ಟಡದಲ್ಲಿ ಹುಟ್ಟುಹಬ್ಬ ಆಚರಣೆ: ಐವರು ಅಧಿಕಾರಿಗಳು ಸೇವೆಯಿಂದ ಅಮಾನತು

ಬೆಂಗಳೂರು : ಹೈಕೋರ್ಟ್‍ನ ಲೋಕೋಪಯೋಗಿ ಇಲಾಖೆ ವಿಶೇಷ ಕಟ್ಟಡಗಳ ಉಪವಿಭಾಗದಲ್ಲಿ ನಿಯಮ ಮೀರಿ ಹುಟ್ಟುಹಬ್ಬ ಆಚರಣೆ ಮಾಡಿಕೊಂಡಿರುವ ಪ್ರಕರಣದಡಿ ಅಧಿಕಾರಿಗಳಾದ ಜಿ.ಎಚ್. ಚಿಕ್ಕೇಗೌಡ, ಲಾವಣ್ಯ, ಮೀನಾ, ನವೀನ್ ಮತ್ತು ಅಮೀನ್ ಎಸ್. ಆನದಿನ್ನಿ ಎಂಬುವರನ್ನು ಸೇವೆಯಿಂದ ಅಮಾನತುಗೊಳಿಸಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ.
ಹೈಕೋರ್ಟ್‍ನ ಸರಕಾರಿ ಕಟ್ಟಡದಲ್ಲಿ ನಿಯಮ ಬಾಹಿರವಾಗಿ ಹುಟ್ಟುಹಬ್ಬವನ್ನು ಆಚರಿಸಿರುವುದು ತನಿಖೆಯಿಂದ ಕಂಡುಬಂದಿರುವ ಹಿನ್ನೆಲೆಯಲ್ಲಿ ಐವರು ಅಧಿಕಾರಿಗಳ ವಿರುದ್ಧ ಆರೋಪಗಳಿಗೆ ಸಂಬಂಧಿಸಿದಂತೆ ಇಲಾಖಾ ವಿಚಾರಣೆಯನ್ನು ಬಾಕಿಯಿರಿಸಿ ಕರ್ನಾಟಕ ನಾಗರಿಕ ಸೇವಾ ನಿಯಮಗಳಡಿ ಸೇವೆಯಿಂದ ಅಮಾನತು ಮಾಡಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಅಮಾನತಿನ ಅವಧಿಯಲ್ಲಿ ಆರೋಪಿತರು ಸಕ್ಷಮ ಪ್ರಾಧಿಕಾರದ ಅನುಮತಿಯಿಲ್ಲದೆ ಕೇಂದ್ರ ಸ್ಥಾನವನ್ನು ಬಿಡುವಂತಿಲ್ಲ. ಜೀವನಾಧಾರ ಭತ್ಯೆಗೆ ಅರ್ಹರಿರುತ್ತಾರೆ ಎಂದು ಆದೇಶದಲ್ಲಿ ಹೇಳಲಾಗಿದೆ.
ಐವರು ಆರೋಪಿತ ಅಧಿಕಾರಿಗಳು ಮೇಲಾಧಿಕಾರಿಗಳ ಗಮನಕ್ಕೆ ತರದೇ ಸಿಸಿ ಕ್ಯಾಮೆರಾ ಸ್ವಿಚ್ ಆಫ್ ಮಾಡಿ ಹುಟ್ಟುಹಬ್ಬವನ್ನು ಆಚರಿಸಿದ್ದು, ಭದ್ರತಾ ಲೋಪ ಮತ್ತು ಕರ್ತವ್ಯ ಲೋಪ ಎಸಗಿರುವುದು ತನಿಖೆಯಲ್ಲಿ ಸಾಬೀತಾಗಿದೆ ಎಂದು ಲೋಕೋಪಯೋಗಿ ಇಲಾಖೆಯ ಸರಕಾರದ ಅಧೀನ ಕಾರ್ಯದರ್ಶಿ ಎ.ಹನುಮಂತರಾಜು ಆದೇಶದಲ್ಲಿ ಉಲ್ಲೇಖಿಸಿದ್ದಾರೆ.